ಓ ಹೆಣ್ಣೇ, ನೀನಿಲ್ಲದೆ ಹೋದರೆ ಬದುಕು ಸ್ತಬ್ದ । ಹ್ಯಾಪಿ ವುಮನ್ಸ್ ಡೇ !

ಹುಡುಗಿ, ಹೆಂಗಸು & ದ ವರ್ಲ್ಡ್ ಆಫ್ ವಿಮೆನ್ !

ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ, ಈ ಕ್ಲಿಷ್ಟ ಜಗತ್ತನ್ನು ಮ್ಯಾನೇಜ್ ಮಾಡಲು ಯಾವುದನ್ನಾದರೂ ಸೃಷ್ಟಿಸಬೇಕಿತ್ತು. ಆಗ ಆತನಿಗೆ ಹೊಳೆದ ಅದ್ಭುತ ಸೃಷ್ಟಿಯೇ ಈ ಹೆಣ್ಣು !

ಒಂದು ಕಾಲಕ್ಕೆ, ತನ್ನ ಕರೆಗಟ್ಟಿದ ಎಲೆಅಡಿಕೆಯ ಚೀಲದಿಂದ ಕೆನ್ನೆ ಮಡಿಚಿದ 2 ರೂ ಗಳನ್ನು ತನ್ನ ಬಡತನಗಳ ನಡುವೆಯೂ ಚಡ್ಡಿ ಜೋಬಿಗೆ ತುರುಕಿದ ಅಜ್ಜಿಯಾಗಿ, ಹೊತ್ತು ಹೆತ್ತು ಇಷ್ಟರಮಟ್ಟಿಗೆ ಪೋಷಿಸಿದ ಅಮ್ಮನಾಗಿ, ಅರ್ಥಮಾಡಿಕೊಳ್ಳುವ ಸೋದರಿಯಾಗಿ, ಎಲ್ಲವನ್ನೂ ತಾಳ್ಮೆಯಿಂದ ಕೇಳುವ ಮಗಳಾಗಿ, ಎಂದೂ ತೀರದ ಬಯಕೆಯಾಗಿ, ಮನ ಮೆಚ್ಚಿದ ಮಡದಿಯಾಗಿ – ಅವಳೊಬ್ಬಳು ಇಲ್ಲದೇ ಹೋಗಿದ್ದರೆ ಬದುಕುವುದೇ ಅಸಾಧ್ಯ.

ಅಜ್ಜಿ ಗೊಣಗುತ್ತಾ ಮನೆಯ ಕಟ್ಟೆಯ ಮೇಲೆ ಒಳ್ಳೆ ಸಿಸಿಟಿವಿಯ ಥರ ಕುಳಿತಿದ್ದರೇನೇ ಮನೆಗೆ ಕಳೆ. ಅಮ್ಮನ ಕೈ ಅಡುಗೆಯನ್ನು ಮೀರಿಸುವ ಚೆಫ್ ಎಲ್ಲಿದ್ದಾನೆ ? ಅಕ್ಕ-ತಂಗಿ ತಂದು ಕೊಡುವ ಸರಳ ಕಂಫರ್ಟ್ ಬೇರೆಲ್ಲಿ ಸಿಕ್ಕೀತು ? ಹುಷಾರು ತಪ್ಪಿದಾಗ ಅವಳಂತೆ ಬೇರೆ ಯಾರು ತಾನೇ ಆರೈಕೆ ಮಾಡಿಯಾರು ? ಪ್ರೀತಿಸುವ ಗೆಳತಿಯ ಸಿಂಪಲ್ ಪ್ರೆಸೆನ್ಸ್ ಒಂದೇ ಸಾಕು : ಕಾಲ ಸ್ತಬ್ದವಾಗಿ ನಿಲ್ಲಲು !

