ಬಿಹಾರದಲ್ಲಿ ಕಳ್ಳ ಭಟ್ಟಿ ಭಾರೀ ದುರಂತ | ಶಂಕಿತ ನಕಲಿ ಮದ್ಯ ಸೇವಿಸಿ 24 ಮಂದಿ ಸಾವು

ಪಾಟ್ನ: ಶಂಕಿತ ನಕಲಿ ಮದ್ಯ ಸೇವಿಸಿ 24 ಮಂದಿ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿರುವ ಘಟನೆ ಬಿಹಾರ್‌ನಲ್ಲಿ ನಡೆದಿದೆ. ಅಲ್ಲಿನ ಪಶ್ಚಿಮ ಚಂಪಾರಣ್‌ ಜಿಲ್ಲೆಯ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ.

 

ಅಲ್ಲಿನ ತೆಲ್ಹುವಾ ಗ್ರಾಮದಲ್ಲಿ ಕಳ್ಳಭಟ್ಟಿ ಸೇವಿಸಿ ಗುರುವಾರ 8 ಮಂದಿ ಮೃತಪಟ್ಟಿದ್ದರು. ಮತ್ತೆ ಗೋಪಾಲ್‌ಗಂಜ್‌ನಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಆದ್ರೆ ಸತ್ತ 24 ಮಂದಿ ಸಾವಿಗೆ ನಿಖರ ಕಾರಣವನ್ನು ಜಿಲ್ಲಾಡಳಿತ ಇನ್ನೂ ಸ್ಪಷ್ಟಪಡಿಸಿಲ್ಲವಾದರೂ, ಅದು ಕಳ್ಳಬಟ್ಟಿ ಪ್ರಕರಣ ಎನ್ನುವುದು ಬಹುತೇಕ ಖಚಿತವಾಗಿದೆ. ತೆಲ್ಹುವಾದಲ್ಲಿ ಆಗಿರುವ ಕಳ್ಳಭಟ್ಟಿ ಪ್ರಕರಣವು ಉತ್ತರ ಬಿಹಾರ್‌ನಲ್ಲಿ ಸಂಭವಿಸಿದ ಮೂರನೇ ದುರಂತವಾಗಿದೆ. ಕಳೆದ 10 ದಿನಗಳ ಹಿಂದೆ ಇದೇ ಮಾದರಿಯಲ್ಲಿ ಸಾವು ಸಂಭವಿಸಿತ್ತು.

ಬಿಹಾರ ಸಚಿವ ಜಾನಕ್‌ ರಾಮ್‌ ಅವರು ಗೋಪಾಲ್‌ಗಂಜ್‌ಗೆ ಭೇಟಿ ನೀಡಿದ್ದಾರೆ. ನಂತರ ಮಾತನಾಡಿರುವ ಅವರು, ಶಂಕಿತ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿದ್ದೇನೆ. ಇದು ಎನ್‌ಡಿಎ ಸರ್ಕಾರದ ಮಾನಹಾನಿ ಮಾಡುವ ಪಿತೂರಿಯಾಗಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ್‌ಗಂಜ್‌ ಹಿರಿಯ ಪೊಲೀಸ್‌ ಅಧಿಕಾರಿ ಆನಂದ್‌ ಕುಮಾರ್‌, ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಜನರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡಗಳು ತನಿಖೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.