ಮಾರ್ನಿಂಗ್ ಡೋಸ್ | ಜಪಾನೀ ಮೀನಿನ ಕಥೆ : ಮೀನಿನ ರುಚಿಯನ್ನು ಹೆಚ್ಚು ಮಾಡಲು ಕೊಳದೊಳಕ್ಕೆ ಇಳಿದ ವಿಶೇಷ ಅತಿಥಿ !!
ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ ರೀತಿ ಹೋಗುವುದು ಆರ್ಥಿಕವಾಗಿಯೂ ಲಾಭದಾಯಕವಲ್ಲ, ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವೂ ಅಲ್ಲ.
ಅಂತಹ ಕಾರ್ಯಗಳಿಗೆ ದೊಡ್ಡ ದೋಣಿಗಳೆ ಬೇಕಾಗುತ್ತವೆ. ಅಂತೆಯೇ ದೊಡ್ಡ ಮೀನುಗಾರಿಕಾ ಬೋಟ್ ಗಳನ್ನು ಕೊಳ್ಳಲಾಯಿತು. ಮೀನುಗಾರಿಕೆಗೆ ಹೊರಟ ದೋಣಿಗಳು ದಿನಗಟ್ಟಲೆ ತೀರಕ್ಕೆ ಬರುತ್ತಿರಲಿಲ್ಲ. ಅವು ವಾಪಸ್ಸು ಬರಲು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಬಹುತೇಕ ಮೀನುಗಳು ತಮ್ಮ ತಾಜಾತನವನ್ನು ಕಳೆದುಕೊಂಡು, ಮೆದುವಾಗಿ ಕೊಳೆಯಲಾರಂಭಿಸಿದವು. ಅಂತಹ ಮೀನುಗಳನ್ನು ಜಪಾನಿಯರು ಸುತಾರಾಂ ಇಷ್ಟಪಡಲಿಲ್ಲ. ಆದ್ದರಿಂದ ಮೀನುಗಾರಿಕಾ ಕಂಪನಿಗಳು ಹಡಗುಗಳಲ್ಲಿ ಡೀಪ್ ಫ್ರೀಜರ್ ಗಳನ್ನು ಅಳವಡಿಸಿದವು. ಮೀನು ಹಿಡಿಯಲು ಸಾಗರಕ್ಕೆ ತೆರಳಿದ ಹಡಗುಗಳು ವಾರಗಟ್ಟಲೆ ತೀರಕ್ಕೆ ತಿರುಗಿ ಬಾರದೆ ಹೋದರೂ ಹಿಡಿದಿದ್ದ ಮೀನುಗಳು ಡೀಪ್ ಫ್ರೀಜರ್ ಗಳಲ್ಲಿ ಸುರಕ್ಷಿತವಾಗಿ ಕೊಳೆಯದೆ ಉಳಿಯುತ್ತಿದ್ದವು.
ಆದರೂ ಜಪಾನಿಯರು ಹಾಗೆ ಶೈತ್ಯಾಗಾರದಲ್ಲಿ ಸಂಗ್ರಹಿಸಿದ ಮೀನಿನಲ್ಲಿರುವ ವ್ಯತ್ಯಾಸವನ್ನು ಅರಿಯಬಲ್ಲವರಾಗಿದ್ದರು ಮತ್ತು ತಾಜಾ ಮೀನಿನ ರುಚಿಯ ಮುಂದೆ ಈ ಶೀತಲ ಮೀನು ಸಪ್ಪೆ ಅನಿಸುತ್ತಿತ್ತು. ಆದ್ದರಿಂದ ಈ ಮೀನಿಗೆ ಬೇಡಿಕೆ ಕಮ್ಮಿಯಾಯಿತು.
