ಮಂಗಳೂರಿನಲ್ಲಿ ನಡೆಯುವ ಅಕ್ರಮಗಳ ಮಾಹಿತಿ ಕಲೆಹಾಕಿ, ತನ್ನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಎಸಿಪಿ ಬಂದ ಎರಡೇ ದಿನಕ್ಕೆ ಎತ್ತಂಗಡಿ!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು ಎಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತುಂಬಾ ಖುಷಿಯಿಂದ ಇಲ್ಲಿಗೆ ಸೇವೆಗೆ ಹಾಜರಾಗುತ್ತಾರೆ. ಆದರೆ ಇಲ್ಲಿಯ ಕೆಲ ರಾಜಕಾರಣಿಗಳು, ಮರಳು ಮಾಫಿಯ ಗಳ ಪುಡಾರಿಗಳ ಕೈವಾಡದಿಂದಾಗಿ ನಿಷ್ಠೆಯಿಂದ ಕರ್ತವ್ಯ ಮಾಡಲು ತೆರಳಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಬಂದ ಕೂಡಲೇ ಟ್ರಾನ್ಸ್ಫರ್ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಹೌದು.ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದ್ದು ಇದಕ್ಕೆಲ್ಲಾ ಪ್ರತ್ಯಕ್ಷ ಸಾಕ್ಷಿ ಎಂಬಂತೆ ವರ್ಗಾವಣೆಯ ವಿಚಾರವೊಂದು ಎಲ್ಲೆಡೆ ಭಾರೀ ಸುದ್ದಿಯಲ್ಲಿದೆ.ಗುಲ್ಬರ್ಗ ಎಎಸ್ಪಿ ಹುದ್ದೆಯಿಂದ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ಯಾಗಿ ಕರ್ತವ್ಯಕ್ಕೆ ಹಾಜರಾದ ಐಪಿಎಸ್ ದೀಪನ್ ಎಂ.ಎನ್ ಅವರನ್ನು ಎರಡೇ ದಿನದಲ್ಲಿ ಎತ್ತಂಗಡಿ ಮಾಡಿ ಆದೇಶಿಸಿದ್ದು, ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯ, ಹಾಗೂ ಇನ್ನಿತರ ದಂಧೆಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದೇ ಅವರ ವರ್ಗಾವಣೆಗೆ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದಿವೆ.
ದಕ್ಷಿಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಉಳ್ಳಾಲ, ಕೊಣಾಜೆ, ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ಬಾಕ್ಸಟ್ ಮಣ್ಣು ಮಾಫಿಯ ಮುಂತಾದ ಹಲವು ಅಕ್ರಮ ದಂಧೆಗಳ ಬಗೆಗೆ ತಾನು ಮಂಗಳೂರಿಗೆ ಬರುವ ಮೊದಲೇ ಮಾಹಿತಿ ಕಲೆ ಹಾಕಿಕೊಂಡಿದ್ದ ದೀಪನ್, ಇಲ್ಲಿ ಕರ್ತವ್ಯಕ್ಕೆ ಹಾಜರಾದ ಕೂಡಲೇ ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ ಗಳನ್ನು ಕರೆದು ಇದೆಲ್ಲದಕ್ಕೂ ಬ್ರೇಕ್ ಹಾಕಬೇಕು, ಎಲ್ಲಾ ವಿಚಾರದ ಬಗೆಗೂ ಮಾಹಿತಿ ಇದೆ, ಎಲ್ಲವೂ ನನ್ನ ಗಮನಕ್ಕೆ ಬಂದಿದೆ, ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಮಾಫಿಯ ಗಳನ್ನು ಮಟ್ಟಹಾಕಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದರು.
