ಬಂಟ್ವಾಳ : ಮರಕ್ಕೆ ಡಿಕ್ಕಿ ಹೊಡೆದ ಪಿಕಪ್ ,ಉಪ್ಪಿನಂಗಡಿಯ ಇಬ್ಬರು ಮೃತ್ಯು ,ಇಬ್ಬರು ಗಂಭೀರ

ಬಂಟ್ವಾಳ: ರಾ.ಹೆ.75ರ ತುಂಬೆ ರಾಮಲಕಟ್ಟೆಯ ಬಳಿ ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ.

ಘಟನೆಯಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್(25) ಹಾಗೂ ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ.

ಬಿ.ಸಿ.ರೋಡ್ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿನ ಕ್ಯಾಟರಿಂಗ್ ವೊಂದರ ವಾಹನ ಇದಾಗಿದ್ದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಳಗ್ಗೆ ಆಹಾರ ಪೂರೈಸಿ ಸಂಜೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಿಕ್ ಅಪ್ ನ ವೀಲ್ ಎಂಡ್ ತುಂಡಾಗಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಪಿಕ್‌ಅಪ್ ವಾಹನ ರಾಮಲಕಟ್ಟೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ದಿಢೀರ್‌ ವೃತ್ತಾಕಾರದಲ್ಲಿ ಎರಡು ಸುತ್ತು ತಿರುಗಿದ್ದು ಬಳಿಕ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾಗಿ ನಿಂತಿದೆ. ವೃತ್ತಾಕಾರದಲ್ಲಿ ಗಿರುಗಿದ ರಭಸಕ್ಕೆ ಪಿಕ್ ಅಪ್ ಹಿಂಬದಿಯಲ್ಲಿದ್ದ ಮೃತ ಹಾಗೂ ಗಾಯಗೊಂಡ ನಾಲ್ವರೂ ಹೊರಗೆ ಎಸೆಯಲ್ಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತರಲ್ಲಿ ಓರ್ವ ಯುವಕ ವಾಹನದಿಂದ ಎಸೆಯಲ್ಪಟ್ಟ ರಭಸಕ್ಕೆ ರಸ್ತೆ ಪಕ್ಕದ ಡ್ಯಾಂನ ಕಾಂಪೌಂಡ್ ಗೋಡೆ ಹಾರಿ ಡ್ಯಾಂನ ನೀರಿನಲ್ಲಿ ಬಿದ್ದಿದ್ದ ಎಂದು ತಿಳಿದು ಬಂದಿದೆ. ಪಿಕ್ ಅಪ್ ವಾಹನದ ಎದುರು ಇದ್ದ ಚಾಲಕ ಮತ್ತು ಮತ್ತೋರ್ವ ಯಾವುದೇ ಗಾಯಗಳು ಇಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಇಬ್ಬರು ಅದಾಗಲೇ ಮೃತಪಟ್ಟಿದ್ದರು ಎಂದು ಗಾಯಾಲುಗಳನ್ನು ಆಸ್ಪತ್ರೆಗೆ ಸಾಗಿಸಿದ ತುಂಬೆ ಗ್ರಾಪಂ ಸದಸ್ಯ ಇಬ್ರಾಹೀಂ ಮತ್ತು ಟೆಂಪೋ ಚಾಲಕ ದಾವೂದ್ ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬದುಕಿನ ಆಧಾರ ಸ್ತಂಭ ಕಳಚಿತು: ಬಾರ್ಯ ಗ್ರಾಮದ ಪೆರಿಯೊಟ್ಟು ಪಿಲಿಗೂಡಿನ ದಿ. ಧರ್ನಪ್ಪ ಪೂಜಾರಿ, ವಿಮಲಾ ದಂಪತಿಯ ಪುತ್ರನಾದ ಚೇತನ್ (25) ಬಡತನದ ಕುಟುಂಬದಿಂದ ಬಂದವರು. ತಂದೆಯ ಮರಣಾನಂತರ ತಾಯಿ ಬೀಡಿ ಕಸುಬೇ ಇವರ ಜೀವನಕ್ಕೆ ಆಧಾರವಾಗಿತ್ತು. ಬಡತನದ ನಡುವೆಯೂ ಬಿಡುವಿರುವಾಗ ಕೆಲಸಕ್ಕೆ ಹೋಗಿ ಇತ್ತೀಚೆಗಷ್ಟೇ ಡಿಪ್ಲೊಮಾ ಶಿಕ್ಷಣವನ್ನು ಮುಗಿಸಿದ್ದ ಚೇತನ್ ಕೆಲಸದ ಹುಡುಕಾಟದಲ್ಲಿದ್ದರು. ಈ ನಡುವೆ ಬಿ.ಸಿ.ರೋಡ್‌ನ ಕ್ಯಾಟರಿಂಗ್ ವೊಂದರಲ್ಲಿ ದುಡಿದು ತನ್ನ ಮನೆಯವರಿಗೆ ನೆರವಾಗುತ್ತಿದ್ದರು. ಆದರೆ ಅವರನ್ನು ವಿಧಿ ಇಂದು ಬಲಿತೆಗೆದುಕೊಂಡಿದೆ. ಈಗ ಅವರನ್ನು ಕಳೆದುಕೊಂಡ ಅವರ ಸಹೋದರಿ ಹಾಗೂ ತಾಯಿಗೆ ಅವರ ಮನೆ ಬೆಳಗಬೇಕಾಗಿದ್ದ ನ ದೀಪವೇ ಆರಿಹೋದಂತಾಗಿದೆ.

ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.