ಜಪಾನೀ ಜನರ ತಾಜಾ ಮೀನಿನ ಮೋಹ ಕಂಡು ಮೀನುಗಾರಿಕಾ ಕಂಪನಿಗಳು ಯೋಚನೆಗೆ ಬಿದ್ದವು. ಕೊನೆಗೆ ಬೃಹತ್ ಹಡಗುಗಳನ್ನು ಕೊಂಡುಕೊಳ್ಳಲಾಯ್ತು. ಮೀನುಗಾರಿಕಾ ಕಂಪನಿಗಳು ಬೃಹತ್ ಹಡಗುಗಳಲ್ಲಿ ಡೀಪ್ ಫ್ರೀಜರ್ ಗಳ ಬದಲಿಗೆ ಕೃತಕ ಮೀನು ಕೊಳಗಳನ್ನು ನಿರ್ಮಿಸಿದರು. ಮೀನುಗಳ ಕೊಳಗಳಿಗೆ ಸಾಗರದ ನೀರನ್ನು ಹಾಯಿಸಿ ಒಂದು ಪುಟಾಣಿ ಕೃತಕ ಸಾಗರವೇ ಹಡಗಿನೊಳಗೆ ನಿರ್ಮಾಣ ಮಾಡಿದರು. ತಾವು ಹಿಡಿದ ಮೀನುಗಳನ್ನು ತಾತ್ಕಾಲಿಕವಾಗಿ ಈ ಈಜು ಕೊಳಗಳಲ್ಲಿ ಈಜಲು ಬಿಟ್ಟು ಹಡಗು ತೀರ ತಲುಪಿದ ನಂತರ ಅವುಗಳನ್ನು ಅವಶ್ಯಕತೆಗಳ ಅನುಸಾರವಾಗಿ ಹಿಡಿದು ಸರಬರಾಜು ಮಾಡಲಾರಂಭಿಸಿದರು.
ದುರದೃಷ್ಟವಶಾತ್ ಬಾಯಿ ಚಪಲದ ಜಪಾನಿ ಜನರು ಅವುಗಳ ರುಚಿಯನ್ನು ಕೂಡಾ ಇಷ್ಟಪಡಲಿಲ್ಲ. ತಾಜಾ ಮೀನುಗಳಿಗಿರುವ ರುಚಿಗಿಂತ ಈ ಕೃತಕ ಕೊಳಗಳಲ್ಲಿ ಸಂಗ್ರಹಿಸಿದ ಮೀನುಗಳು ಭಿನ್ನವಾಗಿದ್ದವು. ಅಂತಹಾ ಸೂಕ್ಷ್ಮವ್ಯತ್ಯಾಸವನ್ನು ಕೂಡಾ ಜಪಾನಿ ಜನತೆ ಗುರುತಿಸಬಲ್ಲವರಾಗಿದ್ದರು.
ಮೀನಿನ ರುಚಿಯ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲದ ಜಪಾನಿಯರು ರುಚಿ ಹೀನ ಮೀನು ಸೇವಿಸುವುದನ್ನೇ ನಿಲ್ಲಿಸಿದರು. ಅವರಿಗೆ ಬೇಕಾಗಿದ್ದದ್ದು ಹಚ್ಚ ಹಸಿ ಹಸಿ ತಾಜಾ ಮೀನುಗಳು. ಮೀನುಗಳಿಗೆ ದಿಢೀರನೆ ಬೇಡಿಕೆ ಕುಸಿಯಿತು. ಈಗಾಗಲೇ ಮಾರುಕಟ್ಟೆಗೆ ಬಂದಿದ್ದ ಮೀನುಗಳು ವ್ಯಾಪಾರವಾಗದೇ ಉಳಿದುಹೋದವು.
ಆವಾಗಲೇ ಬೃಹತ್ ಮೊತ್ತವನ್ನು ಹಡಗು ಕಟ್ಟಲು, ಹಡಗು ಕೊಳ್ಳಲು, ಡೀಪ್ ಫ್ರೀಜರ್ ಗಳನ್ನು ಅಳವಡಿಸಲು ಮತ್ತು ಮೀನುಗಳ ಕೊಳವನ್ನು ನಿರ್ಮಿಸಲು ತೊಡಗಿಸಲಾಗಿತ್ತು. ಕಂಪನಿಯವರು ತಲೆಗೆ ಕೈ ಹಚ್ಚಿ ಕುಳಿತುಕೊಂಡರು.
ಈಗ ಹೇಳಿ, ಜಪಾನಿಯರ ಜಮೀನಿನ ಬಯಕೆಯನ್ನು ಪೂರೈಸುವುದು ಹೇಗೆ ಅವರ ಬಾಯಿ ಚಪಲವನ್ನು ನೀಗಿಸುವುದು ಹೇಗೆ?
ಇದು ದೊಡ್ಡ ಟಾಸ್ಕ್ ಆಗಿತ್ತು. ಕಸ್ಟಮರ್ ಸರ್ವೀಸಿಗೆ ಹೆಸರಾದ ಜಪಾನೀಯರಿಗೆ ಇದು ನಿಜಕ್ಕೂಒಂದು ನಿಜವಾದ ಸವಾಲಾಗಿತ್ತು. ಈ ಸವಾಲನ್ನು ಜಪಾನೀಯರು ಗೆದ್ದರಾ, ಗೆದ್ದರೆ ಹೇಗೆ?
