ಶ್ರೀ ಕ್ಷೇತ್ರ ಪರಿಚಯ: ಅಪರೂಪದ ಸಾಲಿಗ್ರಾಮಗಳ ಜಗತ್ತೇ ಅಲ್ಲಿದೆ!!ಸಾಲಿಗ್ರಾಮಗಳಿಂದ ಸಿಗುವ ಫಲವಾದರೂ ಏನು?ದ.ಕ ಜಿಲ್ಲೆಯಲ್ಲಿ ಅಂತಹ ಅದ್ಭುತವಿರುವ ಕ್ಷೇತ್ರವಾದರೂ ಯಾವುದು!!

ಪ್ರಕೃತಿದತ್ತವಾದ ಸುಂದರ ಸೊಬಗಿನ ಗ್ರಾಮೀಣ ಭಾಗದಲ್ಲಿ ಇರುವ ಹತ್ತೂರಿನ ಭಕ್ತರ ಪಾಲಿನ ಆರಾಧ್ಯ ಕೇಂದ್ರ.ಅದೊಂದು ಶ್ರದ್ಧಾ ಭಕ್ತಿಯ ಪವಿತ್ರ ಕ್ಷೇತ್ರ.ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮುಕಾಂಬಿಕೆ, ನಾರಾಯಣ ದೇವರನ್ನು ನಿತ್ಯವೂ ಆರಾಧಿಸುವ ಆರಾಧ್ಯ ತಾಣ.ಇಂತಹ ಆರಾಧ್ಯ ಸಾಧನಾಶ್ರಮದೊಳಗೆ ಕಾಲಿಟ್ಟರೆ ಸಾಕು ಸಾಲಿಗ್ರಾಮಗಳ ಸಾಮ್ರಾಜ್ಯವೇ ಕಣ್ಣೆದುರು ಬರುತ್ತದೆ.ಒಂದಕ್ಕಿಂತ ಮತ್ತೊಂದು ವಿಭಿನ್ನ.ಕಣ್ಣು ಅತ್ತಿತ್ತ ಮಿಟುಕಿಸದೆ ನೋಡಿದರೆ ಎರಡು ಕಣ್ಣು ಸಾಲದು ಎಂದೆನಿಸುವುದಂತು ಖಂಡಿತ.ಒಂದೆರಡಲ್ಲ, ಬರೋಬ್ಬರಿ 800 ಸಾಲಿಗ್ರಾಮಗಳ ಇಲ್ಲಿವೆ.

 

ಇಂತಹ ಅದ್ಬುತವಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮದಲ್ಲಿರುವ ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರುವಿನಲ್ಲಿ.ಮೂಡಬಿದ್ರೆಪೇಟೆಯಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಸಾಲಿಗ್ರಾಮ ಶಿಲೆಗಳಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿಸುತ್ತ ಕಣ್ಮನ ತಣಿಸುತ್ತಿದೆ.

ಈಶ ವಿಠಲದಾಸ ಸ್ವಾಮೀಜಿ

ಇಲ್ಲಿನ ಪ್ರಧಾನ ಆರಾಧ್ಯ ದೈವ ತಾಯಿ ಮೂಕಾಂಬಿಕೆ, ನಾರಾಯಣ, ಉಳಿದಂತೆ ವಿಠಲ, ಗಣಪತಿ, ವರದನಾರಾಯಣ. ಹನುಮಂತ, ಶ್ರೀಚಕ್ರ ಉಪದೇವರುಗಳು.

ಜಿಲ್ಲೆಯಲ್ಲಿ ಒಂದಕ್ಕಿಂತ ಮತ್ತೊಂದು ವಿಭಿನ್ನವಾದ, ಹೆಚ್ಚು ಆದಾಯ ಕೊಡುವ ಶ್ರೀಮಂತ ದೇವಾಲಯಗಳು ಒಂದೆಡೆಯಾದರೆ,ಅಲ್ಲೆಲ್ಲೂ ಇಲ್ಲದ ಕೋಟಿ ಸಾಲಿಗ್ರಾಮಗಳಲ್ಲಿ ಸಿಗುವಂತಹ ಅತೀ ವಿರಳವಾದಂತ ಸ್ವರ್ಣನಾಬಿ ಸಾಲಿಗ್ರಾಮ ಕೇಮಾರು ಕ್ಷೇತ್ರದಲ್ಲಿ ಕಾಣಸಿಗುವುದು ವಿಶೇಷದ ಜೊತೆಗೆ ಅಚ್ಚರಿಯೂ ಹೌದು.