ಅದಲ್ಲದೇ ಉಳ್ಳಾಲದ ಸಮುದ್ರ ದಂಡೆಯಿಂದ ಹಗಲು ರಾತ್ರಿ ಮರಳು ಸಾಗಾಟಕ್ಕೆ ಕೊಣಾಜೆ ಹಾಗೂ ಉಳ್ಳಾಲ ಪೊಲೀಸರು ಸಾಥ್ ನೀಡುತ್ತಿದ್ದು ಇದಕ್ಕೂ ಬ್ರೇಕ್ ಬೀಳಬೇಕು.ಈ ಬಗ್ಗೆ ಉಳ್ಳಾಲ ಎಸ್ಐ ಪ್ರದೀಪ್ ಅವರನ್ನು ಪ್ರಶ್ನಿಸಿದ್ದ ದೀಪನ್, ನನ್ನ ಅಧಿಕಾರದ ಅವಧಿಯಲ್ಲಿ ಇಂತಹ ಅಕ್ರಮಗಳಿಗೆ ಅವಕಾಶವಿಲ್ಲ, ಅಂತಹ ಕರ್ತವ್ಯ ಲೋಪ ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ,ಎಲ್ಲಾ ಪೆಂಡಿಂಗ್ ಕೇಸ್ ಗಳನ್ನು ಕೂಡಲೇ ಮುಗಿಸಿ ವರದಿ ನೀಡಬೇಕು ಎಂದು ಆದೇಶ ಮಾಡಿದ್ದರು.
ಮೀಟಿಂಗ್ ಮುಗಿದ ಬಳಿಕ ದೀಪನ್ ಅವರಿಗೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿದೆ. ನಿಷ್ಠಾವಂತ ಅಧಿಕಾರಿಯಾದ ದೀಪನ್ ಅವರನ್ನು ಮತ್ತೆ ಬಂದ ಜಾಗಕ್ಕೆ ವರ್ಗಾವಣೆ ಮಾಡಿ ಅದೇಶಿಸಲಾಗಿದ್ದು, ಗುಲ್ಬರ್ಗ ನಗರ ಎಎಸ್ಪಿ ಹುದ್ದೆಯಲ್ಲಿಯೇ ಮುಂದುವರಿಯಲು ಸೂಚಿಸಲಾಗಿದೆ. ಖಾಲಿಯಾದ ಹುದ್ದೆಗೆ ಬಕಪಕ್ಷಿಯಂತೆ ಕಾಯುತಿದ್ದ ಡಿವೈಎಸ್ಪಿ ದರ್ಜೆಯ ದಿನಕರ ಶೆಟ್ಟಿ ಯನ್ನು ಎಸಿಪಿ ಯಾಗಿ ನೇಮಕ ಮಾಡಲಾಗಿದ್ದು, ದಕ್ಷಿಣ ಎಸಿಪಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ದಿನಕರ ಶೆಟ್ಟಿ ಅವರಿಗೆ ಹೊಸ ದಾರಿ ತೋರಿಸಲಾಗಿದೆ.
ಒಟ್ಟಿನಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆ ಸೂಕ್ತವಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲಾ ಅಕ್ರಮಗಳಲ್ಲೂ ಪೊಲೀಸರ ಪಾತ್ರವಿದ್ದು, ಪೊಲೀಸರನ್ನು ದಲ್ಲಾಳಿಗಳು, ರಾಜಕಾರಣಿಗಳು ಹಣದ ಆಮಿಷವೊಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಇಂತಹ ದುಷ್ಟರಿಗೆ ಸಿಂಹ ಸ್ವಪ್ನವಾಗಿ ಕಾಡುವ ಬೆರಳೆಣಿಕೆಯಷ್ಟು ಉತ್ತಮ ಅಧಿಕಾರಿಗಳನ್ನು ಪೊಲಿಟಿಕಲ್ ಪವರ್ ಬಳಸಿಕೊಂಡು ಎತ್ತಂಗಡಿ ಮಾಡಿಸಿ, ತಮಗೆ ಅನುಕೂಲ ಮಾಡಿಕೊಡುವ ಎಂಜಲು ಕಾಸಿನ ಆಸೆಗೆ ಬಲಿಯಾಗುವ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.