ಇಂತಹಾ ಸಮಯದಲ್ಲಿ ಸನ್ನಿವೇಶವನ್ನು ಅರ್ಥಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮ್ಯಾನೆಜ್ಮೆಂಟ್ ಟೆಕ್ನಿಕ್ ನ ಹೆಸರು ‘ ರೂಟ್ ಕಾಸ್ ಅನಾಲಿಸಿಸ್ ‘. ಹಲವು ‘ರೂಟ್ ಕಾಸ್ ಅನಾಲಿಸಿಸ್’ ನ ಟೂಲ್ ಗಳಲ್ಲಿ ಜಪಾನೀಯರ ‘ ಫಿಶ್ ಬೋನ್ ಡಯಗ್ರಾಮ್ ‘ ಕೂಡಾ ಒಂದು. ಫಿಶ್ ಸಮಸ್ಯೆಗೆ ಫಿಶ್ ಬೋನ್ ಹೆಲ್ಪ್ ಮಾಡಿತು ! ಈ ಟೆಕ್ನಿಕ್ ಅನ್ನು ಬಳಸಿಕೊಂಡು ಜಪಾನೀಯರು ಈ ಸಮಸ್ಯೆಯನ್ನು ಬಗೆಹರಿಸಿಕೊಂಡರು. ‘ ರೂಟ್ ಕಾಸ್ ಅನಾಲಿಸಿಸ್ ‘ ನ ಬಗ್ಗೆ ಮುಂದಿನ ಅಂಕಣಗಳಲ್ಲಿ ವಿವರವಾಗಿ ನಾವು ತಿಳಿದುಕೊಳ್ಳೋಣ.
ಜಪಾನೀಯರು ಹಡಗಿನಲ್ಲಿದ್ದ ಈಜು ಕೊಳದೊಳಕ್ಕೆ ಒಂದು ಚಿಕ್ಕ ಶಾರ್ಕ್ ಮೀನನ್ನು ತಂದು ಬಿಟ್ಟರು. ಇಲ್ಲಿಯತನಕ ಕೇವಲ ಚಿಕ್ಕಪುಟ್ಟ ಮೀನುಗಳೇ ಇದ್ದ ಹಡಗಿನ ಕೊಳದಲ್ಲಿ, ತಮ್ಮ ಜೀವಕ್ಕೆ ತ್ರೆಟ್ ( ಬೆದರಿಕೆ) ಏನೂ ಇಲ್ಲದ ಕಾರಣದಿಂದ ಎಲ್ಲ ಮೀನುಗಳು ಕೂಡ ತಮ್ಮ ಓಡಾಟವನ್ನು ಕಡಿಮೆಮಾಡಿಕೊಂಡಿದ್ದವು. ಎಂದಿನ ಸಮುದ್ರ ಜೀವನದ ಜೀವಂತಿಕೆಯಿಲ್ಲದೆ, ಲೇಜಿಯಾಗಿ ಮೀನುಗಳು ಇರಲಾರಂಭಿಸಿದ್ದು ಅವುಗಳ ರುಚಿಹೀನತೆಗೆ ಕಾರಣವಾಗಿತ್ತು. ಯಾವಾಗಾ ತಮ್ಮನ್ನುಕೊಂದು ತಿನ್ನಬಲ್ಲ ವೈರಿ ಶಾರ್ಕ್ ಕೊಳದೊಳಕ್ಕೆ ಬಂತೋ, ಆಗ ಎಲ್ಲ ಮೀನುಗಳೂ ಅಲರ್ಟ್ ಆದವು. ಹೊಸ ಜೀವ ಕಳೆ ಅವುಗಳಲ್ಲಿ ಗೋಚರಿಸಿತು. ಹಡಗಿನ ಕೊಳವು ಒಂದು ಜೀವಂತ ಸಮುದ್ರವಾಯಿತು. ಕೊಳದಲ್ಲಿರುವ ಕೆಲವೊಂದು ಮೀನುಗಳನ್ನು ಶಾರ್ಕ್ ತಿಂದರೂ ಅಡ್ಡಿಯಿಲ್ಲ ; ಜಪಾನೀಯರಿಗೆ ರುಚಿ ಮಾತ್ರ ಮೊದಲ ಪ್ರಾಶಸ್ತ್ಯ!
ಸುದರ್ಶನ್ ಬಿ. ಪ್ರವೀಣ್, ಬೆಳಾಲು