ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಪದಕ್ಕೆ ಜೀವ ತುಂಬಿದ ಯುವಶಕ್ತಿ!!ಸದಾ ಸಮಾಜಮುಖಿ ಕಾರ್ಯಗಳ ಮೂಲಕ ಕಳೆದ ಹತ್ತುವರ್ಷಗಳಿಂದ ತೆರೆಮರೆಯಲ್ಲಿದ್ದ ಗ್ರಾಮೀಣ ಯುವಕರ ತಂಡದ ಮುಡಿಗೇರಿತು ರಾಜ್ಯೋತ್ಸವ ಪ್ರಶಸ್ತಿಯ ಗರಿ!!
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಹಿರಿಯರ ಮಾತು ಎಷ್ಟು ಸತ್ಯ!!ಹಿರಿಯರ ಆ ಮಾತನ್ನು ಇಂದಿನ ಯುವ ಪೀಳಿಗೆ ಕೊಂಚವಾದರೂ ಉಳಿಸಿಕೊಂಡಿದೆ ಎಂಬುವುದಕ್ಕೆ ಅದೊಂದು ಯುವಕರ ತಂಡವೇ ಪ್ರತ್ಯಕ್ಷ ಸಾಕ್ಷಿ. ಹೌದು, ಅದೊಂದು ಉತ್ಸಾಹಿ ಯುವಕರಿಂದ ಕೂಡಿದ ಸಾಗರ, ಉತ್ತಮ ಕಾರ್ಯಾಚಟುವಟಿಕೆಗಳ ಮೂಲಕ ದೇಶ ವಿದೇಶಗಳಲ್ಲೂ ತನ್ನ ಇರುವಿಕೆಯನ್ನು ಗೊತ್ತು ಪಡಿಸಿದೆ.ಸಾವಿರ ಸಾವಿರ ಮಂದಿ ಯುವಕರು ಯಾವುದೇ ಅಪೇಕ್ಷೆ ಇಲ್ಲದೇ ನಿಸ್ವಾರ್ಥಿಗಳಾಗಿ ಹಗಲಿರುಳು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ ಯಾಕೆಂದರೆ ಅದು ‘ಯುವಶಕ್ತಿ’. ಗ್ರಾಮೀಣ ಯುವಕರು ಕಟ್ಟಿದ ಸಣ್ಣದೊಂದು ಶಕ್ತಿ, ಇಂದು ಹೆಮ್ಮರವಾಗಿ ಬೆಳೆಯುತ್ತಿದೆ, ಬೆಳೆದು ನಿಂತಿದೆ. ಇಂತಹ ಕಾಲಘಟ್ಟದಲ್ಲಿ ಆ ಶಕ್ತಿಗಳಿಗೆ ಸ್ಫೂರ್ತಿ ತುಂಬಲು,ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದಿದೆ.
ಹೌದು, ಒಗ್ಗಟ್ಟಿನ ಬಲಕ್ಕೆ ಉದಾಹರಣೆಯೆಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬ ಗ್ರಾಮೀಣ ಭಾಗದಲ್ಲಿ,ಸಮಾಜಕ್ಕೆ ಕಿಂಚಿತ್ತು ಸಹಾಯ ನೀಡುವ ಮನಸ್ಸಿನಯುವಕರನ್ನು ಒಗ್ಗೂಡಿಸಿಕೊಂಡು ಗ್ರಾಮದೊಡೆಯ ನರಸಿಂಹ ಸ್ವಾಮಿಯ ಜಾತ್ರೋತ್ಸವದಂದು ಕಾರ್ಯರೂಪಕ್ಕೆ ಬಂದ ಉತ್ಸಾಹಿ ಯುವಕರ ತಂಡವೇ ಯುವಶಕ್ತಿ ಕಡೇಶಿವಾಲಯ(ರಿ).ಹಲವಾರು ಒಳಿತಿನ ಚಿಂತನೆಗಳ ಮೂಲಕ ಹಲವಾರು ಯೋಜನೆಗಳನ್ನು ಹಾಕಿ ಅದರಲ್ಲಿ ಯಶಸ್ಸು ಕಂಡ ಯುವಶಕ್ತಿಯ ಪಾಲಿಗೆ ರಾಜ್ಯೋತ್ಸವ ಬಿರುದು ಒಲಿದಿದ್ದು ಯುವಕರಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಬೆರಳೆಣಿಯಷ್ಟು ಯುವಕರಿಂದ ಕೂಡಿದ್ದ ಈ ಶಕ್ತಿ, ಬೆಳೆಯುತ್ತಾ ತನ್ನ ವಿಸ್ತೀರ್ಣವನ್ನು ವಿಸ್ತರಿಸಿಕೊಂಡಿದ್ದು,ಅನೇಕ ಜನ ಅಶಕ್ತರ ಪಾಲಿಗೆ ನೆರವಾಗಿ, ಅನೇಕ ಮಂದಿ ಅನಾರೋಗ್ಯ ಪೀಡಿತರ ಬದುಕಿಗೆ ಹೊಸ ಬೆಳಕನ್ನು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗದು.ಅದಲ್ಲದೇ ಯುವಶಕ್ತಿ ರಕ್ತನಿಧಿ ಎಂಬ ಇನ್ನೊಂದು ಉಪನಾಮವನ್ನು ಹೊಂದಿ, ರಾಜ್ಯದ ರಾಜಧಾನಿ ಸಹಿತ ಗಡಿನಾಡ ಜಿಲ್ಲೆಗಳಿಗೂ ರಕ್ತ ಪೂರೈಕೆಗೆ, ರಕ್ತದ ಬೇಡಿಕೆಗೆ ಸ್ಪಂದಿಸಿ ಅನೇಕ ಸಾವು-ನೋವುಗಳನ್ನು ತಪ್ಪಿಸಿದ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ.ಯುವಶಕ್ತಿಯ ಕಾರ್ಯಾಚಟುವಟಿಕೆ, ಕೈಗೊಂಡು ಯಶಸ್ವಿಯಾದ ಯೋಜನೆಗಳನ್ನು ಹೇಳುತ್ತಾ ಹೋದರೇ ಪುಟವೇ ಸಾಲದು. ಅಂತಹ ಅದ್ಭುತ, ಸಾಗರದಷ್ಟು ವಿಶಾಲವಾದ ಸಹೋದರತ್ವ ಭಾವನೆಯ ಯುವಕರಿಗೆ ತನ್ನ ಮಡಿಲಲಿ ಸಮಾಜ ಸೇವೆಯ ಬೋಧನೆ ನಡೆಸುತ್ತಿರುವ ಜಿಲ್ಲೆಯ ಏಕೈಕ ತಂಡಕ್ಕೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಗರಿ ಮುಡಿಗೇರಿದ್ದು ಎಲ್ಲರಲ್ಲೂ ತಡೆಯಲಾರದ ಖುಷಿ ತಂದಿದೆ.
ಅದೇನೇ ಇರಲಿ. ಒಗ್ಗಟ್ಟಿನಲ್ಲಿ ಭದ್ರಕೋಟೆಯಾಗಿ ಸದಾ ಜಿಲ್ಲೆಯಲ್ಲಿ ಸಮಾಜಸೇವೆಯ ಗುರಿಹೊಂದಿರುವ ತಂಡ ಮುಂದೆಯೂ ಅನೇಕರ ಕಣ್ಣೊರೆಸುವ ಪುಣ್ಯದ ಕಾರ್ಯ ಕೈಗೊಳ್ಳಲಿ, ಆ ಮೂಲಕ ಅಶಕ್ತರನ್ನು ಶಕ್ತರನ್ನಾಗಿಸಲಿ,ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿ, ಇನ್ನಷ್ಟು ಸಮಾಜ ಸೇವೆಗೆ ಸದಾ ಮುಡಿಪಾಗಿರಲಿ ಎಂಬುವುದೇ ಆಶಯ.
?ದೀಪಕ್ ಹೊಸ್ಮಠ