ಸಾಲಿಗ್ರಾಮ ಎಂದರೆ ಏನು?ಸಾಲಿಗ್ರಾಮವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ ವಿಷ್ಣುವಿನ ಸಾನಿಧ್ಯ ಹೊಂದಿರುವಂತಹ ಶಿಲೆ. ವೈಷ್ಣವರ ಪಾಲಿನ ಹೃದಯ ಇದ್ದಂತೆ. ಅಷ್ಟು ಪಾವಿತ್ರ್ಯತೆ ಈ ಸಾಲಿಗ್ರಾಮ ಶಿಲೆಗಳಿಗೆ ಇದ್ದು,ಇವುಗಳನ್ನು ಭಕ್ತಿಯ ಜೊತೆಗೆ ಶ್ರದ್ಧಾಪೂರ್ವಕವಾಗಿ ಪೂಜಿಸಲಾಗುತ್ತದೆ.ಕರಾವಳಿ ಸಹಿತ ಕೆಲ ಭಾಗದಲ್ಲಿ ಎಲ್ಲಿಯೂ ಕಾಣ ಸಿಗದಂತಹ ಅಪರೂಪದಲ್ಲಿ ಅಪರೂಪವಾದ ಸಾಲಿಗ್ರಾಮ ಶಿಲೆಗಳು ಇಲ್ಲಿ ಕಾಣ ಸಿಗುತ್ತವೆ ಎಂದಾದರೆ ಒಂದರೆಕ್ಷಣ ಅಚ್ಚರಿಯಾದರೂ ಅದು ಸತ್ಯ.

ಯಾವುದೇ ಒಂದು ಕ್ಷೇತ್ರವನ್ನು, ಶ್ರೀ ಕ್ಷೇತ್ರ ಎಂದು ಕರೆಯಬೇಕಾದರೆ ಕನಿಷ್ಠ 12 ಸಾಲಿಗ್ರಾಮಗಳಾದರೂ ಅಲ್ಲಿ ಇರಬೇಕು ಎಂಬ ನಂಬಿಕೆ ಇದೆ. ಚಕ್ರಾಣಿಕೆ, ವಿಷ್ಣುಪಾದ, ಲಾವಂಚ, ಪಚ್ಚೆ ಕರ್ಪೂರ, ಶ್ರೀಗಂಧ ಸೇರಿದಂತೆ ಇನ್ನಿತರೆ ಸುವಸ್ತುಗಳನ್ನು ಹಾಕಿ ಸಾಲಿಗ್ರಾಮ ಶಿಲೆಯ ಮೂಲಕ ಕೊಡುವ ತೀರ್ಥ ಶ್ರೇಷ್ಠವಾದದ್ದು ಎಂಬ ನಂಬಿಕೆಯೂ ಇದ್ದು,ಈ ತೀರ್ಥ ಸೇವಿಸಿದರೆ ಮನಸ್ಸು, ದೇಹ ಶುದ್ಧವಾಗುತ್ತದೆ ಎಂಬ ನಂಬಿಕೆ.ಸಾಲಿಗ್ರಾಮದ ದರ್ಶನ, ಸ್ಪರ್ಷಣ, ತೀರ್ಥ ಪೋಕ್ಷಣ, ತೀರ್ಥ ಸೇವನೆ ಮಾಡಿದರೆ ಎಲ್ಲಾ ಮನೋಸಂಬಂಧಿ, ವ್ಯಾಧಿ ಕಡಿಮೆ ಆಗುತ್ತದೆ ಎಂಬ ಪ್ರತೀತಿಯೂ ಇದೆ.

ಕ್ಷೇತ್ರದಲ್ಲಿರುವ ಸಾಲಿಗ್ರಾಮಗಳೆಷ್ಟು?

ಭೂವರಾಹ, ನರಸಿಂಹ, ಕಪಿಲ ನರಸಿಂಹ, ಲಕ್ಷ್ಮೀ ನರಸಿಂಹ, ಉಗ್ರ ನರಸಿಂಹ, ಕಲ್ಯಾಣ ನರಸಿಂಹ, ಸುದರ್ಶನ, ಮಹಾಸುದರ್ಶನ, ಭೂಗರ್ಭ, ಗಣಪತಿ, ಲಕ್ಷ್ಮಿನಾರಾಯಣ, ಗೋಪಾಲಕೃಷ್ಣ, ಬ್ರಹ್ಮಾಂಡ, ಜನಾರ್ದನ, ತ್ರಿವಿಕ್ರಮ, ವಿಶಿಷ್ಟವಾದ ಲಕ್ಷ್ಮಿ ಕೃಷ್ಣ ಸಾಲಿಗ್ರಾಮ,ಆದಿಶೇಷ ಸೇರಿದಂತೆ ಹಲವಾರು ವಿಧದ ಬರೋಬ್ಬರಿ 800 ಸಾಲಿಗ್ರಾಮಗಳಿದ್ದು ನೋಡುತ್ತಾ ಹೋದರೆ ಕಣ್ಣು ಸಾಲದು, ವಿವರಿಸಲು ಪುಟಗಳು ಸಾಲದು.

