ಸಿಡಿ ಪ್ರಕರಣ ತಾರ್ಕಿಕ ಅಂತ್ಯದತ್ತ | ಲೇಡಿ ಆಂಡ್ ಟೀಮ್ ವಿರುದ್ಧ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಹಲವು ಸಾಕ್ಷ್ಯಗಳು ಲಭ್ಯ !!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಇದೀಗ ಒಂದು ತಾತ್ವಿಕ ಅಂತ್ಯದತ್ತ ಸಾಗುತ್ತಿದೆ. ತಿರುವುಗಳ ಮೇಲೆ ತಿರುವು ಪಡೆದುಕೊಂಡಿದ್ದ ಈ ಪ್ರಕರಣ ಇದೀಗ ಮತ್ತೊಂದು ಟರ್ನ್ ಪಡೆದುಕೊಂಡಿದ್ದು, ಯುವತಿ ಹಾಗೂ ಇತರ ಆರೋಪಿಗಳು ಸೇರಿಕೊಂಡು ಮಾಜಿ ಸಚಿವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದಿರುವುದಕ್ಕೆ ಎಸ್‌ಐಟಿ ತನಿಖೆಯಲ್ಲಿ ಸಾಕ್ಷ್ಯಾಧಾರ ಸಿಕ್ಕಿದೆ ಎಂದು ಗೊತ್ತಾಗಿದೆ. ಇನ್ನು ಕಾದಿದೆ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಮಾರಿ ಹಬ್ಬ.
ಅವತ್ತು ಸಿಡಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಯಾದ ನಂತರ, ಮೊತ್ತಮೊದಲಿಗೆ ರಮೇಶ್ ಜಾರಕಿಹೊಳಿ ಅವರು ಅವಮಾನದಿಂದ ಕುಗ್ಗಿ ಹೋಗಿದ್ದರು. ರಾಜ್ಯದ ಜನತೆ ಚೀ ಥೂ ಎಂದು ಕ್ಯಾಕರಿಸಲು ಶುರು ಮಾಡಿತ್ತು. ಆದರೆ ಬರಬರುತ್ತಾ ಜಾರಕಿಹೊಳಿ ಅವರನ್ನು ಮತ್ಯಾರೋ ನಿಯಂತ್ರಿಸಿದಂತೆ ನಿಯಂತ್ರಿಸಲು ಪ್ರಯತ್ನಿಸಿದಂತೆ ಬ್ಲಾಕ್ಮೇಲ್ ಮಾಡಿದಂತೆ ಗೋಚರಿಸಲು ಭಾಸವಾಗುತ್ತಿತ್ತು. ಆಗ ಅವರ ಮೇಲೆ ನಿಧಾನವಾಗಿ ಅನುಕಂಪ ಮೂಡಲು ಪ್ರಾರಂಭವಾಯಿತು. ಇವತ್ತಿಗೆ ರಮೇಶ್ ಜಾರಕಿಹೊಳಿ ಅವರ ಮೇಲೆ ಒಂದು ದೊಡ್ಡಮಟ್ಟದ ಅನುಕಂಪ ಸೃಷ್ಟಿಯಾಗಿ ಹೋಗಿದೆ. ಆ ವೀಡಿಯೊದಲ್ಲಿ ಅವರೇ ಇರುವುದಾದರೂ, ಅವರ ಕುಟುಂಬದ ಸದಸ್ಯರು, ಮುಖ್ಯವಾಗಿ ಅವರ ಪತ್ನಿಗೆ ಮಾತ್ರ ಈಗ ಅವರಿಗೆ ಉತ್ತರಿಸಲು ಕಷ್ಟ. ಉಳಿದೆಲ್ಲಂತೆ, ಇದೀಗ ಜಾರಕಿಹೊಳಿಯವರು ಈಗ ರಿಲ್ಯಾಕ್ಸ್ ಆಗಿದ್ದಾರೆ. ಕಾರಣ ಕೇಸು ಅವರ ಪರ ಆಗಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ ಎನ್ನುವ ಕಾರಣಕ್ಕಲ್ಲ. ಮೇಲ್ನೋಟಕ್ಕೆ ಕೂಡಾ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಒಂದು ದೊಡ್ಡಮಟ್ಟದ ಷಡ್ಯಂತ್ರ ರೂಪುಗೊಂಡದ್ದು ಎದ್ದು ಕಾಣುತ್ತಿತ್ತು. ಈಗ ಎಸ್ ಐ ಟಿ ತನಿಖೆಯ ನಂತರ ಆ ಅನುಮಾನ ನಿಜವಾಗಿದೆ.
