ಮ್ಯಾನೇಜ್ ಮೆಂಟ್ ಸ್ಟೋರಿ | ಅವಳು ಮೈಮರೆತು ನಿದ್ರಿಸಿರುವಾಗ…..
ಸಾಮಾನ್ಯವಾಗಿ ಟಾಪ್ ಮ್ಯಾನೇಜ್ ಮೆಂಟ್ ಗೆ ಅಂತಹಾ ಬಿಜಿ ಆದ ಕೆಲಸಗಳು ಇರುವುದಿಲ್ಲ. ಅದಕ್ಕೆ ಉಳಿದ ಸಂಸ್ಥೆಗಳಿಗೆ ಇರುವಂತಹ ತಿಂಗಳ ಕೊನೆಯ ಟಾರ್ಗೆಟ್ ಇರುವುದಿಲ್ಲ. ಆದರೆ ಕಮಿಟ್ಮೆಂಟ್ ಇದ್ದೇ ಇರುತ್ತದೆ. ಅದು ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತದೆ. ಮೇಲ್ನೋಟಕ್ಕೆ ಮ್ಯಾನೇಜ್ ಮೆಂಟ್ ನಿದ್ರೆಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಅದು ನಿದ್ರಿಸಬಾರದು. ಮ್ಯಾನೇಜ್ ಮೆಂಟ್ ಅಂದರೇನೆಂದು ಯಾರು ಎಷ್ಟು ವ್ಯಾಖ್ಯಾನಿಸಿದ್ದರು ಸರಿಯಾಗಿ ಅರ್ಥವಾಗಲಿಕ್ಕಿಲ್ಲ. ಮ್ಯಾನೇಜ್ ಮೆಂಟ್ ಎಂದ ಕೂಡಲೇ ಅದು ಸಾಂಸ್ತಿಕ ಅಗತ್ಯಕ್ಕೆ ಸಂಬಂಧಪಟ್ಟ ವಿಚಾರ, ಔದ್ಯೋಗಿಕ ವಲಯದಲ್ಲಿ ಬೇಕಾದ ಅಗತ್ಯತೆ ಮಾತ್ರ – ಹೀಗೆ ನಾವು ಯೋಚಿಸುತ್ತೇವೆ. ಆದರೆ ಅದು ತಪ್ಪು. ಆಡಳಿತವು ಜೀವನದ ಪ್ರತಿ ಸಂಘಟನೆಯಲ್ಲಿಯೂ ಅತ್ಯಗತ್ಯ. ಮುಖ್ಯವಾಗಿ ರಾಜಕೀಯ ವಲಯದಲ್ಲಿ ಇದರ ಅಗತ್ಯತೆ ತುಂಬಾ ಇರುತ್ತದೆ.
ನಾವು ದಿನ ನಿತ್ಯ ಭ್ರಷ್ಟ ರಾಜಕಾರಣಿಗಳ ಬಗ್ಗೆ ಜನರು ಮಾತಾಡುವುದನ್ನು ಕೇಳುತ್ತಾ ಇರುತ್ತೇವೆ. ಅವನು ಅಷ್ಟು ತಿಂದ, ದುಡ್ಡು ಹೊಡೆದು ಜೈಲಿಗೆ ಹೋದ, ಈ ರಾಜಕಾರಣಿಯ ಆಸ್ತಿ ಐದು ವರ್ಷದಲ್ಲಿ ದಬ್ಬಲ್ಲಾಯಿತು ಇತ್ಯಾದಿ. ಎಷ್ಟೋ ಸಲ ಸಾರ್ವಜನಿಕರ ದುಡ್ಡು ಒಂದು ಕೋಟಿ ಅವ್ಯವಹಾರ ಆದರೆ, ಅದರ ಸಿಂಹಪಾಲು ರಾಜಕಾರಣಿಗೆ ಹೋಗುತ್ತದೆ. ಅರ್ಧಕರ್ಧ ಅವನು ( ಅಥವಾ ಅವಳು ಕೂಡಾ. ಈಗೀಗ ಆಕೆ ಕೂಡ ತಿನ್ನಲು ಸ್ಟಾರ್ಟ್ ಮಾಡಿದ್ದಾಳೆ !!) ತಿಂದಿರಬಹುದು. ಉಳಿದದ್ದು ಆತನ ಬೇಜಾಬ್ದಾರಿಯಿಂದ ( ಪೂರ್ ಮ್ಯಾನೇಜ್ ಮೆಂಟ್ ನಿಂದ ) ಸೋರಿ ಹೋಗಿರುತ್ತದೆ. ಮ್ಯಾನೇಜ್ ಮೆಂಟ್ ತಿಳಿದಿರದ ಕುಟುಂಬದ ಮುಖ್ಯಸ್ಥರ ಮಕ್ಕಳು ಕೂಡ ದಾರಿ ತಪ್ಪುತ್ತಾರೆ. ಅಪ್ಪ ಅಮ್ಮನ ಮಾತು ಕೇಳುವುದಿಲ್ಲ. ಸರಿಯಾಗಿ ಬಗ್ಗಿಸುವುದು ಮತ್ತು ಸರಿಯಾದ ಸಮಯದಲ್ಲಿ ಬಗ್ಗಿಸುವುದು ಕೌಟುಂಬಿಕ ಆಡಳಿತದಲ್ಲಿ ಅನುಸರಿಸುವ ಪ್ರಮುಖ ವಿಧಾನಗಳು.
