Breaking | ಕನಕಪುರದ ಕದನ ವೀರನಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಶ ಪಟ್ಟ | ಕುರುಕ್ಷೇತ್ರ ಗ್ಯಾರಂಟೀಡ್ !

ಪ್ರತಿಷ್ಠಿತ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದು ಗೆದ್ದುಕೊಂಡು ಮೀಸೆ ತಿರುವುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕುರುಕ್ಷೇತ್ರ ಶುರು ! ಜೆಡಿಎಸ್ ನ ಗಡಗಡ !!
ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಿದರೆ, ಅದರಿಂದ ಪಕ್ಷದ ವರ್ಚಸ್ಸಿಗೆ ಘಾಸಿ ಆಗುತ್ತದೆ ಎಂದು ಸಿದ್ದು ಅವರ ವಾದವಿತ್ತು. ಪಕ್ಷದಲ್ಲಿ ಹಲವು ಅರ್ಹರಿದ್ದಾರೆ. ಹಲವು ಜಾತಿಗಳನ್ನು ಪ್ರತಿನಿಧಿಸುವ ನಾಯಕರುಗಳಿದ್ದಾರೆ. ಒಕ್ಕಲಿಗರಲ್ಲಿ, ಶುದ್ಧ ವರ್ಚಸ್ಸಿನ ಕೃಷ್ಣ ಬೈರೇಗೌಡ, ಲಿಂಗಾಯತರಲ್ಲಿ, ಉತ್ತರಕರ್ನಾಟಕದಲ್ಲಿ ಯೆಡಿಯೂರಪ್ಪರಿಗೆ ಠಕ್ಕರ್ ಕೊಡಬಲ್ಲ ಎಂ ಬಿ ಪಾಟೀಲ್ ಮುಂತಾದವರಿದ್ದಾರೆ ಎಂಬುದು ಸಿದ್ದರಾಮಯ್ಯನವರ ವಾದ.
ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ಆರೋಪ ಇರುವ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡ ಎಂದು ಹಠಕ್ಕೆ ಬಿದ್ದ ಸಿದ್ದರಾಮಯ್ಯನವರಿಗೆ ಕೊನೆಗೂ ಸೋಲಾಗಿದೆ.
ಈಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಮೂರೂ ತೆರವಿತ್ತು.
ವಿಪಕ್ಷ ನಾಯಕನ ಮತ್ತು ಸಿಎಲ್ ಪಿ ಸ್ಥಾನದಲ್ಲಿ ಸಿದ್ದರಾಮಯ್ಯನವರು ಮುಂದುವರಿಯಲಿದ್ದಾರೆ. ಕರ್ನಾಟಕದಲ್ಲಿ VLA – ಒಕ್ಕಲಿಗ, ಲಿಂಗಾಯತ ಮತ್ತು ಅಹಿಂದ ಫಾರ್ಮುಲಾಗೆ ಜಯ ಆಗಿದೆ. V ಪರವಾಗಿ ಶಿವಕುಮಾರ್ ಕೆ ಪಿ ಸಿ ಸಿ ಅಧ್ಯಕ್ಷರಾದರೆ ಒಂದು ಇದ್ದ ಕಾರ್ಯಾಧ್ಯಕ್ಷ ಹುದ್ದೆಯನ್ನು ಮೂರಕ್ಕೆ ಏರಿಸಲಾಗಿದೆ. ಮತ್ತು ಹಿಂದುಳಿದ ವರ್ಗದ ಪರ ಸತೀಶ್ ಜಾರಕಿಹೊಳಿ ಮತ್ತು ಅಲ್ಪಸಂಖ್ಯಾತರ ಪರ ಸಲೀಂ ಅಹಮದ್ ಅವರು ಕಾರ್ಯಾಧ್ಯಕ್ಷರಾಗಲಿದ್ದಾರೆ. ಇಲ್ಲಿ, A ಗೆ ಪ್ರಾತಿನಿಧ್ಯ ಕೊಟ್ಟಂತೆ ಆಯಿತು. ಹಳೆಯ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಮುಂದುವರೆಯಲಿದ್ದಾರೆ. ಅಲ್ಲಿಗೆ L ಗೆ ಪ್ರಾತಿನಿಧ್ಯ ಕೊಟ್ಟಂತೆ ಆಯಿತು.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ – ಈ ಎರಡೂ ಕಡೆಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ-ಲಾಬಿ ನಡೆಸಿದ್ದರು. ಈಗ ಡಿಕೆಶಿ ಕೈ ಮೇಲಾಗಿದೆ. ಆದರೂ ಇಬ್ಬರು ಸಿದ್ದರಾಮಯ್ಯನವರ ನಿಷ್ಠ ಇಬ್ಬರು ಕಾರ್ಯಾಧ್ಯಕ್ಷರಾಗಿರುವುದರಿಂದ ಸಿದ್ದು ಕೂಡಾ ಬೀಗೋದಕ್ಕೆ ಅಡ್ಡಿ ಏನೂ ಇಲ್ಲ.
