ಹೀಗೂ ಇರ್ತಾರೆ ಜನ । ಇವರನ್ನು ಫಾಲೋ ಮಾಡಿದ್ರೆ ಮನುಷ್ಯನ ಅಳಿವು ಪಕ್ಕಾ
ಉಳಿದೆಲ್ಲ ಆಂದೋಲನಕ್ಕಿಂತ ತುಂಬಾ ವಿಶೇಷವಾದ ಅಷ್ಟೇ ವಿಕ್ಷಿಪ್ತವಾಗಿ ಮೂವ್ ಮೆಂಟ್ ಒಂದಿದೆ. ಈ ಆಂದೋಲನವು ಮನುಷ್ಯನ ಮೂಲಭೂತ ಅಸ್ತಿತ್ವವನ್ನೇ ಪ್ರಶ್ನಿಸುವಂತದ್ದು. ಅಲುಗಾಡಿಸುವ೦ತದ್ದು.
ಅದು ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನ (Voluntary Human Extinction Movement) (VHEMENT). ಇದಕ್ಕೆ ಆಂಟಿ ನಾಟಲಿಸಂ ಎಂದೂ, ಕೆಲವರು ಇದನ್ನು ನೆಗೆಟಿವ್ ಯುಟಿಲಿಟೇರಿಯಂಗೆ ಬದಲಿ ಪದವಾಗೂ ಬಳಸುತ್ತಾರೆ.
ಈ ಆಂದೋಲನವು ಡು ನಾಟ್ ಪ್ರೊಡ್ಯೂಸ್ ಚೈಲ್ಡ್ ಎಂಬ ಘೋಷವಾಕ್ಯದೊಂದಿಗೆ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ.
ಮನುಷ್ಯ ಜೀವನ ಒಂದು ನಿರಂತರ ಸಫರಿಂಗ್. ನೋವು ಇಲ್ಲದೆ ಜೀವನವಿಲ್ಲ. ನಿಜಕ್ಕೂ ನೋವಂದರೇನೇ ಜೀವನ. ಇದೆಲ್ಲ ನಮಗೆ ಗೊತ್ತಿದ್ದೂ ಯಾಕೆ ನಾವು ಮಕ್ಕಳನ್ನು ಹುಟ್ಟಿಸಬೇಕು ? ಅವರನ್ನು ಯಾಕೆ ಈ ನೋವಿನ ಜಗತ್ತಿಗೆ ಕರೆತರಬೇಕು? ಯಾಕೆ ಅವರನ್ನು ನೋವಿನ ಸರ್ಕಲ್ಲಿಗೆ ದೂಡಬೇಕು ? ಈಗ ನಾವು ಮಾಡಿದ ಅನರ್ಥವೇ ಸಾಕಷ್ಟಿದೆ. ಅಷ್ಟು ಹಾನಿ ಈ ಭೂಮಿಗೆ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ನಾವು ಹೇಗೋ ಹುಟ್ಟಿದ್ದೇವೆ. ಖಚಿತವಾಗಿ ನಾವು ಸಾಯಲಿದ್ದೇವೆ. ನಾವು ಮಕ್ಕಳನ್ನು ಹುಟ್ಟಿಸುವುದು ಬೇಡ. ನಮ್ಮಿಂದಾಗುವ ಮಕ್ಕಳು ಯಾಕೆ ನಮ್ಮಂತೆಯೇ ಮುಂದೆ ನೋವು ಪಡಬೇಕು?
ಏನು ತಮಾಷೆ ಮಾಡುತ್ತಿದ್ದೀರಾ? ಅಂತ ನೀವು ಕೇಳಬಹುದು. ನಿಜ, ಇದು ತಮಾಷೆಯಲ್ಲ. ನಿಮಗೆ ಕಾಮಿಡಿ ಥರ ಕಾಣಬಹುದು. ಈ ಪ್ರಪಂಚದಲ್ಲಿ ಅದೆಷ್ಟೋ ಸಿಲ್ಲಿ ಸಂಸ್ಥೆಗಳಿವೆ. ಇದು ಕೂಡ ಅಂತದ್ದೇ ಒಂದು ಸಂಸ್ಥೆ ಅಂದುಕೊಳ್ಳಬೇಡಿ. ಅಷ್ಟಕ್ಕೂ ಇದನ್ನು ಸಂಸ್ಥೆ ಎಂದು ಇದರ ಪ್ರವರ್ತಕರು ಒಪ್ಪುವುದಿಲ್ಲ. “ನಮ್ಮದು ಆರ್ಗನೈಸಷನ್ ಅಲ್ಲ, ನಮ್ಮದು ಒಂದು ಆಂದೋಲನ” ಅನ್ನುತ್ತಾರೆ ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನ ದ ಮಂದಿ .