ಹೆಂಡತಿ ಒಳ್ಳೆಯವಳಿದ್ದರೆ ಮನೆ ಸ್ವರ್ಗ. ಅವಳು ಸ್ವಲ್ಪ ಕಿರಿಕ್ ಪಾರ್ಟಿ ಆಗಿದ್ದರೆ ? ಅವಳು ಒಳಮನೆಯಲ್ಲಿ ಇದ್ದಾಳೆ, ಅಲ್ಲಿಂದಲೇ ಪದೇ ಪದೇ ಕಿರಿಕ್ ಮಾಡುತ್ತಾಳೆ. ಪಾತ್ರ ಪಗಡೆ ಎತ್ತಿ ಕುಟ್ಟುವುದು ಅತಿ ಸಾಮಾನ್ಯ. ನೀವು ಯಾರ ಜೊತೆಯಾದರೂ ಫೋನಿನಲ್ಲಿ ಮಾತಾಡುತ್ತಿದ್ದರೆ ಆಕೆ ಒಳ ಮನೆಯಿಂದಲೇ ಹಂಗಿಸುತ್ತಾಳೆ. ನಿಮ್ಮನ್ನು ಕಿಚಾಯಿಸುತ್ತಾಳೆ. ಇದೆಂತ ಜೀವನ ಅನಿಸುವಷ್ಟರ ಮಟ್ಟಿಗೆ ನಿಮ್ಮ ತಾಳ್ಮೆಯ ಪರೀಕ್ಷೆಯಾಗಿ ಹೋಗುತ್ತದೆ. ನಾನು ಒಬ್ಬನೇ ಇದ್ದಿದ್ದರೆ ಅದೆಷ್ಟು ಚೆನ್ನ ಎಂದು ಮನಸ್ಸು ಹೇಳುತ್ತದೆ. ಆದರೆ ಒಬ್ಬನೇ ಇರುವ ಅಂಥದೊಂದು ಅವಕಾಶ ಬಂದಾಗ ನೀವೇ ನೋಡಿ ; ಎಲ್ಲೋ ಮದುವೆಗೆಂದು ಹೋದ ಮನೆಯ ಹೆಂಗಸರು ಮನೆಗೆ ಬರುವುದು ಸ್ವಲ್ಪ ತಡವಾದರೆ ನಾವು ಪದೇ ಪದೇ ಟೈಮ್ ನೋಡುತ್ತೇವೆ. ಅತ್ತಿತ್ತ ಚಡಪಡಿಸುತ್ತಾ ಸಮಯ ತಳ್ಳುತ್ತೇವೆ. ಮನೆಯಲ್ಲಿ ಒಂದು ಗ್ಲಾಸು ನೀರು ಎತ್ತಿಕೊಡಲೂ ಕೂಡಾ ಅವಳೇ ಬೇಕು. ಅದು ಜಗಳಗಂಟಿ ಹೆಂಡತಿ ಇರಬಹುದು, ಅಜ್ಜಿ ಇರಬಹುದು, ಅಮ್ಮನಿರಬಹುದು ಅಥವಾ ಮಗಳಿರಬಹುದು. ಇವರೆಲ್ಲ ಇಲ್ಲದೆ ಹೋದರೆ ಬದುಕು ಭಣಭಣ.

ಅವಳಿಲ್ಲದೆ ನಮ್ಮ ಯಾವ ದಿನ ಕೂಡಾ ಸ್ಟಾರ್ಟ್ ತಗೊಳಲ್ಲ. ಅವಳು ಮಾಡಿಕೊಟ್ಟ ಟೀ ಕಾಫಿ ಕುಡಿದರೇನೇ ನಮ್ಮ ಇಂಜೀನು ಬಿಸಿಯಾಗಿ ಬೇರೆ ಕೆಲಸಕ್ಕೆ ಮನಸ್ಸು ಹೊರಳುವುದು.

ಅಂತಹ ಸ್ತ್ರೀಯರನ್ನು ನೆನಪಿಟ್ಟುಕೊಂಡು ನೆನೆಯಲು, ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಲು ಗುರುತು ಮಾಡಿದ ದಿನವೇ, ಇವತ್ತು ಮಾರ್ಚ್ 8 ! ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನ. 1911 ಹಿಂದೆಯೇ ಹಲವು ದೇಶಗಳ ಮಹಿಳಾಮಣಿಗಳು ಒಂದೆಡೆ ಸೇರಿ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ದನಿಯೆತ್ತಿದ್ದರು. ಮಹಿಳೆಯನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನ ಎಂದು ಪರಿಗಣಿಸಬೇಕೆಂದು ಅಂದು ಮಾರ್ಚ್ 8 ರಂದು ಪ್ರಾರಂಭ ಆದರೂ ಅದಕ್ಕೆ ಅಧಿಕೃತ ಮುದ್ರೆ ಬಿದ್ದದ್ದು ವಿಶ್ವಸಂಸ್ಥೆಯ ಮೂಲಕ 1975 ರಲ್ಲಿ.

ವುಮನ್ಸ್ ಡೇ-2020 ರ ಘೋಷವಾಕ್ಯ : ” ಸಮಾನ ಜಗತ್ತು ಒಂದು ಸಶಕ್ತ ಜಗತ್ತು”

