ತುಳುನಾಡಿನ ಆಟಿ ಅಮಾವಾಸ್ಯೆ!!ಮಹಾಮಾರಿಯಿಂದ ದೂರವಾಗುತ್ತಿದೆ ಪೂರ್ವಜರಿಂದ ವರವಾದ ಸಂಸ್ಕೃತಿ | ಪುರಾತನ ಸಂಸ್ಕೃತಿ ಮುಂದಿನ ತಲೆಮಾರುಗಳೂ ಅನುಭವಿಸುವಂತಾಗಲಿ
ಪ್ರತೀ ವರ್ಷದಂತೆ ಇಂದು ತುಳುನಾಡಿಗೆ ಬಹಳ ವಿಶೇಷವಾದ ದಿನ. ಆಷಾಡ ಮಾಸ, ತುಳುನಾಡಿನಲ್ಲಿ ಆಟಿ.ಈ ಆಟಿ ತಿಂಗಳಿನಲ್ಲಿ ಬಗೆ ಬಗೆಯ ಖಾದ್ಯಗಳು ಪ್ರತೀ ಮನೆಯ ಅಡುಗೆ ಕೋಣೆಯಿಂದ ಮೂಗಿಗೆ ರಾಚುತ್ತಲೇ ಇರುತ್ತದೆ. ನೂತನ ವಧು ತನ್ನ ತವರು ಮನೆಗೆ ತೆರಳುವ, ಗದ್ದೆಗಳಲ್ಲಿ ಬೇಸಾಯ ನಾಟಿ ಪ್ರಾರಂಭವಾಗುವ ಒಂದು ಅಮೋಘ ಘಳಿಗೆಯಲ್ಲಿ ಆಟಿ ತಿಂಗಳು ಅತ್ಯಂತ ಶ್ರೇಷ್ಠವಾಗಿದೆ.ಈ ಆಟಿ ತಿಂಗಳಿನಲ್ಲಿ ಇನ್ನೊಂದು ವಿಶೇಷ, ಭಕ್ತಿ ಭಾವ ದಿಂದ ಕೂಡಿದ ದಿನವೆಂದರೆ ಅದು ಅಮಾವಾಸ್ಯೆ.ಹಿಂದಿನ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಗೆ ಅದರದ್ದೇ ಆದ ಮಹತ್ವ,ಆಚರಣೆ,ಭಕ್ತಿ ಎಲ್ಲವೂ ಇದೆ. ಇಂತಹ ಅದ್ಭುತ ದಿನದ ಬಗೆಗೊಮ್ಮೆ ತಿಳಿಯೋಣವೇ?
ಇಂದಿನ ಆಧುನಿಕ ಯುಗದಲ್ಲಿ ತುಳುನಾಡಿನಲ್ಲಿ ಜಿಟಿ ಜಿಟಿ ಮಳೆಯ ನಡುವೆ ಆಟಿ ತಿಂಗಳಿನ ಕಷ್ಟ ಕಾರ್ಪಣ್ಯದ ಜೊತೆಗೆ ಕೆಲ ಖುಷಿಯ ಸಮಾರಂಭಗಳು, ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು, ಮನೆ ಮನೆಯ ಕಷ್ಟ ಹೋಗಲಾಡಿಸಲು ಆಟಿ ಕಳೆಂಜ ಮನೆ ಮನೆಗೆ ಬರುವ ಪದ್ಧತಿ ಇವೆಲ್ಲವೂ ನಡೆಯುತ್ತಾ ಬರುತ್ತಿದೆ. ಹಿಂದಿನ ಕಾಲದಿಂದಲೂ ಬಂದ ಕೆಲ ವಾಡಿಕೆಗಳು ಇಂದು ನಗರಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಕೂಡಾ ಹಳ್ಳಿ ಕಡೆಗಳಲ್ಲಿ ಅಮಾವಾಸ್ಯೆ ದಿನದ ಕಾರ್ಯಗಳು ಚಾಚುತಪ್ಪದೇ ನಡೆಯುತ್ತಿದೆ. ಇದಕ್ಕೆಲ್ಲ ಇಲ್ಲಿನ ದೈವದೇವರ, ಗುರುಹಿರಿಯರ ಆಶೀರ್ವಾದ ಹಾಗೂ ಈ ಮಣ್ಣಿನ ಸೊಗಡು ಎಂದೇ ನಂಬಿಕೆ.