ಇಂತಹ ಸಾಲಿಗ್ರಾಮ ಸೃಷ್ಟಿಯಾಗುವುದಾದರೂ ಎಲ್ಲಿ?

ನೇಪಾಳದ ಮಸ್ತಾಂಗ್ ಎಂಬ ಪ್ರದೇಶದ ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ – ಗಂಡಕಿ ನದಿ ಸಮೀಪವಿರುವ ಶಾಲ ಎಂಬ ಗ್ರಾಮದಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪವನ್ನು ಪಡೆಯುತ್ತದೆ. ಗಂಡಕಿ ನದಿಯ ಪಾತ್ರದಲ್ಲಿ ಮುಕ್ತಿನಾಥ, ದಾಮೋದರ ಕುಂಡಗಳನ್ನು ಸಾಲಿಗ್ರಾಮ ಕ್ಷೇತ್ರ ಎಂದು ಹೇಳಲಾಗುತ್ತದೆ.

ವಜ್ರಕೀಟ ಎಂಬ ಹುಳು ವಜ್ರದ ಹಲ್ಲುನ್ನು ಹೊಂದಿದ್ದು,ಈ ಕೀಟವು ಕಲ್ಲಿನೊಳಗೆ ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ತನ್ನ ಹಲ್ಲುಗಳಿಂದ ತೂತು ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನದ ಬಣ್ಣ ಉತ್ಪತ್ತಿಯಾಗುತ್ತದೆ. ಹಳದಿ, ಕೆಂಪು, ನೀಲಿ, ಹಸಿರು ಬಣ್ಣಗಳಿಂದ ಕೂಡಿದ್ದಾಗಿದ್ದು, ಇವು ಅತ್ಯಂತ ಶ್ರೇಷ್ಠವಾದದ್ದು ಎಂಬುದಕ್ಕೆ ಸ್ಕಂದ ಪುರಾಣದಲ್ಲಿ ಉಲ್ಲೇಖವೂ ಇದೆ.

ಸಾಲಿಗ್ರಾಮದಿಂದ ಸಿಗುವ ಫಲವೇನು?

ಭೂವರಾಹ ಮತ್ತು ಭೂಗರ್ಭ ಎಂಬೆರಡು ಸಾಲಿಗ್ರಾಮಗಳ ಆರಾಧನೆಯಿಂದ ಭೂಮಿ ಸಂಬಂಧ ದೋಷಗಳು, ಕೇಷಗಳು ನಿವಾರಣೆಯಾಗಿ ಜಾಗ ಅಭಿವೃದ್ಧಿಯಾಗುತ್ತದೆ ಎಂಬುವುದು ನಂಬಿಕೆ.ನರಸಿಂಹ ಸಾಲಿಗ್ರಾಮ ಉಪಾಸನೆಯಿಂದ ಶತ್ರು ಸಂಬಂಧಿ ದೋಷಗಳು ನಿವಾರಣೆಯಾಗಿ,ಶಾಂತಿ, ಮಾನಸಿಕ ನೆಮ್ಮದಿ, ಸೌಮ್ಯತೆಯು ಪ್ರಾಪ್ತಿಯಾಗುತ್ತದೆ. ಸುದರ್ಶನ ಮತ್ತು ಮಹಾಸುದರ್ಶನವೆಂಬರಡು ಸಾಲಿಗ್ರಾಮಗಳಿಂದ ಶ್ರೀರಕ್ಷೆ ಸಿಗುತ್ತದೆ. ಗೋಪಾಲಕೃಷ್ಣ ಸಾಲಿಗ್ರಾಮದಿಂದ ಗೋವುಗಳಿಗೆ ಸಂಬಂಧಿಸಿದ ಸಮಸ್ಯೆಗಳು,ಅಭಿವೃದ್ಧಿಯ ಜೊತೆಗೆ ಸಂಪತ್ತನ್ನೂ ವೃದ್ಧಿಸುತ್ತದೆ.

