ವ್ಯಾಪಾರಸ್ಥರೇ ಎಚ್ಚರಿಕೆ | ಫೋನ್ ಪೇ/ಗೂಗಲ್ ಪೇ ಮೂಲಕ ಟ್ರಾನ್ಸಾಕ್ಷನ್ ಮೆಸೇಜ್ ಬರಬಹುದು, ಆದರೆ ಅಕೌಂಟ್ ಗೆ ಹಣ ಬೀಳಲ್ಲ !!
ಕೇಂದ್ರ ಸರ್ಕಾರ ದೇಶದಲ್ಲಿ ಹಣದ ವ್ಯವಹಾರ ತಗ್ಗಿಸುವ ನಿಟ್ಟಿನಲ್ಲಿ ಡಿಜಿಟಲ್ ಮನಿ ಕಡೆ ಹೆಚ್ಚಿನ ಗಮನ ಹರಿಸಿದೆ. ಅದಕ್ಕೆ ಪೂಕರವಾಗಿ ಅನೇಕ ಖಾಸಗಿ ಸಂಸ್ಥೆಗಳು ದೇಶದ ಹಳ್ಳಿ ಹಳ್ಳಿಗಳಿಗೂ ಡಿಜಿಟಲ್ ಮನಿ ಸೌಲಭ್ಯಗಳನ್ನು ತಲುಪಿಸುತ್ತಾ ಬಂದಿದೆ. ಹಾಗಾಗಿ ಎಲ್ಲಾ ಕಡೆ ಗೂಗಲ್ ಪೇ, ಫೋನ್ ಪೇ ಗಳು ಇದೀಗ ಮಾಮೂಲಾಗಿದೆ. ಇದರ ನಡುವೆಯೂ ಕೆಲ ಚಾಲಕಿಗಳು ಡಿಜಿಟಲ್ ಮನಿ ಟ್ರಾನ್ಸ್ಫರ್ ನಲ್ಲೂ ಮೋಸ ಮಾಡಲು ಶುರು ಮಾಡಿಕೊಂಡಿದ್ದಾರೆ.
ಹೌದು, ಡಿಜಿಟಲ್ ಪೇಮೆಂಟ್ ಮೋಸಗಳು ಇತ್ತೀಚೆಗೆ ಹೆಚ್ಚಾಗಿ ಮೈಸೂರಿನಲ್ಲಿ ಕಂಡು ಬಂದಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂನಂತಹ ಡಿಜಿಟಲ್ ಪೇಮೆಂಟ್ ಆ್ಯಪ್ ಗಳನ್ನು ಬಳಸುವ ವ್ಯಾಪಾರಿಗಳು ಇನ್ಮುಂದೆ ಎಚ್ಚೆತ್ತುಕೊಳ್ಳಬೇಕು. ಆನ್ಲೈನ್ ಪೇಮೆಂಟ್ ಹೆಸರಲ್ಲಿ ಮೋಸ ಮಾಡುವ ಜಾಲವೊಂದು ಮೈಸೂರಿನಲ್ಲಿ ಸಕ್ರಿಯವಾಗಿದೆ.
ಈ ಸಂಬಂಧ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಜಯಶಂಕರ್ ಎಂಬುವರು ಮೈಸೂರಿನ ಸರಸ್ವತಿಪುರಂನಲ್ಲಿ ಜವಳಿ ಉದ್ಯಮ ನಡೆಸುತ್ತಿದ್ದಾರೆ. ಕಳೆದವಾರ ಇವರ ಬಟ್ಟೆ ಅಂಗಡಿಗೆ ಐವರು ಯುವಕರು ಐಶಾರಾಮಿ ಕಾರಿನಲ್ಲಿ ಬಂದಿದ್ದಾರೆ. ಜಸ್ಟ್ ಒಂದು ಗಂಟೆಯಲ್ಲಿ ಬರೋಬ್ಬರಿ 16 ಸಾವಿರ ರೂ. ಮೌಲ್ಯದ ಬಟ್ಟೆ ಸೆಲೆಕ್ಟ್ ಮಾಡಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬವರ ನಂಬರ್ ಪಡೆದುಕೊಂಡು ಯಾರಿಗೋ ಫಾರ್ವರ್ಡ್ ಮಾಡಿದ್ದಾರೆ. ಅಪ್ಪ ನಾನು ಕೊಟ್ಟಿರುವ ಫೋನ್ ನಂಬರ್ ಗೆ 16 ಸಾವಿರ ರೂ. ದುಡ್ಡು ಹಾಕು ಅಂತ ಹೇಳಿದ್ದಾರೆ. ಬಟ್ಟೆ ಅಂಗಡಿಯ ಕಾರ್ಮಿಕ ಸುನೀಲ್ ನಂಬರ್ ಗೆ ಕ್ರೆಡಿಟ್ ಮೆಸೇಜ್ ಬಂದಿದೆ. ಪೇಮೆಂಟ್ ಆಗಿದೆ ಅನ್ನುತ್ತಿದ್ದಂತೆಯೇ ಐವರೂ ಎಸ್ಕೇಪ್ ಆಗಿದ್ದಾರೆ.
ಡಿಜಿಟಲ್ ಟ್ರಾನ್ಸ್ ಸಾಕ್ಷನ್ ಗೆ ಸಂಬಂಧಪಟ್ಟಂತೆ ಮೆಸೇಜ್ ಮಾತ್ರ ಬಂದಿದೆ. ಆದ್ರೆ ದುಡ್ಡು ಬಂದಿಲ್ಲ. ಬ್ಯಾಂಕ್ ಅಕೌಂಟ್ ಚೆಕ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಉದ್ಯಮಿ ಜಯಶಂಕರ್ ಸಿಸಿ ಕ್ಯಾಮರಾ ಫುಟೇಜ್ ಚೆಕ್ ಮಾಡಿ, ಆರೋಪಿಗಳನ್ನು ಖಚಿತಪಡಿಸಿಕೊಂಡಿದ್ದಾರೆ.
ಮೋಸ ಹೋಗಿರುವ ಬಗ್ಗೆ ಸೈಬರ್ ಕ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿಜಿಟಲ್ ಪೇಮೆಂಟ್ ಆ್ಯಪ್ಗಳನ್ನೇ ಹೋಲುವ ಸಾಫ್ಟ್ವೇರ್ ಅಥವಾ ಆ್ಯಪ್ ಗಳನ್ನು ಕಂಡುಕೊಂಡಿದ್ದಾರೆ. ಅವುಗಳನ್ನು ಬಳಸಿ ನಮಗೆ ಮೋಸ ಮಾಡಿರಬಹುದು ಅಂತ ಉದ್ಯಮಿ ಜಯಶಂಕರ್ ಹೇಳುತ್ತಿದ್ದಾರೆ.