ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡ ಸಿಎಂ |ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್!!
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು,ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದಂತ ಸಚಿವ ಜೆಸಿ ಮಾಧುಸ್ವಾಮಿಯವರು,ಇಂದಿನ ಸಂಪುಟ ಸಭೆಯ ಮುಖ್ಯಾಂಶಗಳನ್ನ ತಿಳಿಸಿದ್ದಾರೆ.
ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ‘ಕಿತ್ತೂರು ಕರ್ನಾಟಕ ಪ್ರದೇಶ ‘ಎಂದು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಲ್ಲಿಸಿತ್ತು. ಈ ಕಡತಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.ಈ ಹಿನ್ನಲೆಯಲ್ಲಿ ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ಕಿತ್ತೂರು ಕರ್ನಾಟಕ ಪ್ರದೇಶ ಎಂಬುದಾಗಿ ಕರೆಯಲ್ಪಡಲಿವೆ.
ಮುಂದುವರೆದು, ನೂತನ ಮರಳು ನೀತಿಯಂತೆ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಅಧಿಕಾರಿ, ಮೆಟ್ರಿಕ್ ಟನ್ ಗೆ 700 ರೂ.ನಂತೆ ಮಾರಾಟ ಮಾಡಲಿದ್ದಾರೆ. ನದಿ ಮರಳಿಗೆ 700 ರೂ ಫಿಕ್ಸ್ ಮಾಡಲಾಗಿದೆ. ಗ್ರಾಮ ಪಂಚಾಯ್ತಿಯವರಿಗೆ ಮರಳು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರಾಟದ ಶೇ.25ರಷ್ಟು ಗ್ರಾಮ ಪಂಚಾಯ್ತಿಗೆ ನೀಡಲಾಗುತ್ತದೆ. ಇದನ್ನು ನೋಡಿಕೊಳ್ಳಲು ಅಥಾರಿಟಿ ರಚನೆ ಮಾಡಲಾಗುತ್ತದೆ ಎಂದರು.ದಕ್ಷಿಣಕನ್ನಡದಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಮೆಷಿನರಿ ಯೂಸ್ ಮಾಡದಂತೆ ಸೂಚನೆ ನೀಡಲಾಗಿದೆ. ಗ್ರಾ.ಪಂ ಪರ್ಮಿಷನ್ ಪಡೆದು ಮರಳು ಪಡೆಯಬಹುದು ಎಂದು ತಿಳಿಸಿದರು.
ಇನ್ನೂ ಮೈನಿಂಗ್ ಆಯಕ್ಟಿವಿಟೀಸ್ ಅನುಮತಿ ಪರಿಶೀಲನೆ ನಡೆಸಲಾಗಿದೆ. ಮೇಜರ್ ಮೈನಿಂಗ್ ನವರಿಗೆ ಮೈನಿಂಗ್ ಮಾಡೋಕೆ ಅನುಮತಿ ನೀಡಲಾಗುತ್ತದೆ. ಬಳ್ಳಾರಿಯಲ್ಲಿ ರಸ್ತೆಗೆ 30 ಕೋಟಿಗೆ ಅನುಮತಿ ನೀಡಲಾಗಿದೆ. ಡಿಎಂಎಫ್ ಫಂಡ್ ನಿಂದ ರಸ್ತೆಗೆ ಅನುದಾನ ನೀಡಲಾಗಿದೆ. ಯುಜಿಡಿಗೆ 12 ಕೋಟಿ ಅನುದಾನಕ್ಕೆ ಸಮ್ಮತಿ ನೀಡಲಾಗಿದೆ ಎಂದರು.
ನೇಕಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 376 ಕೋಟಿ ಹಣ ಮೀಸಲು ಇಡಲಾಗಿದೆ. ಎಸ್ಪಿ, ಟಿಎಸ್ಪಿ ಹಣವನ್ನ ಇದಕ್ಕೆ ಬಳಸಲಾಗುವುದು ಎಂದರು.ಅಲ್ಲದೆ,ನೇರ ನೇಮಕಾತಿ ಗೊಂದಲ ಬಗೆಹರಿಕೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಹುದ್ದೆಗಳ ಆಧಾರದ ಮೇಲೆ ಡೈರೆಕ್ಟ್ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಇನ್ನೂ ಟೆಂಡರ್ ಪಡೆಯಲು ಪಾರದರ್ಶಕ ವ್ಯವಸ್ಥೆ ರೂಪಿಸಲಾಗುತ್ತದೆ. 50 ಕೋಟಿ ಮೇಲಿರುವ ಟೆಂಡರ್ ಗಳಿಗೆ ಯಾವುದೇ ಇಲಾಖೆ ಟೆಂಡರ್ ಪಡೆಯಲು ಏಕಗವಾಕ್ಷಿ ಮೂಲಕ ಅವಕಾಶ ನೀಡಲಾಗುತ್ತದೆ.ಇದಕ್ಕಾಗಿ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗುತ್ತದೆ. ಈ ಕಮಿಟಿ ಎಲ್ಲವನ್ನೂ ನೋಡಿಕೊಳ್ಳಲಿದೆ. ಪೂರ್ವಾಪರ ಪರಿಶೀಲಿಸಿ ಟೆಂಡರ್ ಗೆ ಅನುಮತಿಸಲಿದೆ ಎಂದರು.
ಕಿಂಡಿಅಣೆಕಟ್ಟುಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. 500 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಸಿರಗುಪ್ಪದಲ್ಲಿ ವೇದಾವತಿಗೆ ಬ್ರಿಡ್ಜ್ ನಿರ್ಮಾಣಕ್ಕೆ 30 ಕೋಟಿ ನೀಡಲು ಅನುಮೋದಿಸಲಾಗಿದೆ ಎಂದರು.
ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ 825 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಗರ ಗ್ರಾಮದಲ್ಲಿ ಸ್ವಾನಂದಾಶ್ರಮಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಬಹುಮಹಡಿ ವಸತಿ ಯೋಜನೆಗೆ 69 ಎಕರೆ ಭೂಮಿಯನ್ನು ರಾಜೀವ್ ವಸತಿ ನಿಗಮಕ್ಕೆ ಭೂಮಿ ನೀಡಲು ಸಮ್ಮತಿಸಲಾಗಿದೆ. ಬೆಂಗಳೂರಿನಲ್ಲಿ ಭೂಮಿ ನೀಡಲಾಗಿದೆ. ಈ ವರ್ಷ 80 ಲಕ್ಷ ಮನೆಕಟ್ಟುವ ಗುರಿಯಿದೆ ಹೊಂದಲಾಗಿದೆ ಎಂದರು.
ಹಾವೇರಿ ಮಿಲ್ಕ್ ಯೂನಿಯನ್ ಗೆ ಅನುಮತಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರಕ್ಕೆ ಪೃತ್ಯೇಕ ಯೂನಿಯನಿಟ್ ಹಾಲಿನ ಘಟಕಗಳ ನಿರ್ಮಾಣಕ್ಕೆ ಅನುಮತಿಸಲಾಗಿದೆ ಎಂದರು.ಬಿಬಿಎಂಪಿಯಲ್ಲಿ 2000 ಕೋಟಿ ಕಲೆಕ್ಟ್ ಮಾಡಿದ ವಿಚಾರ ಕುರಿತಂತೆ ಮಾತನಾಡಿದ ಅವರು, ಕೋರ್ಟ್ ಈ ಹಣ ಭರಿಸುವಂತೆ ನಿರ್ದೇಶಿಸಿದೆ. ಇದನ್ನ ಸರಿಪಡಿಸುವ ಬಗ್ಗೆ ಗಮನಹರಿಸಿದ್ದೇವೆ. ಸಂಪುಟದಲ್ಲಿ ಬೈಲಾತಿದ್ದುಪಡಿಗೆ ಸಮ್ಮತಿಸಿದೆ ಎಂದರು.
ಬೆಳಗಾವಿಯಲ್ಲೇ ಅಧಿವೇಶನ ನಡೆಸುವ ಚರ್ಚೆ ಕುರಿತಂತೆ ಮಾತನಾಡಿ ಇವತ್ತು ಅದರ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ. ಮುಂದಿನ ಸಭೆಯಲ್ಲಿ ನಿಗದಿ ಮಾಡುತ್ತೇವೆ ಎಂದರು.
ಇನ್ನೂ ಪುನಿತ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ವಿಚಾರವಾಗಿ ಮಾತನಾಡಿದಂತ ಅವರು, ಅದರ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದರು.