ಆತನ ಹೆಬ್ಬಂಡೆ ಬೆನ್ನ ಮೇಲೆ ಬೆರಳ ನುಣುಪು ಬೆರೆಸಿ ಆಕೆಯ ಮರ್ದನ, ಕುಲುಕುವ ಸೊಂಟದ ಕೊಡ ರವಿಕೆ ಒದ್ದೆ ಮಾಡಿಕೊಂಡ ಸಂದರ್ಭ ಯಾವುದು ಗೊತ್ತಾ !!
ಮತ್ತೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ಸಾಲು ಸಾಲು ಆಚರಣೆಗಳ ಸಾಲಿನೊಂದಿಗೆ ಹಚ್ಚಿಟ್ಟ ದೀಪಗಳ ಸಾಲು. ಹಣತೆಗಳ ಮಂದ್ರ ಬೆಳಕಿನ ತೇಜದ ಜತೆ ಸ್ಪರ್ಧೆಗೆ ಬಿದ್ದು ಅಲೌಕಿಕ ವಾತಾವರಣ ಸೃಷ್ಟಿಸುವ ನಕ್ಷತ್ರ ಕಡ್ಡಿಯ ಕಿಡಿ.
ಪುಟ್ಟಿಯ ಕಣ್ಣಲ್ಲಿ ಬೆಳಕಿನ ನಕ್ಷತ್ರಗಳು ಅರಳುತ್ತವೆ. ಆತನಿಗೆ ಸುರ್ಸುರುಬತ್ತಿ ರುಚಿಸುವುದಿಲ್ಲ. ಪುಟ್ಟ ಬೀಡಿ ಪಟಾಕಿಗಾಗಿ ಕಣ್ಣು ನೆಟ್ಟು ಕೂತಿದ್ದಾನೆ. ಹರೆಯದ ಹುಡುಗರು ರಾಕೆಟ್ ಬಾಂಬ್ ಗಳ ಹುಡುಕಾಟದಲ್ಲಿದ್ದರೆ, ಅದ್ರತ್ತಲೂ ಪುಟ್ಟನದು ಒಂದು ಕುತೂಹಲದ ಕಣ್ಣು. ಅತನಿಗೆ ಯಾವುದೇ ಸಣ್ಣದು, ಚಿಕ್ಕದು ಕಣ್ಣಿಗೆ ಬೀಳುವದಿಲ್ಲ. ದೊಡ್ಡದರ ಸನಿಹಕ್ಕೆನೆ ಆತನ ಗಮನ.
ದೀಪಾವಳಿಯ ದಿನದಂದು ಮಾಡುವ ಅಭ್ಯಂಜನಕ್ಕೆ ಇದೆ ದೊಡ್ಡ ಮಹತ್ವ. ಕೆಲ ದಶಕಗಳ ಹಿಂದೆ ಇದ್ದ ಸ್ನಾನದ ಮನೆಯ ಚಿತ್ರಣವೇ ಬೇರೆ. ಈಗ ಬಾತ್ ರೂಮ್ ಮಾಡರ್ನ್ ಆಗಿದೆ. ಆದರೆ ಅಲ್ಲಲ್ಲಿ ಉಳಿದ ಹಳೆಯ ಪಳೆಯುಳಿಕೆಯಂತಹ ಸ್ನಾನದ ಮನೆಗಳು ಇನ್ನೂ ಕುದಿ ನೀರು ಬೇಯಿಸುತ್ತಿವೆ. ನಿಜಕ್ಕೂ ಅಂದಿನದು ಸ್ನಾನದ ಮನೆಯಾ ? ಅಲ್ಲವೆ ಅಲ್ಲ. ಅದು ಸಣ್ಣ ಸೈಜಿನ ಬಾವಿಗೆ ಇಳಿದ ಅನುಭವ. ಕೇವಲ ಮಂಡೆ ಮಾತ್ರ ಇಣುಕುವ ತಾಮ್ರದ ಹಂಡೆಯ ಬುಡದಲ್ಲಿ ಅತ್ತ ಕಡೆಯಿಂದ ನಿಗಿ ನಿಗಿ ಕೆಂಡದ ಬಿಸಿ. ಹಂಡೆಯ ಬಾಯಿಗೆ ಮರದ ಮುಚ್ಚಳ.