ಇಲ್ಲಿ ನಿತ್ಯವೂ ದೇವರಿಗೆ ಸಲ್ಲುವುದು ಪೂಜೆ!!

ಕ್ಷೇತ್ರದಲ್ಲಿರುವ ಈ ಸಾಲಿಗ್ರಾಮಗಳಿಗೆ ಕೇಮಾರು ಸಾಧನಾಶ್ರಮದ ಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿ ನಿತ್ಯವೂ ಪೂಜೆ, ಪುನಸ್ಕಾರವನ್ನು ಶ್ರದ್ಧಾ ಭಕ್ತಿಯಿಂದ ಸಮರ್ಪಿಸಿ, ಉತ್ತಮ ಸಮಾಜದ ನಿರ್ಮಾಣಕ್ಕೆ, ಸಮಾಜದ ಅಭಿವೃದ್ಧಿಗೆ ಸದ್ದಿಲ್ಲದೇ ಎಲೆಮರೆಯ ಕಾಯಿಯಂತೆ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ.ಸನಾತನ ಹಿಂದೂ ಧರ್ಮ, ಸಂಸ್ಕೃತಿ ಮುಂದೆಯೂ ಉಳಿಯಬೇಕು,ಕ್ಷೇತ್ರದಲ್ಲಿರುವ ಸಾಲಿಗ್ರಾಮಗಳು ಮುಂದಿನ ಪೀಳಿಗೆಗೂ ನೋಡಲು ಸಿಗುವಂತಾಗಬೇಕು ಎಂಬ ಸಂಕಲ್ಪ ತೊಟ್ಟು ಇಷ್ಟೊಂದು ಸಾಲಿಗ್ರಾಮ ಶಿಲೆಗಳನ್ನು ಸಂಗ್ರಹಿಸಿ, ನಿತ್ಯವೂ ಪೂಜೆ ಸಲ್ಲಿಸುತ್ತಿರುವುದು ಕೇಮಾರು ಶ್ರೀಗಳ ಹಿಂದೂ ಸಂಸ್ಕೃತಿಯ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ ಎಂಬುವುದು ಅಲ್ಲಿನ ಭಕ್ತರ ಮಾತು.

ಸ್ವಾಮೀಜಿ ಅವರು, ಮಠದಲ್ಲಿ ದಿನಕ್ಕೆ ಮೂರು ಬಾರಿ ಪ್ರಾರ್ಥನೆ ನಡೆಸುತ್ತಿದ್ದೂ,ಪಟ್ಟದ ದೇವರು ಲಕ್ಷ್ಮೀನಾರಾಯಣ ಮತ್ತು ಲಕ್ಷ್ಮೀ ನರಸಿಂಹ ಸ್ವಾಮಿಯ ಜೊತೆಗೆ ಸಾಲಿಗ್ರಾಮಗಳಿಗೂ ಸಹ ಪೂಜೆ ಸಲ್ಲಿಸುತ್ತಾರೆ.

ಇಂತಹ ಸಾಲಿಗ್ರಾಮಗಳ ಜಗತ್ತು, ಪ್ರಕೃತಿ ದತ್ತವಾದ ಸುಂದರ ಪರಿಸರದೊಳೊಂದು ಪವಿತ್ರ ಕ್ಷೇತ್ರದ,ಭಕ್ತಿಯ ಆರಾಧ್ಯ ತಾಣ ಹೆಚ್ಚು ಜನರನ್ನು ಆಕರ್ಷಿಸಿ ಗಮನ ಸೆಳೆಯುತ್ತಿದೆ. ಈಶ ವಿಠಲದಾಸ ಶ್ರೀಗಳ ಜನಪರ,ಸಮಾಜಮುಖಿ ಕಾರ್ಯಗಳಿಂದ ಭಕ್ತರ ಹೃದಯದಲ್ಲಿ ಪಾಲು ಪಡೆದಿದ್ದಾರೆ.ತಮ್ಮ ಪ್ರವಚನದ ಮೂಲಕ ಸಾವಿರಾರು ದಾರಿ ತಪ್ಪುವ ಯುವಕರನ್ನು ಸರಿ ದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಇಂತಹ ಅತ್ಯದ್ಭುತ ಕ್ಷೇತ್ರಕ್ಕೊಮ್ಮೆ ಭೇಟಿ ಕೊಟ್ಟು ಪುನೀತರಾಗಿ.

? ದೀಪಕ್ ಹೊಸ್ಮಠ

Leave A Reply

Your email address will not be published.