ಇತ್ತೀಚಿಗೆ ಚಿಕಿತ್ಸೆ ಪಡೆದುಕೊಂಡಿದ್ದ ಪುನೀತ್ ರಾಜ್​ಕುಮಾರ್ ಆ ಒಂದು ತಪ್ಪು ಮಾಡಬಾರದಿತ್ತು ಎಂದ ವೈದ್ಯರು !!? | ಹಾಗಾದರೆ ಅಪ್ಪುಗೆ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆ ಕಾಡಿತ್ತಾ??

ನಿನ್ನೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಇಡೀ ಭಾರತ ಚಿತ್ರರಂಗಕ್ಕೆ ಕರಾಳ ದಿನ. ಯಾರೂ ಊಹಿಸಲಾಗದ ಘಟನೆಯೊಂದು ಬರಸಿಡಿಲಿನಂತೆ ಬಡಿದು, ಕೋಟ್ಯಾಂತರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಚಂದನವನದ ಪವರ್ ಸ್ಟಾರ್, ಮೇರುನಟ ಡಾ.ರಾಜ್​ಕುಮಾರ್ ಅವರ ಕೊನೆಯ ಪುತ್ರ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಅಭಿಮಾನಿಗಳ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಒಬ್ಬ ಶ್ರೇಷ್ಠ ನಾಯಕನೇ. ಬದುಕಿನಲ್ಲಿ ಒಮ್ಮೆಯಾದರೂ ಪುನೀತ್​ರನ್ನು ಭೇಟಿಯಾದವರು ಸದಾ ಅವರನ್ನು ನೆನಪಿಸಿಕೊಳ್ಳುವುದು ಅವರ ಸರಳತೆ ಮತ್ತು ಸಭ್ಯತೆಯ ಬಗ್ಗೆಯೇ. ತಾನೊಬ್ಬ ದೊಡ್ಡ ಸ್ಟಾರ್, ಡಾ ರಾಜ್ ಕುಮಾರ್ ರಂಥಾ ಮೇರುನಟನ ಪುತ್ರ ಎನ್ನುವುದನ್ನು ಎಂದೂ ತೋರಿಸಿಕೊಳ್ಳದ, ಜನರ ಮನೆ ಮಗನಂಥಾ ವ್ಯಕ್ತಿ ಅಪ್ಪು.

ಅಪ್ಪು ಅದೆಷ್ಟು ಫಿಟ್ ಆಗಿದ್ರು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ತಮ್ಮ ಫಿಟ್​ನೆಸ್​ನಿಂದ ಪ್ರೂವ್ ಮಾಡಿದ್ದರು ಅಪ್ಪು. ಆದರೆ ಈಗ ಅವರ ನಿಧನದ ನಂತರ ಪುನೀತ್ ಅನಾರೋಗ್ಯದ ಸಂಬಂಧವಾಗಿ ಕೆಲವೊಂದಷ್ಟು ವಿಚಾರಗಳು ಹೊರಬರುತ್ತಿವೆ.

ಕಾಲು-ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್

ಮಲ್ಲೇಶ್ವರಂನ ಖ್ಯಾತ ಫಿಸಿಯೋಥೆರಪಿ ಕ್ಲಿನಿಕ್ ‘ಲಾ ಯಾತ್ರಾ’ ಗೆ ಅಪ್ಪು ಬೆನ್ನು ನೋವಿನ ಚಿಕಿತ್ಸೆಗೆ ಹೋಗುತ್ತಿದ್ದರಂತೆ. ಕೇವಲ 3 ವಾರಗಳ ಹಿಂದಷ್ಟೇ ಬೆನ್ನು ಮತ್ತು ಮೀನಖಂಡದ ಮಸಲ್ ಕ್ಯಾಚ್ ಆಗಿದೆ ಎಂದು ಅಲ್ಲಿನ ವೈದ್ಯ ಡಾ ಪಳನಿವೇಲ್ ರನ್ನು ಭೇಟಿ ಮಾಡಿದ್ದರಂತೆ ಅಪ್ಪು. ಅವರಿಗೆ ಎರಡು ಸೆಶನ್ ಫಿಸಿಯೋ ಮತ್ತು ಮಸಾಜ್ ಮಾಡಿ ನೋವಿನಿಂದ ಮುಕ್ತಿ ನೀಡಿದ್ದರು ಇಲ್ಲಿನ ತಜ್ಞರ ತಂಡ. ಯುವರತ್ನ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಖುದ್ದು ಪುನೀತ್ ಡಾ ಪಳನಿವೇಲ್​ಗೆ ತಿಳಿಸಿದ್ದರಂತೆ.