ಅಮಾವಾಸ್ಯೆ ದಿನ ದಾನ ಬಿಡುವ ಪದ್ಧತಿ
ಹೌದು, ಅಮಾವಾಸ್ಯೆಯ ದಿನ ಬೆಳಗ್ಗಿನ ಜಾವ ಮನೆ ಮಂದಿಯೆಲ್ಲಾ ಸೇರಿ ಹೊಳೆ ಅಥವಾ ಹರಿದುಹೋಗುವಂತಹ ಸಣ್ಣ ಸಣ್ಣ ತೋಡುಗಳಲ್ಲಿ ದಾನ ಬಿಡುವ ಪದ್ಧತಿ ಕೂಡಾ ಇದೆ. ಒಂದು ಬಾಳೆ ಎಲೆಯಲ್ಲಿ ವಿವಿಧ ರೀತಿಯ ದವಸ ಧಾನ್ಯ, ಫಲ ಪುಷ್ಪಗಳ ಸಹಿತ ಒಂದೆರಡು ನಾಣ್ಯವನ್ನಿಟ್ಟು ಅದಕ್ಕೆ ಆರತಿ ಬೆಳಗಿ ದೀಪವಿಟ್ಟು ಮನೆ ಮಂದಿಯ ತಲೆಗೆ ಒಂದು ಸುತ್ತು ತಂದು ಹೊಳೆಗಳಲ್ಲಿ ಬಿಡುವ ಪದ್ಧತಿ. ಆ ನಂತರ ಅದೇ ಹೊಳೆಯ ನೀರಿನಲ್ಲಿ ಎಲ್ಲರೂ ಮಿಂದು ಮನೆಗೆ ವಾಪಾಸ್ಸಾಗುವಾಗ ಮನೆಯಲ್ಲಿ ಕಷಾಯ ಸಹಿತ ಇನ್ನಿತರ ತಿನಿಸುಗಳು.ಅದರಲ್ಲೂ ಕೆಲ ತಮಾಷೆಯೆಂದರೆ ಸಣ್ಣ ಸಣ್ಣ ತೋಪುಗಳಲ್ಲಿ ದಾನ ಬಿಟ್ಟ ನಾಣ್ಯಗಳನ್ನು ಹುಡುಕುವ ಕೆಲಸದಲ್ಲಿ ಮರುದಿನ ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳು ನಿರತರಾಗುವುದು ಕಂಡುಬರುತ್ತದೆ.
ಅಮಾವಾಸ್ಯೆಯ ಹಾಳೆ ಮರದ ಕಷಾಯ
ಆಟಿ ಅಮಾವಾಸ್ಯೆಯ ದಿನದಂದು ಹಾಳೆ ಮರದ ತೊಗಟೆಯನ್ನು ತಂದು ಅದನ್ನು ಗುದ್ದಿ ರಸ ತೆಗೆದು ಸೇವಿಸುವ ಕ್ರಮವು ತುಳುನಾಡಿನ ಪ್ರತೀ ಮನೆಯಲ್ಲೂ ಇರುವಂತಹ ಪದ್ಧತಿ. ಸ್ವಲ್ಪ ಕಹಿಯಾಗಿದ್ದರೂ ಈ ಕಷಾಯ ಆ ದಿನ ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂಬುವುದು ಪೂರ್ವಜರ ನಂಬಿಕೆ, ಆ ನಂಬಿಕೆ ಇಂದಿಗೂ ತುಳುನಾಡಿನಲ್ಲಿ ಅಚ್ಚಳಿಯದೆ ಉಳಿದಿದೆ. ಪೂರ್ವಜರ ಕಾಲದಲ್ಲಿ ಹಾಳೆ ಮರದ ತೊಗಟೆ ತರಲು ಬೆಳ್ಳಂಬೆಳಗ್ಗೆ ಮರದ ಬಡಕ್ಕೆ ತೆರಳುವಾಗ ಬೆತ್ತಲೆಯಾಗಿ ತೆರಳುತ್ತಿದ್ದರು ಎಂದು ಹಿಂದಿನ ತಲೆಮಾರುಗಳು ಇಂದಿಗೂ ನೆನಪಿಸುತ್ತಿವೆ. ಆದರೆ ಈಗ ಮುಂದುವರಿದ ಸಮಾಜ ಅದನ್ನು ಪಾಲಿಸುತ್ತಿಲ್ಲ ಎಂಬುವುದು ಅವರ ಬೇಸರಕ್ಕೂ ಕಾರಣವಾಗಿದೆ.