ಇದೀಗ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಯುವತಿ ನೀಡಿದ ದೂರಿಗೆ ತನಿಖಾಧಿಕಾರಿಗಳು ‘ಬಿ’ ವರದಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ‘ಬಿ’ ವರದಿ ಅಂದರೆ, ಕೇಸು ಖಲಾಸ್ ಆದಂತೆ. ಅದು ಸುಳ್ಳು ದೂರು, ಅನೂರ್ಜಿತ ಕೇಸು ಅದಾಗಲಿದೆ.
ಈಗ ಜಾರಕಿಹೊಳಿ ನೀಡಿದ್ದ ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಯುವ ಹಾಗೂ ಶಂಕಿತರಾದ ನರೇಶ್ ಗೌಡ, ಶ್ರವಣ್ ವಿರುದ್ಧ ಸಾಕ್ಷ್ಯ ಸಮೇತ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಅಂತಿಮ ಹಂತದ ಚಾರ್ಜ್‌ಶೀಟ್ ರೆಡಿಯಾಗಿದ್ದು, ಕೋರ್ಟ್ ಸೂಚನೆಗಾಗಿ ಎಸ್‌ಐಟಿ ತಂಡ ಕಾದು ಕುಳಿತಿದೆ.
ಸಂಚು ರೂಪಿಸಿ ಕೃತ್ಯ ಬಹಿರಂಗ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್ ಪರಿಶೀಲಿಸಿದಾಗ ಕಾಲ್ ಡಿಟೇಲ್ಸ್ ನಲ್ಲಿ ಯುವತಿಯೇ ಹೆಚ್ಚು ಬಾರಿ ಕರೆ ಮಾಡಿರುವುದು ಗೊತ್ತಾಗಿದೆ. ಯುವತಿ ವ್ಯಾನಿಟಿ ಬ್ಯಾಗ್‌ನಲ್ಲಿ ಕ್ಯಾಮರಾ ಇಟ್ಟು ಜಾರಕಿಹೊಳಿ ಅವರೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋ ಸೆರೆಹಿಡಿದಿದ್ದಳು. ಶಂಕಿತರಿಗೆ ಈ ಬಗ್ಗೆ ಮಾಹಿತಿ ನೀಡಿ ಜಾರಕಿಹೊಳಿ ವಾಟ್ಸ್‌ಆಪ್‌ಗೂ ಕಳುಹಿಸಿದ್ದಳು. ಈ ನಡುವೆ ಮೂರನೇ ವ್ಯಕ್ತಿಯೊಬ್ಬ ಜಾರಕಿಹೊಳಿ ಆಪ್ತರೊಬ್ಬರಿಗೆ ಇದೇ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಎಲ್ಲಿ ವಿಡಿಯೋ ಬಹಿರಂಗಗೊಳ್ಳುತ್ತದೆ ಎಂಬ ಭೀತಿಯಿಂದ ಜಾರಕಿಹೊಳಿ ಬೇರೆಯವರ ಮೂಲಕ ಒಂದಿಷ್ಟು ಹಣ ಕೊಟ್ಟಿದ್ದರು ಎನ್ನಲಾಗಿದೆ.
ಪ್ರಮುಖ ಸಾಕ್ಷ್ಯಾಧಾರಗಳೇನು?
• ಸಿಡಿ ಬಹಿರಂಗಪಡಿಸಿದ ದಿನವೇ ಯುವತಿ ಹಾಗೂ ಶಂಕಿತರ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿರುವುದು ಬೆಳಕಿಗೆ ಬಂದಿದೆ. * ಶಂಕಿತರು ಹಾಗೂ ಯುವತಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು ಗೊತ್ತಾಗಿದೆ
• ಸಿಡಿ ಬಿಡುಗಡೆ ಬಳಿಕ ಈ ತಂಡದಲ್ಲಿದ್ದವರು ವೈ-ಫೈ ಬಳಸಿಕೊಂಡು ಕರೆ ಮಾಡಿ ಮಾತುಕತೆ ನಡೆಸಿದ್ದು ಪತ್ತೆಯಾಗಿದೆ.