ಜಗತ್ತಿನ ಸುಪ್ರಸಿದ್ಧ ಲ್ಯಾಟರಲ್ ಥಿಂಕರ್ ಎಡ್ವರ್ಡ್ ಡೇ ಬೋನೋ ಮೊಟ್ಟ ಮೊದಲಿಗೆ ಲ್ಯಾಟರಲ್ ಥಿಂಕಿಂಗ್ ಎಂಬ ಪದವನ್ನು ಬಳಸಿದನು, 1967 ರಲ್ಲಿ.
ವಾಚ್ಯವಾಗಿ ಹೇಳುವುದನ್ನು ಸೂಚ್ಯವಾಗಿ, ಘಟನೆಗಳ ಮತ್ತು ಕಥೆಗಳ ಮೂಲಕ ಹೇಳುವ, ಆಮೂಲಕ ಮೂಲ ಸಿದ್ದಂತವನ್ನು ಇನ್ನೆಂದಿಗೂ ಮರೆಯಲಾರದಂತೆ ಮಾಡುವ ಶಕ್ತಿ ಲ್ಯಾಟರಲ್ ಥಿಂಕಿಂಗ್ ಗೆ ಇದೆ. ಸಾಹಿತ್ಯ ಕೂಡ ಒಂದರ್ಥದಲ್ಲಿ ಲ್ಯಾಟರಲ್ ಥಿಂಕಿಂಗ್ ನೇ !
ಮ್ಯಾನೇಜ್ ಮೆಂಟ್ ಅಂದರೇನೆಂದು ಹೇಳುವ ಈ ಕಥೆ ಓದಿ.
ಮಗ ತನಗೆ ಬುದ್ಧಿ ತಿಳಿದಾಗಿನಿಂದ ನೋಡುತ್ತಾನೆ. ಅಪ್ಪ ಬೆಳಗಾನೆದ್ದು ಶೂ ಟಕ ಟಕಾಯಿಸುತ್ತಾ ಮನೆ ಬಿಡುತ್ತಾನೆ. ರಾತ್ರಿ ತಾನು ಮಲಗಿದ ನಂತರ ಮನೆ ಸೇರುತ್ತಾನೆ.
ಹುಡುಗನೂ ತುಂಬಾ ದಿನ ನೋಡಿದ. ಸ್ವಲ್ಪ ಬುದ್ಧಿ ಬಂದ ಮೇಲೆ ಅಪ್ಪನನ್ನು ಕೇಳುತ್ತಾನೆ.
” ಅಪ್ಪ ಅಪ್ಪ ನೀನು ಬೆಳಿಗ್ಗೆ ಎದ್ದು ದಿನ ಹೋಗ್ತಿಯಲ್ಲ ಎಲ್ಲಿಗೆ ? “
ಶೂ ಗೆ ಲೇಸು ಬಿಗಿಯುತ್ತಿದ್ದ ಅಪ್ಪ ಹೇಳಿದ ” ಆಫೀಸಿಗೆ ಪುಟ್ಟ”
” ಅಲ್ಲಿ ಏನ್ ಮಾಡ್ತೀಯಾ ನೀನು ? ” ಪುಟ್ಟನದು ಕುತೂಹಲ.