ಅಮಾವಾಸ್ಯೆಯ ಹಿಂದಿನ ದಿನ ಮರದಡಿಗೆ ತೆರಳಿ ಹಾಳೆ ಮರವೇ ಎಂದು ಸ್ಪಷ್ಟ ಪಡಿಸಿಕೊಳ್ಳುವುದು ಉತ್ತಮ.ಯಾಕೆಂದರೆ ಕಳೆದ ಕೆಲ ವರುಷಗಳ ನಮ್ಮ ಜಿಲ್ಲೆಯಲ್ಲೇ ಒಂದು ಕಹಿ ಘಟನೆಯೂ ನಡೆದಿದ್ದು, ಹಾಳೆ ಮರದ ಬದಲಿಗೆ ಇನ್ಯಾವುದೋ ಮರದ ತೊಗಟೆಯನ್ನು ತಂದು ಕಷಾಯ ಮಾಡಿ ಕುಡಿದಿದ್ದರ ಪರಿಣಾಮ ಒಂದೇ ಮನೆಯ ಹಲವರು ಅಸ್ವಸ್ಥಗೊಂಡ ಸುದ್ದಿ ತಿಳಿದು ಇಡೀ ತುಳುನಾಡೇ ಬೆಚ್ಚಿಬಿದ್ದಿತ್ತು. ಆದುದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದು ಸೂಕ್ತ.ಹಿಂದೆ ಹಾಳೆ ಮರದ ಹತ್ತಿರವೇ ಹಾಳೆ ಮರದಡಿಯಲ್ಲಿ ನಾಣ್ಯಗಳನ್ನಿಟ್ಟು ಕೈಮುಗಿದು ಕಲ್ಲಿನಿಂದಲೇ ತೊಗಟೆಯನ್ನು ಎಬ್ಬಿಸುವುದು ಇಲ್ಲಿನ ವಿಶೇಷ.
ಆಚರಣೆಗೆ ಕೊರೋನ ತಂದ ಆಪತ್ತು
ಕಳೆದ ಕೆಲ ವರ್ಷಗಳಿಂದ ವಿಶ್ವದಲ್ಲೇ ಮಹಾಮಾರಿಯೊಂದು ರಣಕೇಕೆ ಹಾಕುತ್ತಿದ್ದೂ ಇದನ್ನು ನಿಯಂತ್ರಿಸುವ ಸಲುವಾಗಿ ಅನೇಕ ಆಚರಣೆ, ದೈವ ದೇವರ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿದೆ. ಎಂದಿನಂತೆ ಇರುತ್ತಿದ್ದರೆ ಇಂದು ತುಳುನಾಡಿನ ಕಾರಿಂಜ, ನರಹರಿ ಪರ್ವತಗಳಲ್ಲಿ ಅಮಾವಾಸ್ಯೆ ಸ್ನಾನಕ್ಕೆ ಅತಿಹೆಚ್ಚು ಜನಸಂದಣಿ
ಆಗುತ್ತಿತ್ತು. ಆದರೆ ಇದಕ್ಕೆಲ್ಲಾ ಮಹಾಮಾರಿ ಬ್ರೇಕ್ ಹಾಕಿದ್ದು ಹೀಗೆ ಮುಂದುವರಿದರೆ ಅಳಿದುಳಿಯುವ ಮುಂದಿನ ಯುವ ಪೀಳಿಗೆಗೆ ತುಳುನಾಡಿನ ಆಚಾರ ವಿಚಾರಗಳ ಬಗೆಗೆ ತಿಳಿದುಕೊಳ್ಳಲು ಅಸಾಧ್ಯ.ಆದರೂ ತುಳುನಾಡಿನ ಆಟಿ, ಆಟಿಯಲ್ಲಿನ ಅಮಾವಾಸ್ಯೆಯ ವಿಶೇಷತೆಯನ್ನು ಅನುಭವಿಸಿದವರೇ ಬಲ್ಲರು.
?️ದೀಪಕ್ ಹೊಸ್ಮಠ