‘ಕಾಂಚನ -3’ ನಟಿ ಅಲೆಕ್ಸಾಂಡ್ರಾ ಜಾವಿ ಮನೆಯಲ್ಲಿ ಶವವಾಗಿ ಪತ್ತೆ | ಸಾವಿನ ಸುತ್ತ ಎದ್ದಿದೆ ಹಲವು ಅನುಮಾನಗಳು !!

2019ರಲ್ಲಿ ತಮಿಳಿನಲ್ಲಿ ತೆರೆಗೆ ಬಂದಿದ್ದ ‘ಕಾಂಚನ 3’ ಸಿನಿಮಾದಲ್ಲಿ ನಟಿಸಿದ್ದ ನಟಿ ಅಲೆಕ್ಸಾಂಡ್ರಾ ಜಾವಿ ಅನುಮಾನಾಸ್ಪದವಾಗಿ ಗೋವಾದಲ್ಲಿ ಮೃತಪಟ್ಟಿದ್ದಾರೆ.

 

ಇವರ ಸಾವು ಆತ್ಮಹತ್ಯೆ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಅಲೆಕ್ಸಾಂಡ್ರಾ ರಷ್ಯಾದವರಾಗಿದ್ದು, ಅಲ್ಲಿನ ಉತ್ತರ ಊರಾದ ಗೋವನ್​​​ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಾಯುವುದಕ್ಕೂ ಕೆಲ ದಿನಗಳ ಮೊದಲು ಅಲೆಕ್ಸಾಂಡ್ರಾ ಬಾಯ್​ಫ್ರೆಂಡ್​ ಮನೆಗೆ ಬಂದು ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಈಗ ಅಲೆಕ್ಸಾಂಡ್ರಾ ಮೃತದೇಹ ಪತ್ತೆ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಲೆಕ್ಸಾಂಡ್ರಾ, ಮನೆಯಲ್ಲಿರುವ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಸ್ಥರು ರಷ್ಯಾದಲ್ಲಿರುವುದರಿಂದ ಅವರಿಗೆ ಮಾಹಿತಿ ನೀಡಲಾಗಿದೆ.

ಆಕೆಯ ಬಾಯ್ ಫ್ರೆಂಡ್ ಮನೆಗೆ ಬಂದು ಹೋದ ಬಳಿಕ ಖಿನ್ನತೆಯಲ್ಲಿದ್ದರು ಮತ್ತು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ನೆರೆಹೊರೆ ಮನೆಯವರು ಹೇಳಿದ್ದಾರೆ.

ಸದ್ಯ ಇದನ್ನೆಲ್ಲಾ ಗಮನಿಸುತ್ತಿರುವ ಪೊಲೀಸರಿಗೆ ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ನಡೆಸಲು ಆರಂಭಿಸಿದ್ದಾರೆ. ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಾಲಿವುಡ್ ನಟ ರಾಘವ್ ಲಾರೆನ್ಸ್‌ಗೆ ಜೋಡಿಯಾಗಿ ಅಲೆಕ್ಸಾಂಡ್ರಾ ಕಾಂಚನಾ-3 ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲೂ ಒಳ್ಳೆಯ ಗಳಿಕೆ ಮಾಡಿತ್ತು.‘ಕಾಂಚನ 2’ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದೇ ಭರವಸೆಯಲ್ಲಿ ‘ಕಾಂಚನ 3’ ಮಾಡಲಾಗಿತ್ತು. ಈ ಸಿನಿಮಾ ಕೂಡ ಉತ್ತಮ ಗಳಿಕೆ ಮಾಡಿತ್ತು. ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

2019ರಲ್ಲಿ ಅಲೆಕ್ಸಾಂಡ್ರಾ ಸುದ್ದಿಯಾಗಿದ್ದರು. ಇದಕ್ಕೆ ಕಾರಣ ಚೆನ್ನೈ ಮೂಲದ ಫೋಟೋಗ್ರಾಫರ್​. ‘ಆತ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ’ ಎನ್ನುವ ಗಂಭೀರ ಆರೋಪ ಮಾಡಿದ್ದರು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ಫೋಟೋಗ್ರಾಫರ್​ನನ್ನು ಬಂಧಿಸಿದ್ದರು. ನಂತರ ಈತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದೀಗ ಈ ಫೋಟೋಗ್ರಾಫರ್​ ಏನಾದರೂ ಅಲೆಕ್ಸಾಂಡ್ರಾಗೆ ಬೆದರಿಕೆವೊಡ್ಡಿದ್ದನೇ ಎನ್ನುವ ಅನುಮಾನ ಕೂಡ ಮೂಡಿದೆ. ಪೊಲೀಸರು ಈ ವಿಚಾರವಾಗಿಯೂ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.