” ಬಿಜಿನೆಸ್ ಮಾಡ್ತೀನಿ “
” ಬಿಸಿನೆಸ್ ಯಾಕ್ ಮಾಡ್ತೀಯಾ ? ” ಪುಟ್ಟ ಕೇಳಿದ.
” ಬಿಜಿನೆಸ್ ನಿಂದ ದುಡ್ಡು ಬರುತ್ತೆ ” ಅಪ್ಪ ನುಡಿದ.
” ದುಡ್ಡು ಯಾಕೆ ಬೇಕು ” ಮಗನದು ಮತ್ತಷ್ಟು ಕುತೂಹಲ.
” ಓಹೋ ಮಗ ಬೆಳೆಯುತ್ತಿದ್ದಾನೆ. ಆತನಿಗೆ ಎಲ್ಲಾ ವಿವರಿಸಿ ಹೇಳಬೇಕೆಂದುಕೊಂಡ ಅಪ್ಪ ಮಗನನ್ನು ಹತ್ತಿರ ಕರೆದು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೇಳುತ್ತಾನೆ.
” ನಾನು ಬಿಜಿನೆಸ್ ಮಾಡುತ್ತೇನಲ್ಲ, ಅದರಿಂದ ದುಡ್ಡು ಬರುತ್ತೆ. ಅದು ಕ್ಯಾಪಿಟಲ್. ಆ ದುಡ್ಡನ್ನು ನಾನು ತಂದು ನಿನ್ನ ಅಮ್ಮನ ಕೈಗೆ ಕೊಡುತ್ತೇನೆ. ಅವಳು ಅದನ್ನು ಯಾವುದಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡುತ್ತಾಳೆ. ಅದೇ ಹಣದಿಂದ ಅವಳು ನಿನಗೆ ಈ ಬಣ್ಣದ ಡಾಲ್ ಎಲ್ಲಾ ತಂದುಕೊಳ್ಳುತ್ತಾಳೆ. ಸ್ವಲ್ಪ ಉಳಿಸುತ್ತಾಳೆ. ಅವಳು ಮ್ಯಾನೇಜ್ ಮೆಂಟ್ “
ಅಷ್ಟರಲ್ಲಿ ಅಲ್ಲಿಗೆ ನೆಲ ಓರೆಸುತ್ತಾ ಕೆಲಸದವಳು ಬರುತ್ತಾಳೆ.
” ಇವಳು…? ” ಅವಳತ್ತ ಬೆರಳು ತೋರಿಸಿ ಕೇಳುತ್ತಾನೆ ಮಗ.
” ಅವಳು ಲೇಬರ್, ನಮ್ಮ ಚಾಕರಿ ಮಾಡುವುದು ಅವಳ ಕೆಲಸ” ಎಂದು ಅಪ್ಪ ಹೇಳುತ್ತಾನೆ.
ಮಗ ಸುಮ್ಮನಾಗುತ್ತಾನೆ. ಇನ್ನೇನು ಅಪ್ಪ ಹೊರಟು ಹೋಗಬೇಕು, ಆಗ ಮಗ ಕೇಳುತ್ತಾನೆ ಅಲ್ಲಿ ಅಂಬೆಗಾಲಿಡುತ್ತಿರುವ ತನ್ನ ತಮ್ಮನನ್ನು ಕುರಿತು.
ಅದಕ್ಕೆ ಅಪ್ಪ ” ಅವನು ಫ್ಯೂಚರ್ ” ಎಂದು ಬಿಟ್ಟು ಮಗನ ಕೆನ್ನೆಗೊಂದು ಹೂ ಮುತ್ತು ಕೊಟ್ಟು ಡ್ಯೂಟಿಗೆ ಹೊರಟು ಹೋಗುತ್ತಾನೆ ಅಪ್ಪ. ಮಗನಿಗೆ ಸ್ವಲ್ಪ ಅರ್ಥವಾಗುತ್ತದೆ. ಮತ್ತಷ್ಟು ಇಲ್ಲ. ದಿನಗಳು ಉರುಳುತ್ತವೆ.
