ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಜಾವೆಲಿನ್ ನಲ್ಲಿ ಈಟಿ ಬೀಸಿದ ಸುಮಿತ್ ಅಂಟಿಲ್ | ಫೈನಲ್ಸ್ ನಲ್ಲಿ ತನ್ನ ದಾಖಲೆಯನ್ನು ತಾನೇ ಮುರಿದು ವಿಶ್ವದಾಖಲೆ ನಿರ್ಮಿಸಿದ ಸುಮಿತ್ !!
ಟೋಕಿಯೊ : ಪ್ಯಾರಾಲಿಂಪಿಕ್ಸ್ ಪುರುಷರ ಜಾವೆಲಿನ್ ಎಸೆತ ಎಫ್64 ಅಂತಿಮ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಅಂಟಿಲ್ ಉತ್ತಮ ಆಟ ಪ್ರದರ್ಶಿಸಿ, ಚಿನ್ನದ ಪದಕ ತಮ್ಮದಾಗಿಸುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರ ಭಾರತಕ್ಕೆ ಚಿನ್ನದ ಪದಕ ಗೆದ್ದುತರುವ ಮೂಲಕ ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದರು. ಇದೀಗ ಟೋಕಿಯೊದಲ್ಲಿ ನಡೆದ ಫೈನಲ್ ನಲ್ಲಿ ಸುಮಿತ್ ಅಂಟಿಲ್ ಒಮ್ಮೆಯಲ್ಲ, ಎರಡು ಬಾರಿಯಲ್ಲ ,ಮೂರು ಸಾರಿ ತನ್ನ ಅಂಗವೈಕಲ್ಯದ ಮಧ್ಯೆಯೂ ಬಲವಾಗಿ ಈಟಿ ಬೀಸಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಮೊದಲನೇ ಎಸೆತದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಸುಮಿತ್, ನಂತರದ ಪ್ರಯತ್ನಗಳಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದು ಗಮನ ಸೆಳೆದರು. ಮೊದಲನೇ ಪ್ರಯತ್ನದಲ್ಲಿ 66.95ಮೀಟರ್ ದೂರ ಎಸೆತ ಸಾಧಿಸಿ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆ ಮಾಡಿದರು. ನಂತರ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ದೂರ ಎಸೆದರು, ಐದನೇ ಪ್ರಯತ್ನದಲ್ಲಿ 68.55ಮೀಟರ್ ದೂರ ಎಸೆದು ದಾಖಲೆ ಸಾಧಿಸಿದರು. ಇದರೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು,ಭಾರತೀಯ ಧ್ವಜದೊಂದಿಗೆ ಸಂಭ್ರಮಾಚರಿಸಿ ವಿಶ್ವ ದಾಖಲೆಯ ಅಧಿಕೃತ ದೃಢೀಕರಣದೊಂದಿಗೆ ಪೋಸ್ ನೀಡಿದ್ದಾರೆ.
ಸಹ ಭಾರತೀಯ ಸಂದೀಪ್ ಚೌಧರಿ 62.20 ಮೀ. ಅತ್ಯುತ್ತಮ ಎಸೆತದೊಂದಿಗೆ ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಮಿಚಲ್ ಬುರಿಯನ್ 66.29 ಮೀ.ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದರೆ, ಶ್ರೀಲಂಕಾದ ದುಲನ್ ಕೊಡಿತುವಾಕ್ಕು ಕಂಚಿನ ಪದಕವನ್ನು ಮನೆಗೆ ಕೊಂಡೊಯ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಸಾಧನೆ ಮಾಡಿದ ಸುಮಿತ್ ಅವರನ್ನು ಅಭಿನಂದಿಸಿದ್ದು, ನಮ್ಮ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ ನಲ್ಲಿ ಮಿಂಚುತ್ತಿದ್ದಾರೆ. ಕುಸ್ತಿಪಟು-ಜಾವೆಲಿನ್ ಎಸೆತಗಾರ ಈಗ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಎರಡನೇ ಚಿನ್ನವನ್ನು ಮುಡಿಗೇರಿಸಿಕೊಂಡರು. ಪುರುಷರ ಎಫ್ 64 ವರ್ಗದ ವಿಶ್ವದಾಖಲೆಯನ್ನು ಹಲವಾರು ಬಾರಿ ಭರ್ಜರಿ ಆಟವಾಡಿ ಭರ್ಜರಿ ಪ್ರದರ್ಶನ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ ಸುಮಿತ್ ಅಂಟಿಲ್ ಗೆಲುವಿನ ನಂತರ, ಇದು ‘ಅತ್ಯುತ್ತಮವಲ್ಲ ಇದು ಅತ್ಯುತ್ತಮವಲ್ಲ’ ಎಂದು ಹೇಳಿದ್ದಾರೆ. ಚಿನ್ನ ಗೆದ್ದಾಗ ಮತ್ತು 68.55 ಮೀಟರ್‌ಗಳ ವಿಶ್ವದಾಖಲೆಯನ್ನು ಸ್ಥಾಪಿಸಿದಾಗ ಅವರು ಮಾತನಾಡಿ, ಇದು ನನ್ನ ಮೊದಲ ಪ್ಯಾರಾಲಿಂಪಿಕ್ಸ್ ಆಗಿದ್ದು, ಅದ್ಭುತವಾದ ಸ್ಪರ್ಧಿಗಳು ಇದ್ದ ಕಾರಣ ನಾನು ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ನಾನು 70 ಮೀಟರ್ ಪ್ಲಸ್ ಥ್ರೋಗೆ ಆಶಿಸುತ್ತಿದ್ದೆ, ಬಹುಶಃ ನಾನು 75 ಮೀ ಮಾಡಬಹುದು. ಇದು ನನ್ನ ಅತ್ಯುತ್ತಮವಲ್ಲ, ವಿಶ್ವ ದಾಖಲೆಯನ್ನು ಮುರಿದಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ತರಬೇತಿಯಲ್ಲಿ ನಾನು 71 ಮೀ, 72 ಮೀ, ಹಲವು ಬಾರಿ ಎಸೆದಿದ್ದೇನೆ. ಈ ಸ್ಪರ್ಧೆಯಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ. ಒಂದು ವಿಷಯ ಖಚಿತವಾಗಿ ಹೇಳುತ್ತೇನೆ. ಭವಿಷ್ಯದಲ್ಲಿ ನಾನು ಇನ್ನೂ ಉತ್ತಮವಾಗಿ ಎಸೆದು ಸಾಧನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.