ರಾಜಕೀಯದಲ್ಲಿ ತೀವ್ರಗೊಂಡ ಹಿಂದುತ್ವ-ಹಿಂದೂ ಧರ್ಮದ ಚರ್ಚೆ !! | ಕಾಂಗ್ರೆಸ್ ನಾಯಕರ ಮಧ್ಯೆಯೇ ಒಡಕು ಮೂಡಿ ಛಿದ್ರವಾಗುತ್ತಿದೆ ಕೈ ಪಾಳಯ
ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನಾರಂಭ ಮಾಡಿದ ಹಿಂದುತ್ವ-ಹಿಂದೂ ಧರ್ಮದ ಚರ್ಚೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದ್ದ ಒಗ್ಗಟ್ಟನ್ನು ಛಿದ್ರಗೊಳಿಸಿದಂತೆ,ಅವರ ನಡುವಲ್ಲೇ ಬೆಂಕಿ ಕಾಣುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ನಾಯಕರು ಚುನಾವಣೆ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ? ಎಂದು ಕೇಳುತ್ತಿದ್ದರೆ, ಮತ್ತೊಂದಷ್ಟು ಮಂದಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ, ಚುನಾವಣೆ ಸಂದರ್ಭಗಳಲ್ಲಿ, ನಾವೂ ಇದ್ದೀವಿ ಅಂತ ತೋರಿಸಿಕೊಳ್ಳೋದಕ್ಕೆ ಪಕ್ಷ ಈ ವಿಷಯದ ಬಗ್ಗೆ ಮಾತಡಲೇಬೇಕು ಎಂಬ ನಿಲುವನ್ನು ಹೊಂದಿದ್ದಾರೆ.ಕೆಲವು ನಾಯಕರು ಈ ರೀತಿಯ ಚರ್ಚೆಗಳಿಗೆ ಮುಂದಾಗುವುದು ಆತ್ಮಹತ್ಯೆಯಂತಹ ನಿರ್ಧಾರವಾಗುತ್ತದೆ. ಆದ್ದರಿಂದ ಇಂತಹ ಚರ್ಚೆ, ಹೇಳಿಕೆಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ಅಮಾಯಕರನ್ನು ಕೊಲ್ಲುವುದು ಹಿಂದೂ ಧರ್ಮದ ಲಕ್ಷಣವಲ್ಲ, ಅದು ಹಿಂದುತ್ವದ ಲಕ್ಷಣ ಎಂದು ಹೇಳಿದ್ದ ರಾಹುಲ್ ಗಾಂಧಿ ಹಲವು ವಿರೋಧ, ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ತಮ್ಮದೇ ಪಕ್ಷದ ಕೆಲವು ಮಂದಿಯಿಂದ ವಿರೋಧ ಎದುರಿಸಬೇಕಾಗುವಂತಾಗಿದ್ದು ಮಾತ್ರ ಅಚ್ಚರಿ.
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸಂಸದ ಮನೀಷ್ ತಿವಾರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷ ನೆಹರು ಅವರ ಜಾತ್ಯತೀತ ತತ್ವ ಸಿದ್ಧಾಂತಗಳಿಂದ ವಿಪಥಗೊಳ್ಳುತ್ತಿರುವುದು ಕಾಂಗ್ರೆಸ್ ಕುಸಿತಕ್ಕೆ ಕಾರಣವಾಗುತ್ತಿರಬಹುದು ಎಂದು ಹೇಳಿದ್ದು ತಾವು ಹಿಂದೂ ಧರ್ಮ- ಹಿಂದುತ್ವದ ಚರ್ಚೆಯಿಂದ ಗೊಂದಲಕ್ಕೀಡಾಗಿರುವುದಾಗಿ ಹೇಳಿಕೊಂಡಿದ್ದಾರೆ.
“ತಮ್ಮ ಪಕ್ಷ ಕೇವಲ ಅಲ್ಪಸಂಖ್ಯಾತರಿಗಷ್ಟೇ ಎಂಬ ಭಾವನೆ ಹಲವರಲ್ಲಿ ಬಂದರೆ ಜನರನ್ನು ತಮ್ಮತ್ತ ಸೆಳೆಯುವುದು ಕಷ್ಟ. ಕಾಂಗ್ರೆಸ್ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲಲು ಅವರ ಮತಗಳೂ ಮುಖ್ಯ.ಹಾಗೆಂದು ಬಿಜೆಪಿ ರೀತಿಯಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ, ಸಿಟ್ಟು ಬಿತ್ತುವ ಕೆಲಸ ಮಾಡಬೇಕಿಲ್ಲ. ಆದರೆ ಖುರ್ಷಿದ್ ನೀಡಿದ ಹೇಳಿಕೆ, ಪ್ರಕಟಿಸಿದ ನಿಲುವುಗಳನ್ನು ವಿರೋಧಿಸಬೇಕು, ಅಂತಹ ಹೇಳಿಕೆಗಳು ನಮ್ಮ ಪಕ್ಷಕ್ಕೆ ಮುಳುವಾಗಲಿದೆ. ನಾವು ಬಹುಸಂಖ್ಯಾತರ ವಿರೋಧಿಗಳೆಂಬ ಹಣೆಪಟ್ಟಿ ನೀಡಲಿದೆ” ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.