ನಮ್ಮ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿ ಇವತ್ತಿಗೂ ಇದೆ. ಭಾರತದಲ್ಲಿ ಒಟ್ಟಾರೆಯಾಗಿ ಶೇಕಡಾ 60 ರಷ್ಟು ಕೃಷಿ ಚಟುವಟಿಗೆಗಳನ್ನು ಮಾಡುವವರು ಹೆಂಗಸರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಅದು ಸತ್ಯ. ನಮಗೆ ದೊಡ್ಡ ದೊಡ್ಡ ಸಮಾನತೆಯ ಅರ್ಥಗಳು, ವ್ಯಾಖ್ಯಾನಗಳು ಗೊತ್ತಿಲ್ಲ : ಇವತ್ತಿನ ದಿನದ ನಮ್ಮ ಕೆಲಸ ಇಷ್ಟೇ- ನಮ್ಮನ್ನು ಸದಾ ಪೊರೆಯುವ, ರಕ್ಷಿಸುವ ಈ ಸ್ತ್ರೀ ಸಂಕುಲವನ್ನೊಮ್ಮೆ ನೆನೆಸಿಕೊಳ್ಳೋಣ. ಅವರ ಕಷ್ಟಗಳನ್ನೂ ಅರ್ಥಮಾಡಿ ಕೊಳ್ಳೋಣ ಮತ್ತು ತಕ್ಷಣ ಕೈಲಾದಷ್ಟು ಸ್ಪಂದಿಸೋಣ !

ಮಹಿಳೆಯರ ಬಗ್ಗೆ ಬರೆದ ಒಂದಷ್ಟು ಶುಭ ಉಲ್ಲೇಖಗಳು ಇಲ್ಲಿವೆ..

ನಾನು ಸ್ತ್ರೀಯರ ಬಗ್ಗೆ ಹೇಗೆ ಭಾವನೆ ಹೊಂದಿದ್ದೇನೆಂದು ಪದಗಳಲ್ಲಿ ವರ್ಣಿಸಲು ನನ್ನಿಂದ ಸಾಧ್ಯವಿಲ್ಲ. ಅವರ ತಾಕತ್ತು, ಶಕ್ತಿ ಮತ್ತು ಯಾವುದೇ ಸಂದರ್ಭಗಳಲ್ಲೂ ತಲೆಯೆತ್ತಿ ನಿಲ್ಲಬಲ್ಲ ಶಕ್ತಿಗೆ ನನ್ನ ದೊಡ್ಡ ಸಲಾಂ. ಸ್ತ್ರೀಯರು ಈ ಪ್ರಪಂಚವನ್ನು ಮುನ್ನಡೆಸುತ್ತಿದ್ದಾರೆ ಎಂಬುದಷ್ಟೇ ನಾನು ಖಚಿತವಾಗಿ ಹೇಳಬಲ್ಲೆ.

ಸ್ತ್ರೀಯರು ಜೋರಾಗಿ ಕಾಣದೆಯೂ ಪವರ್ಫುಲ್ ಆಗಿರಬಲ್ಲರು. ಈ ಜಗವನ್ನೆಲ್ಲ ಅವರು ತಮ್ಮ ಸ್ತ್ರೀ ಶಕ್ತಿಯಿಂದ, ಅದರ ಮೃದುಲ ನೇವರಿಕೆಯಿಂದ ಸಲಹಲಿ.

ಸ್ತ್ರೀಯೊಬ್ಬಳು, ಓರ್ವ ಮನುಷ್ಯಳು ಮಾತ್ರವಾಗಿರದೆ, ಆಕೆ ಒಬ್ಬ ದೇವರ ಪ್ರತಿನಿಧಿ ಕೂಡಾ. ಈ ಪ್ರಪಂಚದಲ್ಲಿ ಮರು ಸೃಷ್ಟಿಸಲು, ನೋವು ತಿನ್ನುತ್ತಲೇ, ಅದೇಗೋ ಪ್ರತಿ ಸನ್ನಿವೇಶದಲ್ಲೂ ಎಲ್ಲರಿಗಿಂತ ಶಕ್ತಿಯುತವಾಗಿ ಹೊರಹೊಮ್ಮಲು ಅವಳಿಗೆ ದೇವರ ಶಕ್ತಿ ಒಲಿದಿದೆ.

ಮಹಿಳೆಯರು ಪ್ರಪಂಚದ ಬಹುದೊಡ್ಡ ಇನ್ಸ್ಪಿರೇಷನ್. ಅವರೆಷ್ಟು ಅದ್ಭುತ ಮತ್ತು ಆಶ್ಚರ್ಯದಾಯಕ !ಅವರನ್ನು ಪ್ರತಿ ಕ್ಷಣವೂ ಗೌರವಿಸೋಣ ಮತ್ತು ಅವರು ಹೇಳಿದಂತೆ ನಡೆಯೋಣ !

ಬದುಕು ಕೊಟ್ಟ ಎಲ್ಲ ಸ್ತ್ರೀಯರಿಗೂ ಹ್ಯಾಪಿ ವುಮನ್ಸ್ ಡೇ

  • ಸುದರ್ಶನ್ ಬಿ. ಪ್ರವೀಣ್, ಬೆಳಾಲು
Leave A Reply

Your email address will not be published.