ಅಂದು ಮಾಡಿದ ಪಾಠದ ವಿಷಯವನ್ನು ಅಪ್ಪ ಮರೆತೇ ಹೋಗುತ್ತಾನೆ. ಒಂದು ದಿನ ಪುಟ್ಟನಿಗೆ ನಿದ್ದೆಯಿಂದ ಎಚ್ಚರವಾಗುತ್ತದೆ. ಯಾರೋ ಅಳುತ್ತಿರುವ ಸದ್ದು. ನಿದ್ದೆ ತಿಳಿಯಾಗಿ ನೋಡಿದರೆ, ತನ್ನ ತಮ್ಮಅಳುತ್ತಿರುವುದು ಮನವರಿಕೆಯಾಗುತ್ತದೆ. ತಿರುಗಿ ನೋಡಿದರೆ ಅಮ್ಮ ಗಾಡ ನಿದ್ದೆಯಲ್ಲಿದ್ದಾಳೆ. ಅಮ್ಮನ ಪಕ್ಕದಲ್ಲಿ ತಮ್ಮ ಅಳುತ್ತಿದ್ದರೂ ಎಚ್ಚರವಾಗದಷ್ಟು ಗಾಢ ನಿದ್ರೆ ಆಕೆಯದು. ಎಂದೂ ಅಮ್ಮನ ಮೇಲೆ ಕಾಲು ಬಿಸಾಕಿಕೊಂಡು ಮಲಗಿರುತ್ತಿದ್ದ ಅಪ್ಪ ಇವತ್ತು ಅಲ್ಲಿ ಕಾಣಿಸುವುದಿಲ್ಲ. ಪುಟ್ಟ ಅಮ್ಮನನ್ನು ಅಲುಗಿಸಿ ಎಬ್ಬಿಸಲು ಪ್ರಯತ್ನಿಸುತ್ತಾನೆ. ಆದರೆ ಆಕೆಗೆ ಭಯಂಕರ ನಿದ್ದೆ.
ಪುಟ್ಟ ಆ ಸುವಿಶಾಲ ಮನೆಯಲ್ಲಿ ಅಪ್ಪನಿಗಾಗಿ ಹುಡುಕುತ್ತಾನೆ. ಒಂದು ರೂಮಿನೊಳಗೆ ಸಣ್ಣಗೆ ಬೆಳಕು ನೆರಳುಗಳ ಸರಿದಾಟ. ಚಿಲಕ ಹಾಕದೇ ಇದ್ದ ಬಾಗಿಲ ಸಂದಿನಿಂದ ಪುಟ್ಟ ಇಣುಕುತ್ತಾನೆ. ಅಪ್ಪ ಮನೆ ಕೆಲಸದವಳೊಂದಿಗೆ ಬೆರೆಯುತ್ತಿದ್ದಾನೆ. ಪುಟ್ಟನಿಗೆ ಏನೊಂದೂ ಸರಿಯಾಗಿ ಅರ್ಥವಾಗುವುದಿಲ್ಲ. ಆಗ ಪುಟ್ಟನಿಗೆ ಅಪ್ಪ ಹಿಂದೆ ಹೇಳಿದ್ದ ಪಾಠ ನೆನಪಿಗೆ ಬರುತ್ತದೆ.
” ಕ್ಯಾಪಿಟಲ್ ಈಸ್ ಎಕ್ಸ್ಪ್ಲೋಯ್ಟಿಂಗ್ ದ ಲೇಬರ್ “
” ಬಿಕಾಸ್ ಆಫ್ ದಿ ಮ್ಯಾನೇಜ್ ಮೆಂಟ್ ಈಸ್ ಸ್ಲೀಪಿಂಗ್ “
” ದಟ್ ಈಸ್ ವೈ ದಿ ‘ ಫ್ಯೂಚರ್ ಈಸ್ ಸಿಂಕಿಂಗ್ ”
ಮ್ಯಾನೇಜ್ ಮೆಂಟ್ ಎಂದೂ ಎಲ್ಲೂ ಮೈಮರೆತು ನಿದ್ರಿಸದೆ ಇರಲಿ. ಅದು ಕ್ಯಾಪಿಟಲ್ ನ ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳಲಿ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು