ಹಿಂದೂ-ಮುಸ್ಲಿಂ ಧರ್ಮಗಳ ನಡುವಿನ ದ್ವೇಷ-ಹಿಂಸೆಯ ನಡುವೆ ನಿನ್ನೆಯ ದಿನ ಆ ಗ್ರಾಮ ಸೌಹಾರ್ದತೆಗೆ ಸಾಕ್ಷಿಯಾಗಿತ್ತು!!
ಹಿಂದೂ ಮುಸ್ಲಿಂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ ಮುಂತಾದವುಗಳ ನಡುವೆ ನಿನ್ನೆಯ ದಿನ ಅಲ್ಲಿ ಸೌಹಾರ್ದತೆ ಕಂಡಿತ್ತು. ಧರ್ಮದ ವಿಚಾಯ ಬದಿಗಿಟ್ಟು ಜೀವ ಕಾಪಾಡುವುದು ಮುಖ್ಯವೆಂದು ತಮ್ಮ ಪ್ರಾಣದ ಹಂಗು ತೊರೆದು ಮಹಿಳೆಯೊಬ್ಬರನ್ನು ಅಪಾಯದಿಂದ ಕಾಪಾಡಿದ ಮುಸ್ಲಿಂ ಯುವಕರ ಕಾರ್ಯಕ್ಕೆ ಹಿಂದೂ ಮಹಿಳೆಯರಿಂದ ಕಣ್ಣೀರ ಕೃತಜ್ಞತೆ ಸಲ್ಲಿತ್ತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಲ್ನಾಡು ಎಂಬಲ್ಲಿ ಹಿಂದೂ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಮನೆಯ ಯಜಮಾನ ಹೊರಗಡೆ ತೆರಳಿದ್ದು, ಮನೆಯಲ್ಲಿ ಓರ್ವ ವೃದ್ಧೆ ಮಾತ್ರ ಇದ್ದ ಸಂದರ್ಭ ಈ ದುರ್ಗಟನೆ ನಡೆದಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧಯ ನೆರವಿಗೆ ಬಂದದ್ದು ಮಾತ್ರ ಆ ಊರಿನ ಮುಸ್ಲಿಂ ಯುವಕರ ತಂಡ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಯುವಕರು ಹರಸಾಹಸ ಪಟ್ಟು ಮಹಿಳೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದಲ್ಲದೆ ಆಸ್ಪತ್ರೆಗೆ ಸಾಗಿಸುವಲ್ಲಿಯೂ ಮಾನವೀಯತೆ ಮೆರೆದ ಯುವಕರ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮತ್ತಿತರರು ಭೇಟಿ ನೀಡಿದ್ದು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಮಹಿಳೆಯ ರಕ್ಷಣೆ ತಂಡದಲ್ಲಿ ಸ್ಥಳೀಯ ಮುಸ್ಲಿಂ ಯುವಕ ಅಬ್ದುಲ್ ಖಾದರ್ ಹಾಗೂ ಇತರರು ಭಾಗವಹಿಸಿದ್ದು, ಸೂಕ್ತ ಸಮಯಕ್ಕೆ ಬಂದು ಮಹಿಳೆಯ ಜೀವ ಕಾಪಾಡಿದ ಆಪ್ತ್ಬಾಂಧವರ ಯುವಕರಿಗೆ ಅಲ್ಲಿ ಕಣ್ಣೀರ ಕೃತಜ್ಞತೆ ಸಲ್ಲಿತ್ತು.