ಪ್ಯಾರಾಲಂಪಿಕ್ಸ್ ಟೇಬಲ್ ಟೆನ್ನಿಸ್ ನ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾವಿನಾ ಪಟೇಲ್ | ಮೊದಲ ಬಾರಿ ಫೈನಲ್ ತಲುಪಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ನಾರಿ !
ಜಪಾನ್ ರಾಜಧಾನಿ ಟೋಕಿಯೊದ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ದುವ ಮೂಲಕ ಟೆನಿಸ್ನಲ್ಲಿ ಭಾರತದ ಮೊದಲ ಫೈನಲ್ ಗೆ ತಲುಪಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಟೇಬಲ್ ಟೆನಿಸ್ನ ಫೈನಲ್ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ವಿಫಲರಾದರು.ಆದರೆ, ಪ್ಯಾರಾಲಿಂಪಿಕ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತ ಈವರೆಗೆ ಫೈನಲ್ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್ಗೆ ತಲುಪುವ ಮೂಲಕ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಮೊದಲ ಪಂದ್ಯ 11-7 ಪಾಯಿಂಟ್ನಿಂದ ಭಾರತ ಕಳೆದುಕೊಂಡಿತು. ಎರಡನೇ ಸೆಟ್ನಲ್ಲೂ ಝೋ ಯಿಂಗ್ ಗೆಲುವು ಸಾಧಿಸಿ 2-0 ಯಿಂದ ಮುನ್ನಡೆ ಪಡೆದುಕೊಂಡರು. ಮೂರನೇ ಸೆಟ್ನಲ್ಲೂ ಭಾರತಕ್ಕೆ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಚೀನಾದ ಝೋಯಿಂಗ್ 3-0 ಅಂತರದಿಂದ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದರು. ಭಾವಿನಾ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾವಿನಾ ಅವರು 2016ರ ರಿಯೋ ಒಲಿಂಪಿಕ್ ಪದಕ ವಿಜೇತೆ ಚೀನಾದ ಮಿಯಾ ಝಂಗ್ ಅವರನ್ನು 3-2 ಅಂಕಗಳ ಅಂತರದಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿದ್ದರು. ಮೊದಲ ಸೆಟ್ನಲ್ಲಿ ಭಾವಿನಾ 7-11ರ ಹಿನ್ನಡೆ ಅನುಭವಿಸಿದರೆ, ನಂತರ ಭರ್ಜರಿ ಕಮ್ಬ್ಯಾಕ್ ಮಾಡಿದರು. ಎರಡನೇ ಸೆಟ್ನಲ್ಲಿ 11-7, 11-4, 9-11 ಮತ್ತು ಅಂತಿಮ ಸೆಟ್ನಲ್ಲಿ 11-8 ಅಂತರದಲ್ಲಿ ಗೆದ್ದು ಫೈನಲ್ಗೆ ಪ್ರವೇಶ ಪಡೆದರು.
ತನ್ನ 12 ನೇ ವಯಸ್ಸಿನಲ್ಲಿ ಪೋಲಿಯೊ ಪತ್ತೆಯಾದ 34 ರ ಹರೆಯದ ಭಾವಿನಾ, ನಾನು ನನ್ನನ್ನು ಅಂಗವಿಕಲೆ ಎಂದು ಪರಿಗಣಿಸುವುದಿಲ್ಲ ನಾನು ಏನನ್ನೂ ಮಾಡಬಲ್ಲೆ ಎಂದು ನನಗೆ ಯಾವಾಗಲೂ ವಿಶ್ವಾಸವಿದೆ. ನಾವು ಹಿಂದೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದೇನೆ. ಟೋಕಿಯೊದ ಪ್ಯಾರಾಲಿಂಪಿಕ್ಸ್ ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.