ಉಪ್ಪಿನಂಗಡಿ:ಬಾಲ್ಯದ ಗೆಳೆಯರ ದುರಂತ ಮರಣ ಕಂಡು ಇಡೀ ಪೇಟೆಯೇ ಅರೆಕ್ಷಣ ಮೌನಿಯಾಗಿತ್ತು!! ಸಾವಿನಲ್ಲೂ ಒಂದಾದ ಗೆಳೆಯರ ಶವ ಮೆರವಣಿಗೆಯಲ್ಲಿ ಕಣ್ಣೀರ ಕೋಡಿಯೇ ಹರಿದಿತ್ತು
ವಿಧಿ ಅನ್ನೋದು ಯಾವ ಕ್ಷಣದಲ್ಲಿಯೂ ಉಲ್ಟ ಹೊಡೆದು ತನ್ನದೇ ಕಾನೂನು ಹಿಡಿದು ನಡೆಯುತ್ತದೆ ಎಂಬುವುದಕ್ಕೆ ಅದೊಂದು ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತದೆ. ಜೀವಕ್ಕೆ ಜೀವ ಕೊಡುವ ಆ ಇಬ್ಬರು ಪ್ರಾಣ ಸ್ನೇಹಿತರು ದುರಂತ ಮರಣ ಕಂಡಿದ್ದು, ಶವ ಮೆರವಣಿಗೆಯಲ್ಲಿ ಹೆತ್ತವರ, ಸ್ನೇಹಿತರ ಕಣ್ಣೀರು ಅವರಿಬ್ಬರ ಗೆಳೆತನಕ್ಕೆ ಮುನ್ನುಡಿ ಬರೆದಿತ್ತು. ಒಪ್ಪತ್ತಿನ ಕಷ್ಟಕ್ಕಾಗಿ ಕೇಟರಿಂಗ್ ನಲ್ಲಿ ದುಡಿಯುತ್ತಿದ್ದ ಆ ಇಬ್ಬರು ಸ್ನೇಹಿತರು ಕೆಲಸದ ನಿಮಿತ್ತ ಪಿಕ್ ಅಪ್ ನಲ್ಲಿ ತೆರಳುತ್ತಿದ್ದಾಗ ನಡೆದ ದುರ್ಘಟನೆ ಅವರಿಬ್ಬರನ್ನೂ ಬಾರದ ಲೋಕಕ್ಕೇ ಕರೆದುಕೊಂಡು ಹೋಗಿದೆ.ನಿನ್ನೆಯ ದಿನ ಉಪ್ಪಿನಂಗಡಿ ಪೇಟೆಗೆ ಪೇಟೆಯೇ ಜನಸಾಗರದಿಂದ ತುಂಬಿತ್ತು, ಎಲ್ಲರ ಕಣ್ಣಂಚಲ್ಲೂ ನೀರು, ತಮ್ಮ ಮನೆ ಮಗನನ್ನು ಕಳೆದುಕೊಂಡೆವೆಂಬ ಕೊರಗು ಒಂದೆಡೆಯಾದರೆ, ಬಾಲ್ಯದಿಂದಲೇ ಜೊತೆಗಿದ್ದ ಜೀವದ ಗೆಳೆಯರನ್ನು ದೂರ ಮಾಡಿದ ದೇವನಿಗೆ ಅಲ್ಲಿದ್ದವರ ಬಾಯಿಂದ ಹಿಡಿಶಾಪ ಬೀಳುತ್ತಿತ್ತು.
ಹೌದು,ಮೊನ್ನೆಯ ದಿನ ಕೇಟರಿಂಗ್ ಗೆ ತೆರಳಿದ್ದ ಪಿಕ್ ಅಪ್ ವಾಹನವೊಂದು ತುಂಬೆ ಸಮೀಪದ ರಾಮಲಕಟ್ಟೆ ಎಂಬಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದ್ದರ ಪರಿಣಾಮ ಅದರಲ್ಲಿದ್ದ ಇತರ ಇಬ್ಬರು ಗಂಭೀರ ಗಾಯಗೊಂಡರಲ್ಲದೆ, ಉಪ್ಪಿನಂಗಡಿ ನಿವಾಸಿಗಳಾದ ಆಶೀತ್ ಹಾಗೂ ಚೇತನ್ ಎಂಬಿಬ್ಬರು ಯುವಕರು ಆಸ್ಪತ್ರೆಗೆ ಸಾಗಿಸುವ ವೇಳೆಗಾಗಲೇ ಇಹಲೋಕವನ್ನೇ ತ್ಯಜಿಸಿದ್ದರು.
ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಆಶೀತ್ ಹಾಗೂ ಚೇತನ್ ದುರಂತ ಮರಣ ಕಂಡು ಇಡೀ ಹಿಂದೂ ಯುವ ಸಮಾಜಕ್ಕೆ ಸಿಡಿಲು ಬಡಿದಂತಾಗಿತ್ತು. ಬಾಲ್ಯದಿಂದಲೇ ಜೊತೆಗಿದ್ದ ಜೀವದ ಗೆಳೆಯರ ಮರಣ ಕೂಡಾ ಒಂದೇ ಕ್ಷಣ ಬರುತ್ತದೆ ಎಂದೂ ಯಾರೂ ಊಹಿಸಿರದಿದ್ದರೂ ವಿಧಿಯಾಟವ ಬಲ್ಲವರು ಯಾರಿದ್ದಾರೆ ಹೇಳಿ.ಇಲ್ಲೂ ನಡೆದಿದ್ದು ಅದೇ.
ನಿನ್ನೆಯ ದಿನ ಉಪ್ಪಿನಂಗಡಿ ಪೇಟೆಯಿಂದಲೇ ಅವರಿಬ್ಬರ ಮೃತದೇಹವನ್ನು ಮೆರವಣಿಗೆ ಮೂಲಕ ಚಿತಾಗಾರಕ್ಕೆ ಕೊಂಡುಹೋಗಿ ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.ಅದೇನೇ ಇರಲಿ ಬಾಲ್ಯದ ಗೆಳೆಯರು ಸಾವಿನಲ್ಲಿಯೂ ಒಂದಾದ ಹಲವಾರು ಘಟನೆಗಳಿಗಿಂತಲೂ ಈ ಘಟನೆ ಕೊಂಚ ವಿಭಿನ್ನವಾಗಿದೆ ಎಂಬುವುದಕ್ಕೆ ಅಲ್ಲಿ ಹರಿದಿದ್ದ ಕಣ್ಣೀರ ಕೋಡಿಯೇ ಪ್ರತ್ಯಕ್ಷ ಸಾಕ್ಷಿ.