ಜಿರಳೆ ಬಳಸಿ ಅತ್ತೆಯನ್ನು ಕೊಲ್ಲಲು ಸಂಚು ಮಾಡಿದ ಮುದ್ದಿನ ಸೊಸೆ
ಬೆಂಗಳೂರು, ಡಿ. 15: ಇದು ಅತ್ತೆಯನ್ನು ಕೊಲ್ಲಲು ಸೊಸೆ ಖತರ್ನಾಕ್ ಪ್ಲಾನ್. ಅತ್ತೆಯನ್ನು ಕೊಲ್ಲಲು ಆಕೆ ಜಿರಳೆಯ ಸಹಾಯ ಕೇಳಿದ್ದಳು. ಇಂತಹದೊಂದು ಪ್ರಯತ್ನ ಮಾಡಿ ಸೊಸೆ ಇದೀಗ ಪೊಲೀಸ್ ಮಾಮನ ಮನೆ ಸೇರಬೇಕಾದ ಪ್ರಸಂಗ ಬಂದಿದೆ.
ಅತ್ತೆ ಮತ್ತು ಸೊಸೆ ಜಗಳ ಬಹುತೇಕ ಮನೆಗಳಲ್ಲಿ ಅತಿ ಸಾಮಾನ್ಯ. ಅದು ಒಂದೆರಡು ಮಾತು, ಗುನುಗುನು ಬೈಗುಳ, ಕೋಪವನ್ನು ಪಾತ್ರೆ ಪಗಡೆ ಗಳ ಮೇಲೆ ಕುಟ್ಟಿ ತೋರಿ ಶಮನ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ಸೊಸೆ ತನ್ನ ಅತ್ತೆ ಕೊಲೆಗೆ ಖತರ್ನಾಕ್ ಪ್ಲಾನ್ ರೂಪಿಸಿದ್ದಾಳೆ. ಅದನ್ನು ಕಾರ್ಯಗತ ಮಾಡುವ ವೇಳೆ ಆಕೆಯ ಸಂಭಾಷಣೆ ಆಕಸ್ಮಿಕವಾಗಿ ರೆಕಾರ್ಡ್ ಆಗಿ ಆಕೆ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಆಕೆ ಹೆಸರು ಅಯಿಷಾ, ಗಂಡ ಆಸೀಫ್. ಗಂಡ ಹೆಂಡತಿಯದ್ದು ನೆಮ್ಮದಿ ಜೀವನ. ಆಯಿಷಾ ಆಸೀಫ್ ಜತೆಗೆ ಅತ್ತೆ ಕೂಡ ಮನೆಯಲ್ಲಿದ್ದಳು. ಕ್ಷುಲ್ಲಕ ವಿಚಾರಕ್ಕಾಗಿ ಯಾವಾಗಲೂ ಆಯಿಷಾ ಮತ್ತು ಅತ್ತೆ ನಡುವೆ ಜಗಳ ನಡೆಯುತ್ತಿತ್ತು. ಗಂಡ ಕೆಲಸದ ನಿಮಿತ್ತ ಹೊರ ಹೋದಾಗ ಇಬ್ಬರೂ ಬೈದಾಡಿ ಜಗಳ ಮಾಡಿಕೊಳ್ಳುತ್ತಿದ್ದರು. ಇಂತಹ ಅತ್ತೆಗೆ ಒಂದು ಗತಿ ಕಾಣಿಸಲು ಪ್ಲಾನ್ ರೂಪಿಸಿರುವ ಆಯಿಷಾ, ಊಟದಲ್ಲಿ ಜಿರಲೆ ಔಷಧಿ ಹಾಕಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾಳೆ. ಜಿರಳೆ ಔಷಧೀಯ ಜತೆಗೆ ಜತೆಗೆ ನಿದ್ರೆ ಮಾತ್ರೆಯನ್ನೂ ಬೆರೆಸಿ ಜೀವ ತೆಗೆಯಲು ಅತ್ತೆಗೆ ನೀಡಿದ್ದಾಳೆ. ಜಿರಲೆ ಔಷಧಿಯನ್ನು ಆಯಿಷಾ ತನ್ನ ತಾಯಿ ಜತೆ ಕರೆ ಮಾಡಿ ತರಿಸಿಕೊಂಡಿದ್ದಾರೆ.
ನನ್ನ ಅತ್ತೆಯನ್ನು ಸಾಯಿಸಲಿಕ್ಕೆ ಜಿರಲೆ ಔಷಧಿ ಖಾಲಿಯಾಗಿದೆ. ನನಗೆ ಜಿರಲೆ ಔಷಧಿ ತಂದು ಕೊಡಿ ಎಂದು ಹೇಳಿದ್ದಾಳೆ. ತಾಯಿ ಜತೆ ಸಂಭಾಷಣೆ ಮಾಡಿರುವುದು ಅಕಸ್ಮಿಕವಾಗಿ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಇತ್ತೀಚೆಗೆ ಊಟದಲ್ಲಿ ಜಿರಲೆ ಔಷಧಿ ಮತ್ತು ನಿದ್ರೆ ಮಾತ್ರೆ ಸೇರಿಸಿ ಕೊಟ್ಟಿದ್ದಾಳೆ. ಊಟ ಸೇವಿಸಿದ ಕೂಡಲೇ ಆಸಿಫ್ ತಾಯಿ ಅಸ್ವಸ್ಥಗೊಂಡಿದ್ದಾರೆ. ಮೊದಲು ಅನಾರೋಗ್ಯ ಎಂದು ಭಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಆಸಿಫ್ ಕುಟುಂಬ ಚೇತಿರಿಸಿಕೊಂಡಿತ್ತು. ಇದಾಗಿ ಕೆಲ ದಿನಗಳ ನಂತರ ಪತ್ನಿಯ ಕೃತ್ಯ ಬಯಲಿಗೆ ಬಂದಿದ್ದು, ಆಯಿಷಾ ತನ್ನ ತಾಯಿ ಜತೆ ಮಾತನಾಡಿದ್ದ ಅಡಿಯೋ ಸಿಕ್ಕಿದೆ.
ಇದರಿಂದ ಕೋಪಗೊಂಡ ಗಂಡ ಆಸಿಫ್, ತನ್ನ ಪತ್ನಿ ಆಯಿಷಾ, ಹುಸೇನ್ ಸಾಬ್, ಕಮರ್ ತಾಜ್, ಹರಾರತ್ ಮತ್ತಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.