ಶಿವನ ಬೃಹನ್ ಮೂರ್ತಿಯ ತಲೆಯಿಲ್ಲದ ಜಾಗದಲ್ಲಿ ಹಾರಾಡುತ್ತಿದೆ ಐಸಿಸ್ ಧ್ವಜ, ಫೋಟೋ ವೈರಲ್ | ಕಡಲ ಕಿನಾರೆಯ ಮುರುಡೇಶ್ವರದ ಶಿವನ ಮೇಲೆ ಬಿತ್ತಾ ಉಗ್ರರ ಕಣ್ಣು ?!
ಕಾರವಾರ: ನಮ್ಮ ರಾಜ್ಯದ ಅಷ್ಟೇ ಅಲ್ಲ, ದೇಶದ ಪ್ರಸಿದ್ಧ ದೇಗುಲ ಮತ್ತು ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ. ಇದರಿಂದ ಶಿವನ ಮೂರ್ತಿಗೆ ಮತ್ತು ದೇವಾಲಯಕ್ಕೆ ಅಪಾಯವಿದೆ ಎಂಬ ಆತಂಕಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಗ್ರ ಸಂಘಟನೆ ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ ” Its time to Break False Gods “ಎಂದು ಬರೆದಿರುವ ಫೋಟೋ ಪ್ರಕಟವಾಗಿದೆ ಎಂದು ಅಂಶುಲ್ ಸಕ್ಸೇನಾ ಎಂಬವರ ಫೇಸ್ ಬುಕ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾಗಿದೆ.
ಫೋಟೋದಲ್ಲಿ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ ತೋರಿಸಿದೆ. ಅಲ್ಲದೆ ಆ ಮೂರ್ತಿಗೆ ತಲೆ ಇಲ್ಲ. ಮೂರ್ತಿಯ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ.
ಇದರ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅಂಶುಲ್ ಸಕ್ಸೇನಾ ಅವರು ಫೇಸ್ ಬುಕ್ ಪೇಜ್ ನಲ್ಲಿ ಆಗ್ರಹಿಸಿದ್ದಾರೆ.
ಸದ್ಯ ಈ ಫೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಸತ್ಯಾಸತ್ಯತೆ ಮತ್ತು ಸಂಬಂಧಿಸಿದ ಸುರಕ್ಷತೆ ಬಗ್ಗೆ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.