ಬಿಜೆಪಿ ಹೇಗೋ ಕಾಂಗ್ರೆಸ್ ಗೆ ಸಾಂಪ್ರದಾಯಿಕ ಎದುರಾಳಿ. ಆದರೆ ಒಕ್ಕಲಿಗರ ಬಲಿಷ್ಠ ನಾಯಕ ಡಿಕೆಶಿ ಅವರ ಆಯ್ಕೆಯಿಂದ ಬಿಜೆಪಿಗಿಂತಲೂ ಒಕ್ಕಲಿಗರ ಓಟನ್ನೇ ಬಹುವಾಗಿ ನೆಚ್ಚಿಕೊಂಡಿರುವ ಜೆಡಿಎಸ್ ಗೆ ತೀವ್ರ ಹಿನ್ನಡೆಯಾಗಲಿದೆ.
ಈಗಾಗಲೇ ಇಡಿ ಇಕ್ಕಳದಲ್ಲಿ ಸಿಕ್ಕಿಕೊಂಡಿರುವ ಕಳಂಕಿತ ಡಿಕೆಶಿಯನ್ನು ಕಾಂಗ್ರೆಸ್ ಯಾವ ರೀತಿ ಜನರ ಮುಂದೆ ಮತ್ತು ಬಿಜೆಪಿಯ ಮುಂದೆ ಸಮರ್ಥಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಕಾಲ ತಳ್ಳುವ ಕಾಂಗ್ರೆಸ್ಸಿನ ಎಂದಿನ ಸ್ಟ್ರಾಟೆಜಿ ಮಧ್ಯಪ್ರದೇಶದಲ್ಲಿ ಅದಕ್ಕೆ ಭಾರೀ ಏಟು ನೀಡಿತ್ತು. ನಿನ್ನೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ್ದರು. ಹೀಗೆ ಕಾಲತಳ್ಳಿದರೆ, ಪಕ್ಷದಿಂದ ಎಲ್ಲರೂ ಹೋಗಿಬಿಡುವ ಆತಂಕದಿಂದ ಕಾಂಗ್ರೆಸ್ ಇವತ್ತು ಕರ್ನಾಟಕದಲ್ಲಿ ಈ ನಿರ್ಧಾರ ತಗೊಂಡಿದೆ. ಏನೇ ಇರಲಿ ಡಿಕೆಶಿ ಓರ್ವ ಸಮರ್ಥ ಎನ್ನುವುದರಲ್ಲಿ ಎರಡು ಆಲೋಚನೆ ಮಾಡುವಂತಿಲ್ಲ. ಮುಂದೆ ಇದೆ ಕುರುಕ್ಷೇತ್ರ ಯುದ್ಧ. ಬಿಜೆಪಿ- ಕಾಂಗ್ರೆಸ್ ಯುದ್ಧದಲ್ಲಿ ಜೆಡಿಎಸ್ ಡ್ಯಾಮೇಜ್ ಆಗುವುದು ಪಕ್ಕಾ ಅಂತ ರಾಜಕೀಯ ಪಂಡಿತರು ಊಹೆ ಮಾಡುತ್ತಿದ್ದಾರೆ.
ನಮ್ಮ ಫೇಸ್ ಬುಕ್ ಪೇಜ್ ಗೆ ನಿಮಗಿದೋ ಆಹ್ವಾನ. ಇಲ್ಲಿ ಕ್ಲಿಕ್ ಮಾಡಿ