ಇದಕ್ಕೂ ಮುನ್ನ ಸೇದು ಬಾವಿಯ ಕಟ್ಟೆ ಶುಚಿಗೊಳಿಸಿ, ಅದಕ್ಕೆ ಹೂವಿನ ಹಾರ ಹಾಕಿ ಪೂಜೆ ಮಾಡಲಾಗುತ್ತದೆ. ನಂತರ ತುಳಸಿಕಟ್ಟೆ ಪೂಜೆ. ತದನಂತರ ಬಾವಿಯಿಂದ ನೀರು ಸೇದಿ ನೀರಿನ ಮಂಡೆ ತುಂಬಿಸುವ ಕೆಲಸ. ಆ ಹಂಡೆಯದು ಆನೆಯ ಹೊಟ್ಟೆ. ಎಷ್ಟು ಸೇದಿ ತುಂಬಿಸಿದರೂ ಸುಲಭಕ್ಕೆ ಆತನ ಹೊಟ್ಟೆ ತುಂಬದು. ಪೂರ್ತಿ ಹಂಡೆ ತುಂಬಿಸುವಶ್ಟರಲ್ಲಿ ಕುಲುಕುವ ಸೊಂಟದ ಮೇಲೆ ಹೊತ್ತ ಕೊಡದ ನೀರಿನ ಜತೆ ಆಕೆಯ ಬೆವರ ಹನಿ ಗೆಳೆತನ ಬೆಳೆಸಿ ಆಕೆಯ ರವಿಕೆ ಒದ್ದೆ ಮಾಡಿದೆ.
ಅದೆನ್ನೆಲ್ಲ ಸಂಭ್ರಮದಿಂದಲೇ ಆಕೆ ಮಾಡುತ್ತಾಳೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಆಕೆಗೆ ಮತ್ತು ಆತನಿಗೆ ಇದು ಮೊದಲ ದೀಪಾವಳಿ. ರಾಯರು ಮಾವನ ಮನೆಗೆ ಬರುವ ಹೊತ್ತಲ್ಲಿ
ಎಲ್ಲವನ್ನೂ ರೆಡಿ ಮಾಡಿ ಇಡುವ ಆತುರ ಆಕೆಗೆ.
ಬಿಸಿ ನೀರ ಹಂಡೆಯ ಕೊರಳಿಗೆ ಹಿಂದಿನ ದಿನವೇ ಹೂವಿನ ಹಾರ ಬಿಸಿಗೆ ಬಾಡಿ ಕೂತಿದೆ. ನಸುಕಿನಲ್ಲಿ ಹಚ್ಚಿದ ಕಿಡಿ ಈಗ ಮಂಡೆಯಲ್ಲಿ ಹಬೆ ಸೃಷ್ಟಿಸಿ ಕುದೀತಿದೆ. ಪಕ್ಕದಲ್ಲೇ ಕೊರಳು ಕೊಂಕಿದ, ಪಕ್ಕೆ ತಿವಿದು ಗಾಯಗೊಂಡ ಅಲ್ಯುಮಿನಿಯಂ ಚೊಂಬು.
ಆತನದೋ ದಿನವಿಡೀ ( ರಾತ್ರಿಯಿಡೀ ಸಹ !) ದುಡಿದ ಜೀವ. ವರ್ಷವಿಡೀ ಸದಾ ಕುದುರೆಯಂತೆ ಬೆವರುವ ಆತನ ಬೆನ್ನಿಗೆ ಮೊದಲಿಗೆ ಎಣ್ಣೆಯ ಜತೆಗೆ ಬೆರಳ ನುಣುಪು ಬೆರೆಸಿ ಮರ್ದನ. ಆತನ ಬಂಡೆಯಂತಹ ಬೆನ್ನಮೇಲೆ ಅದ್ಯಾವುದೋ ಅಗೋಚರ ಸಾಹಿತ್ಯ ಬರೆದು, ತಿದ್ದಿ ಮತ್ತೆ ಗೀಚಿ ಹಾಕಿ ಕೊನೆಗೆ ಅಂಗೈಗೆ ಎಣ್ಣೆ ತುಂಬಿಕೊಳ್ಳುತ್ತಾಳೆ. ಮತ್ತೊಂದಷ್ಟು ಬೆನ್ನಮೇಲೆ ಬೆರಳ ಸವಾರಿ. ನಂತರ ಕುದಿ ನೀರಿನ ತರ್ಪಣ.
