ರಾಜೀವ್ ಗಾಂಧಿ ಖೇಲ್ ರತ್ನ ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ | ಮಾಜಿ ಪ್ರಧಾನಿಯ ಹೆಸರಲ್ಲಿದ್ದ ಪ್ರಶಸ್ತಿಗೆ ಇನ್ನು ಹಾಕಿ ದಂತ ಕಥೆಯ ಹೆಸರು

ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ. ಇಂತಹ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

 

ಈ ಐತಿಹಾಸಿಕ ಘೋಷಣೆಗೂ ಒಂದು ಮುಖ್ಯ ಕಾರಣವಿದೆ. ಅದು ಬೇರೆನೂ ಅಲ್ಲ, ಈ ಬಾರಿಯ ಒಲಂಪಿಕ್ಸ್ ನಲ್ಲಿ ಹಾಕಿ ತಂಡದ ಸಾಧನೆ ಎಂದೇ ಹೇಳಬಹುದು.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡ ಇತಿಹಾಸ ಸೃಷ್ಟಿಸಿವೆ. ಬರೋಬ್ಬರಿ 41 ವರ್ಷಗಳ ನಂತರ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ನಿನ್ನೆ ಪುರುಷರ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿತು.

ಇನ್ನು ಇಂದು ನಡೆದ ಪಂದ್ಯದಲ್ಲಿ ಮಹಿಳಾ ಹಾಕಿ ತಂಡ ಕೂಡ ಶಕ್ತಿ ಮೀರಿ ಪ್ರದರ್ಶನ ತೋರಿ ಗ್ರೇಟ್ ಬ್ರಿಟನ್ ವಿರುದ್ಧ ವಿರೋಚಿತ ಸೋಲು ಕಂಡಿದೆ. ಒಂದು ಗೋಲು ಅಂತರದಲ್ಲಿ ಕಂಚಿನ ಪದಕ ಕೈತಪ್ಪಿ ಹೋಗಿ 4ನೇ ಸ್ಥಾನ ಗಳಿಸಿದೆ.

ಭಾರತದ ಹಾಕಿ ತಂಡ ಕೊನೆಯ ಬಾರಿಗೆ 1980ರಲ್ಲಿ ಚಿನ್ನದ ಪದಕ ಗಳಿಸಿತ್ತು. ಅಲ್ಲಿಯವರೆಗೆ ಬರೋಬ್ಬರಿ 6 ಬಾರಿ ಚಿನ್ನದ ಪದಕವನ್ನು ಒಲಿಂಪಿಕ್ ನಲ್ಲಿ ಗಳಿಸಿದ್ದ ಭಾರತ ಇಷ್ಟು ದಶಕಗಳ ಕಾಲ ಪದಕವಿಲ್ಲದೆ ಬರಡಾಗಿತ್ತು. ಅದರ ನಿರಾಶೆಯನ್ನು ಈ ಬಾರಿ ಪುರುಷರ ಹಾಕಿ ತಂಡ ಅಳಿಸಿದೆ. ಈ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೆ ಸಂತಸವಿದೆ.

ಅನೇಕ ಭಾರತೀಯರಲ್ಲಿ ಮತ್ತೆ ಹಾಕಿ ಆಟದ ಬಗ್ಗೆ ಆಸೆಯ ಚಿಗುರೊಡೆದಿದೆ. ಪ್ರಧಾನಿ ಮೋದಿಯಾದಿಯಾಗಿ ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಬಹಳ ಮುಖ್ಯವಾದ ಪ್ರಕಟಣೆಯನ್ನು ಇಂದು ಹೊರಡಿಸಿದ್ದಾರೆ. ದೇಶದಾದ್ಯಂತ ಹಲವರಿಂದ ನನಗೆ ಇನ್ನು ಮುಂದೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಅವರ ಹೆಸರಿನಲ್ಲಿ ನೀಡಿ ಎಂಬ ಮನವಿಗಳು ಬಂದವು. ಅವರ ಅಭಿಪ್ರಾಯವನ್ನು ಪರಿಗಣಿಸಿ ಮನ್ನಿಸಿ ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

ಭಾರತದ ಕ್ರೀಡಾ ಕ್ಷೇತ್ರದ ದಂತಕಥೆ ಮೇಜರ್ ಧ್ಯಾನ್ ಚಂದ್, ಭಾರತದ ಹೆಮ್ಮೆ. ನಮ್ಮ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ನೀಡುವುದು ನಿಜಕ್ಕೂ ಗೌರವ, ಹೆಮ್ಮೆಯ ವಿಷಯ ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave A Reply

Your email address will not be published.