• ಆರೋಪಿಗಳ ವಿರುದ್ಧ ಒಟ್ಟು 17 ಜನ ಸಾಕ್ಷ್ಯ ನುಡಿದಿದ್ದಾರೆ
• ಯುವತಿಯ ಆರ್‌ಟಿನಗರದ ಮನೆಯಲ್ಲಿ 9.20 ಲಕ್ಷ ರೂ. ಪತ್ತೆಯಾಗಿರುವುದು.
• ಸಿಡಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಮಾತುಕತೆ
ನಡೆಸಿರುವುದು.
• ಮಹಜರು ವೇಳೆ ಯುವತಿ ವಿರುದ್ಧ ಸಿಕ್ಕ ಮಹತ್ವದ ದಾಖಲೆಗಳು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಈ ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ 3 ಅರ್ಜಿಗಳನ್ನೂ ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯಪೀಠ, ಜು.19ರಂದು ಎಸ್‌ಐಟಿ ಉಸ್ತುವಾರಿಯಾಗಿರುವ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೈಕೋರ್ಟ್‌ಗೆ ವರದಿ
ಸಲ್ಲಿಸಿದ್ದಾರೆ. ಅದರಲ್ಲಿ ಸೌಮೇಂದು ಮುಖರ್ಜಿ ಸಹಿ ಇಲ್ಲ. ಎಸ್‌ಐಟಿ ಮುಖ್ಯಸ್ಥ ದೀರ್ಘಕಾಲದ ರಜೆಯಲ್ಲಿದ್ದರೆ ಅವರ ಸ್ಥಾನಕ್ಕೆ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ನೇಮಕ ಮಾಡಬಹುದಿತ್ತಲ್ಲವೇ, ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಬಹುದೇ, ಆ ತನಿಖೆ ಸಮರ್ಥನೀಯವೇ ಎಂದು ಕೋರ್ಟು ಪ್ರಶ್ನಿಸಿತು.
ಮತ್ತೊಂದೆಡೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿ, ತನಿಖೆ ಪೂರ್ಣಗೊಳ್ಳುವವರೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಸುತ್ತೋಲೆ ಹೊರಡಿಸಲಾಗಿದ್ದರೂ ತನಿಖಾ ವರದಿಯಲ್ಲಿರುವ ವಿವರಗಳು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇವೆಲ್ಲ ಕೇಸಿಗೆ ಮುಖ್ಯ ಆಗಲ್ಲ. ಕೇಸು ಇದೀಗ ಅಂತ್ಯಕ್ಕೆ ಬಂದಿದ್ದು, ಕಾನೂನಿನ ಪ್ರಕಾರ ರಮೇಶ್ ಜಾರಕಿಹೊಳಿ ಅವರು ನಿರ್ದೋಷಿ. ನಿರಪರಾಧಿ.ಮಾತ್ರವಲ್ಲ, ಅವರೇ ಈ ಪ್ರಕರಣದ ಶೋಷಿತ ಕೂಡಾ. ಹಾಗಾಗಿ, ಬ್ಲಾಕ್ ಮೇಲ್ ಮಾಡಿದ ಸಿಡಿ ಲೇಡಿ ಮತ್ತು ನರೇಶ್ ಗೌಡ ಗ್ಯಾಂಗ್ ಗೆ ಇನ್ನೂ ಕಷ್ಟ ಕಾಲ ಗ್ಯಾರಂಟಿ. ಈ ಮಧ್ಯೆ ನರೇಶ್ ಗೌಡ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸೇರಿ, ಮತ್ತೊಮ್ಮೆ ಡಿಕೆಶಿ ನರೇಶ್ ಮದ್ಯೆ ಇರುವ ಸಂಬಂಧದ ಬಗ್ಗೆ ಜನರಿಗೆ ಇದ್ದ ಅನುಮಾನವನ್ನು ಹೆಚ್ಚಿಸಿದ್ದಾರೆ. ಕುತೂಹಲದ ಘಟ್ಟದಲ್ಲಿ ಇದೆ ಈ ಕೇಸಿನ ತನಿಖಾ ವರದಿ.