ಈ ವರ್ಷ ಮತ್ತೆ ದೀಪಾವಳಿಯ ಬಣ್ಣದಲ್ಲಿ ಮಿಂದೇಳಲಿದೆ ಸಮಗ್ರ ಭಾರತ. ಎಲ್ಲದರ ಬೆಲೆ ಏರಿಕೆ ಆದ ಈ ಕಾಲದಲ್ಲಿ ಹಬ್ಬವನ್ನು ಗಮ್ಮತ್ತಾಗಿ ಆಚರಿಸುವುದು ಹೇಗೆ ? ಒಳ್ಳೆಯ ಅಡುಗೆ ಬೇಯಿಸುವುದು ಎಂತು, ಸುಡುಮದ್ದಿನ ಬೆಲೆ ಕೈಸುಡು ದಿಲ್ಲವೆ ? ದುಡ್ಡಿದ್ದರೆ ಮಾತ್ರ ಈ ಪಟಾಕಿ ಹಬ್ಬ ಎಲ್ಲವೂ ಎಂದನ್ನಿಸಿಬಿಡುವುದು ನಿಜ.
ಹಿಂದೆ ಚಿತ್ರನಟ ಯಶ್ ಅವರದೊಂದು ಡೈಲಾಗ್ ಬಂದಿತ್ತು. ‘ಪಟಾಕಿ ಯಾರದ್ದೇ ಇರಲಿ ಹಚ್ಚುವವರು ನಾವಾಗಬೇಕು’ ಎಂದು. ಈಗ ಡೈಲಾಗ್ ಬದಲಿಸಬೇಕಾಗಿ ಬಂದಿದೆ.
‘ಪಟಾಕಿ ಯಾರದ್ದೇ ಇರಲಿ, ಅದನ್ನು ಯಾರೇ ಹಚ್ಚಲಿ, ಆ ಬೆಳಕನ್ನು ಕಣ್ಣು ತುಂಬಿಸಿಕೊಳ್ಳುವವರು ನಾವಾಗಬೇಕು. ಆ ಸಂಭ್ರಮದಲ್ಲಿ ಸಂಭ್ರಮಿಸುವವರು ನಾವಿರಬೇಕು.’ ನಾವು ಮಾತ್ರ ಅಲ್ಲ, ಯಾರೋ ಒಬ್ಬರು ಹಚ್ಚುವ ಬೆಳಕನ್ನು ಸುತ್ತಲ ದೊಡ್ಡ ಜಗತ್ತು ಕಣ್ಣು ತುಂಬಿಕೊಳ್ಳಬಹುದು. ಅಂತಹ ಹಬ್ಬವೇ ದೀಪಾವಳಿ !
ಸುಡುಮದ್ದು ನಮಗೆ ಸಿಗದೆ ಹೋದರೂ ದೀಪಾವಳಿಯ ಬೆಳಕು ನಮ್ಮತ್ತ ಚೆಲ್ಲುವುದನ್ನು ಯಾರೂ ತಡೆಯಲಾರರು.
ನಾವು ಹಚ್ಚುವ ಪಟಾಕಿಯ ಸದ್ದನ್ನು ನಾವು ನಮ್ಮೊಳಗೆ ಬಚ್ಚಿಟ್ಟುಕೊಳ್ಳಲಾರೆವು. ಉರಿಯುವ ಹಣತೆ ಅಂಗಳ ಬೆಳಗುವುದಲ್ಲದೆ ಮನಸ್ಸನ್ನೂ ಬೆಳಗಿ ಹಗುರ ಮಾಡಬಲ್ಲುದು.
ಬಡತನ, ಅಭಾವ ಮತ್ತು ಬೆಲೆಯೇರಿಕೆ ಹಬ್ಬದ ಸಂತೋಷವನ್ನು ಕಸಿಯಲಾಗದು. ಒಂದು ಹೊಸ ವರ್ಷಕ್ಕೆ, ಮತ್ತೊಂದು ಉತ್ಸಾಹೀ ಅಧ್ಯಾಯಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ. ದೊಡ್ಡದಾಗಿ ಈ ದೀಪಾವಳಿಯನ್ನು ಆಚರಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಸಂಪಾದಕರು : ಸುದರ್ಶನ್ ಬಿ ಪ್ರವೀಣ್, ಬೆಳಾಲು