ಸರಳತೆಯ ಮೂರ್ತಿ ಅಪ್ಪು

ಸಾಮಾನ್ಯವಾಗಿ ದೊಡ್ಡ ಸ್ಟಾರ್​ಗಳು ಫಿಸಿಯೋಥೆರಪಿಸ್ಟ್​ಗಳನ್ನು ತಮ್ಮ ಮನೆಗೇ ಕರೆಸಿಕೊಂಡು ಚಿಕಿತ್ಸೆ ಪಡೆಯುತ್ತಾರೆ. ಆದ್ರೆ ಪುನೀತ್ ತಾವಾಗೇ ಕ್ಲಿನಿಕ್ ಗೆ ಹೋಗಿ ಟ್ರೀಟ್ಮೆಂಟ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿರುವ ಪ್ರತೀ ಸಿಬ್ಬಂದಿಯೂ ಅಪ್ಪು ಜೊತೆ ಫೋಟೋ ತೆಗೆಸಿಕೊಳ್ಳಲು ಆಸೆ ವ್ಯಕ್ತಪಡಿಸಿದಾಗ ಒಂಚೂರೂ ಬೇಸರಿಸಿಕೊಳ್ಳದೇ ಪ್ರತಿಯೊಬ್ಬರೊಂದಿಗೂ ಸೆಲ್ಫಿಗೆ ಪೋಸ್ ಕೊಟ್ಟಿದ್ದರು ಪುನೀತ್.

ಅದೊಂದು ಸ್ವಲ್ಪ ಅವಾಯ್ಡ್ ಮಾಡಿ ಎಂದಿದ್ದರಂತೆ ವೈದ್ಯರು

ಇದೆಲ್ಲದರ ನಡುವೆ ನೋವು ಸರಿಯಾಗುವವರಗೆ ಡ್ಯಾನ್ಸ್​ ಮಾಡುವುದನ್ನು ಸ್ವಲ್ಪ ತಡೆದರೆ ಒಳ್ಳೆಯದು ಎಂದು ವೈದ್ಯರು ಹೇಳಿದ್ದರಂತೆ. ಆದರೆ ಪುನೀತ್ ಕೇಳುತ್ತಿರಲಿಲ್ಲ. ಸಿನಿಮಾ ಶೂಟಿಂಗ್​ಗೆ ತೆರಳಿದಾಗ ಅಲ್ಲಿ ಅಗತ್ಯ ಇರುವ ಕೆಲಸವನ್ನು ಮಾಡಲೇಬೇಕು ಎನ್ನುವುದು ಅವರ ಅಭಿಪ್ರಾಯ. ಹಾಗಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನೋವಿನ ನಡುವೆಯೂ ಡ್ಯಾನ್ಸ್​ ಮಾಡ್ತಿದ್ದರಂತೆ ಅಪ್ಪು. ಇದನ್ನು ಲಾ ಯಾತ್ರ ತಜ್ಞರು ನೆನಪಿಸಿಕೊಳ್ಳುತ್ತಾರೆ.

ಆದರೆ ಪುನೀತ್ ಆರೋಗ್ಯವಂತ ವ್ಯಕ್ತಿ. ಈ ಎರಡು ಮಸಲ್ ಕ್ಯಾಚ್ ಬಿಟ್ಟರೆ ಉಳಿದಂತೆ ಪುನೀತ್ ಬಹಳ ಆರೋಗ್ಯವಾಗಿದ್ದರು. ನಾವು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಒಂದೇ ಒಂದು ಸಣ್ಣ ಅನಾರೋಗ್ಯದ ಕುರುಹೂ ಇಲ್ಲದೆ ಹೀಗೆ ಧಿಡೀರನೆ ಅಪ್ಪು ಅಗಲಿದ್ದು ನಮಗೂ ಶಾಕ್ ಆದಂತಿದೆ ಎನ್ನುತ್ತಾರೆ ಡಾ ಪಳನಿವೇಲ್. ಎಲ್ಲರೊಂದಿಗೆ ಬೆರೆತು, ಎಲ್ಲರೊಳಗೆ ಒಂದಾಗುತ್ತಿದ್ದ ಅಪ್ಪುವನ್ನು ನೆನೆಸಿಕೊಂಡು ಅವರೂ ದುಃಖದಲ್ಲಿದ್ದಾರೆ.

Leave A Reply

Your email address will not be published.