ವಿಶ್ವದಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಟಿ !! | ತೆಂಗು ಕೃಷಿಕರ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಲಿದೆ ಈ ಕಲ್ಪವೃಕ್ಷ
ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯ ಮರದಿಂದ ಹಿಡಿದು ತೆಂಗಿನಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ.ದೇವರ ಪೂಜೆಯಿಂದ ಹಿಡಿದು ಪ್ರತಿಯೊಂದು ಕಾರ್ಯಕ್ಕೂ ಅಮೂಲ್ಯವಾಗಿದೆ.ಇದರ ಕುರಿತಾಗಿ ವಿಜ್ಞಾನಿಗಳು ಸಂಶೋಧನೆಯೊಂದನ್ನು ಮಾಡಿದ್ದು,ಜಗತ್ತಿನಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಠಿಸುವಲ್ಲಿ ಬೆಲ್ಜಿಯಂನ ಜೀವಶಾಸ್ತ್ರ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ
ಬೆಲ್ಜಿಯಂನ ಕೆ.ಯು.ಲೀವನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತದ್ರೂಪು ಸೃಷ್ಟಿಯ ಮೂಲಕ ತೆಂಗಿನ ಸಸಿಗಳು ಬೇಗ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ತೆಂಗಿನ ವಂಶವಾಹಿ ಗುಣಗಳನ್ನು ದೀರ್ಘಾವಧಿಗೆ ಸಂರಕ್ಷಿಸಿಡುವ ವಿಧಾನವನ್ನೂ ಕಂಡುಹಿಡಿದಿದ್ದು, ಇದರಿಂದ ಭಾರತ ಮುಂತಾದ ದೇಶಗಳಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿರುವ ಹಳದಿ ರೋಗ, ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರುವಿಕೆ ಹಾಗೂ ತೆಂಗಿನ ತೋಟಗಳು ಹಳೆಯದಾಗಿರುವುದು ಮುಂತಾದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ತೆಂಗಿನ ಬೀಜವು ಒಂದೇ ಮೊಳಕೆಯೊಡೆದು, ರೆಂಬೆಗಳಿಲ್ಲದೆ ನೇರವಾಗಿ ಬೆಳೆಯುವುದರಿಂದ ಅದರ ತದ್ರೂಪು ಸೃಷ್ಟಿಸಾಧ್ಯವಿರಲಿಲ್ಲ. ಹೊಸ ಕಸಿ ವಿಧಾನದ ಮೂಲಕ ಅದನ್ನು ವಿಜ್ಞಾನಿಗಳು ಈಗ ಮಾಡಿದ್ದಾರೆ. ಇದರಿಂದಾಗಿ ಒಂದೇ ಬೀಜದಿಂದ ಹಲವು ತೆಂಗಿನ ಸಸಿಗಳನ್ನು ತಯಾರಿಸಬಹುದು. ಇದರಿಂದ ರೈತರಿಗೆ ತೆಂಗಿನ ತೋಟ ಮಾಡುವ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಈ ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಯಾವಾಗ ಸಿಗುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿಲ್ಲ.