ಮಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿ ಪ್ರತ್ಯೇಕವಾಗಿರಲು ಹೊರಟ ದಂಪತಿ!! ಇಬ್ಬರು ಪುಟ್ಟ ಮಕ್ಕಳು, ಮುಂದಿನ ಭವಿಷ್ಯಕ್ಕೆ ದಾರಿ ಯಾವುದು!??
ಮಂಗಳೂರು: ಸತಿ ಪತಿಗಳ ನಡುವೆ ಅದೇನೇ ಜಗಳ ನಡೆದರೂ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಎನ್ನುವ ಮಾತೊಂದಿದೆ. ಆ ಮಾತು ಅಕ್ಷರಕ್ಷರ ಸತ್ಯ. ಯಾಕೆಂದರೆ ಖುಷಿಯಲ್ಲಿ ಸಾಗುತ್ತಿರುವ ದಾಂಪತ್ಯ ಜೀವನವೆಂಬ ಹಳಿಯು ಒಂದು ಬಾರಿ ಬಿರುಕು ಬಿಟ್ಟರೆ ಮತ್ತೆಂದೂ ಆ ದಾಂಪತ್ಯ ಒಂದೇ ಹಳಿಯಲ್ಲಿ ಚಲಿಸುವ ಸಂದರ್ಭ ತುಂಬಾ ಕಷ್ಟಕರ ಹಾಗೂ ಅತೀ ವಿರಳ. ಅಂತಹುದೇ ಕಠಿಣ ಪ್ರಕರಣವೊಂದನ್ನು ಕೇವಲ ಕೌನ್ಸಿಲಿಂಗ್ ನಡೆಸಿ, ಆ ದಂಪತಿಗಳು ಮತ್ತೆ ತಮ್ಮ ಜೀವನದಲ್ಲಿ ಒಂದಾಗುವಂತೆ ಮಾಡಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪರಸ್ಪರ ಮನೊಂದು ಕಳೆದ ಕೆಲ ತಿಂಗಳುಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತ ಏಕಾಂಗಿ ಜೀವನ ಕಟ್ಟಲು ಮುಂದಾಗಿದ್ದ ಆ ದಂಪತಿಗಳು ಇಂದು ಮತ್ತೆ ಒಂದಾಗಿದ್ದಾರೆ. ತಮ್ಮ ಹಳೆಯ ಕೋಪ,ಜಗಳವನ್ನು ಮರೆತು ಹಿಂದಿನಂತೆಯೇ ಕೊನೆಯ ವರೆಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳ್ವೆ ನಡೆಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.
ಮಂಗಳೂರಿನ ದಂಪತಿಗಳಿಬ್ಬರು ಅದೇನೋ ಕೌಟುಂಬಿಕ ಕಲಹದಿಂದಾಗಿ ಕೆಲ ಸಮಯಗಳಿಂದ ದೂರವಾಗಿದ್ದರು. ಇಲ್ಲಿ ಪತಿ-ಪತ್ನಿ ಇಬ್ಬರೂ ಕೂಡಾ ಉದ್ಯೋಗವಂತರೇ.ಪತಿ ಮೆಡಿಕಲ್ ಶಾಪ್ ಹೊಂದಿದ್ದು, ಪತ್ನಿ ಆಯುರ್ವೇದಿಕ್ ಕ್ಲಿನಿಕ್ ಹೊಂದಿದ್ದರು. ಆದರೂ ಇವರಿಬ್ಬರ ನಡುವೆ ಏರ್ಪಟ್ಟ ಘರ್ಷಣೆ ವಿಚ್ಛೇದನ ಪಡೆದುಕೊಳ್ಳುವ ಹಂತಕ್ಕೆ ತಲುಪಿತ್ತು.
ಈ ನಡುವೆ ಮಕ್ಕಳನ್ನು ಕರೆದುಕೊಂಡು ಹೊರಟುಹೋದ ಪತ್ನಿ ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ ಕೆಲ ದಿನಗಳ ಕಾಲ ವಾಸವಿದ್ದರು. ಆದರೆ ದಿನಗಳುರುಳುತ್ತಳೇ ಆಕೆಗೆ ಚಿಂತೆ ಪ್ರಾರಂಭವಾಗಿದೆ. ತನ್ನ ಮುಂದಿನ ಜೀವನ ನಿರ್ವಹಣೆ, ಮಕ್ಕಳ ಜವಾಬ್ದಾರಿ, ಮಕ್ಕಳ ಶಿಕ್ಷಣಕ್ಕೆ ಇವೆಲ್ಲವನ್ನೂ ಗಂಭೀರವಾಗಿ ಆಲೋಚಿಸಿದ ಆಕೆ ಇದೆಲ್ಲದಕ್ಕೂ ದಾರಿ ತೋರುವಂತೆ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಅರಿತ ಕಾನೂನು ಪ್ರಾಧಿಕಾರ,ಪತಿ-ಪತ್ನಿ ಇಬ್ಬರನ್ನೂ ಕರೆಯಿಸಿ ಮಾತನಾಡಿದ್ದರು.ಇಬ್ಬರ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು.ಅದರಂತೆಯೇ ಪತಿ-ಪತ್ನಿ ದೂರಾದರೆ ಮಕ್ಕಳ ಭವಿಷ್ಯದ ಬಗೆಗೆ ಆಗುವ ಪರಿಣಾಮ-ದುಷ್ಪರಿಣಾಮದ ಬಗೆಗೂ ತಿಳಿಹೇಳಿದ್ದರು.ಇಷ್ಟೆಲ್ಲಾ ಪ್ರಯತ್ನ ಪಟ್ಟ ಬಳಿಕ ಕೊನೆಗೂ ದಂಪತಿಗಳ ಮನ ಪರಿವರ್ತನೆಯಾಗಿದೆ.ಕಳಂಕಿತವಾಗಿದ್ದ ಬಾಳೆಂಬ ಸಾಗರವು ಕೊಂಚ ತಿಳಿಯಾಗಿದೆ. ಆ ದಂಪತಿ ತಮ್ಮ ತಪ್ಪನ್ನು ಅರ್ಥೈಸಿಕೊಂಡು ಮುಂದಕ್ಕೆ ಕೈ ಹಿಡಿದು ಜೊತೆಯಾಗಿ ಬಾಳುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.
ಅಂತೂ ಬೇರೆಬೇರೆಯಾಗಿದ್ದ ದಂಪತಿಗಳು ಕಾನೂನು ಪ್ರಾಧಿಕಾರದ ಅಧಿಕಾರಿಗಳ ಪ್ರಯತ್ನದ ಫಲವಾಗಿ ಮದುವೆ ವಾರ್ಷಿಕೋತ್ಸವದ ದಿನದಂದೇ ಜೊತೆಯಾಗಿದ್ದಾರೆ.ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮುರಲೀಧರ ಪೈ ಬಿ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಈ ದಂಪತಿಗೆ ಪರಸ್ಪರ ಕೌನ್ಸೆಲಿಂಗ್ ನಡೆಸಿ, ಬೇರೆಯಾಗಿದ್ದ ಪತಿ-ಪತ್ನಿಯನ್ನು ಪ್ರಕರಣ ದಾಖಲಾದ ಅತಿ ಕಡಿಮೆ ಅವಧಿಯಲ್ಲಿ ಒಂದುಗೂಡಿಸಿದ್ದಾರೆ.