ಮಾನವನನ್ನು ಅಳಿವಿನಂಚಿಗೆ ಆಂದೋಲನದ ಉದ್ದೇಶ ಎಲ್ಲದಕ್ಕಿಂತಲೂ ಭಿನ್ನವಾದುದು. ಉಳಿದೆಲ್ಲ ಆಂದೋಲನಗಳಲ್ಲಿ ಕೆಲವು ಸಿಲ್ಲಿ ಅನಿಸಿಕೊಂಡರೆ ಮತ್ತೆ ಕೆಲವು ನಮ್ಮನ್ನು ಒಂದಷ್ಟು ಚಿಂತನೆಗೆ ಹಚ್ಚುತ್ತವೆ. ಆದರೆ ಮಾನವ ಎಕ್ಸ್ಟಿಂಟ್ ಆಂದೋಲನವು ತುಂಬಾ ಗಂಭೀರವಾದ ಮತ್ತು ಸಡನ್ನಾಗಿ ಒಪ್ಪಿಕೊಳ್ಳಲಾಗದ ಆದರೆ ಕಾನ್ಸೆಪ್ಟ್ ಅನ್ನು ಒಪ್ಪಿಕೊಳ್ಳದೆ ವಿಧಿ ಇಲ್ಲದ ಆಂದೋಲನ. ಯಾಕೆಂದರೆ ಪ್ರತಿ ಮನುಷ್ಯನಿಗೂ ಗೊತ್ತು ನಮ್ಮ ಬದುಕು ಎಷ್ಟು ಯಾಂತ್ರಿಕವಾದದ್ದು, ನಿರರ್ಥಕವಾದದ್ದು ಮತ್ತು ಎಷ್ಟು ಅಸ್ಥಿರವಾದದ್ದು ಎಂದು. ಇವತ್ತು ಸುಖ ಬಂದರೆ ಬೆನ್ನ ಹಿಂದೆಯೇ ಕಷ್ಟಗಳ ಸರಮಾಲೆ, ರೋಗರುಜಿನ, ಅವಘಡ, ಸಾವು-ನೋವು, ಖಚಿತವಾಗಿ ಬೆನ್ನ ಹಿಂದೆ ಒಂದರ ಹಿಂದೆ ಒಂದು ಓಡೋಡಿ ಬರುತ್ತವೆ.
ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನದ ಬಗ್ಗೆ ಚಿಂತನೆಯನ್ನು ಮೊದಲು ಹುಟ್ಟು ಹಾಕಿದವನು ಲೆಸ್ ಯು ನೈಟ್ ಎಂಬ ಅಮೇರಿಕನ್, 1991 ರಲ್ಲಿ.
ಈ VEHEMENT ಆಂದೋಲನದ ವಾಲಂಟೀರರು ಏನಂದುಕೊಳ್ಳುತ್ತಿದ್ದಾರೆಂದರೆ, ಉಳಿದ ಲಕ್ಷಾಂತರ ಸಸ್ಯ ಪ್ರಭೇದ ಮತ್ತು ಪ್ರಾಣಿ ಸಂತತಿಗಳು ಅಳಿಯುವುದಕ್ಕಿಂತ, ಮನುಷ್ಯ ಅಳಿದು ಹೋಗುವುದೇ ಒಳ್ಳೆಯದು. ಹಾಗೊಂದು ವೇಳೆ ಮನುಷ್ಯರು ಕಡ್ಡಾಯವಾಗಿ ಎಲ್ಲರೂ ಈ ಆಂದೋಲನದ ಆಶಯವನ್ನು ಪಾಲಿಸಿ ಮನುಷ್ಯನ ಅಳಿವು ಆದರೂ, ಆಗ ನಮ್ಮ ಒಟ್ಟು ಇಕಾಲಜಿಯ ಮೇಲಿನ ಭಾರ ಕಮ್ಮಿಯಾಗುತ್ತದೆ. ಇತರ ಸಸ್ಯ ಪ್ರಾಣಿ ಪ್ರಪಂಚ ಹ್ಯಾಪಿಯಾಗಿ, ಬಾಳಿ, ಬದುಕಿ, ಸತ್ತು ಮತ್ತಷ್ಟು ಹೊಸ ವಿಕಾಸಕ್ಕೆ ನಾಂದಿಯಾಗುತ್ತದೆ. ಈ ವಿಕಾಸವಾದದಲ್ಲಿ, ಯಾರಿಗ್ಗೊತ್ತು, ಮತ್ತೊಮ್ಮೆನಮ್ಮಂತಹಾ ತಲೆಹರಟೆ ಮನುಷ್ಯನೇ ಹುಟ್ಟಿ ಬಂದರೂ ಬರಬಹುದು !
ಒಂದು ವೇಳೆ ನಾವೆಲ್ಲರೂ ಈ ಆಂದೋಲನವನ್ನು ಒಪ್ಪಿದರೆ ನಮ್ಮ ದೇಶ ಜನರೆಲ್ಲರೂ ಏಕಾಏಕಿ ಶ್ರೀಮಂತರಾಗುತ್ತೇವೆ. ರಾಜಕಾರಣಿಗಳು ದುಡ್ಡು ಹೊಡೆಯುವುದಿಲ್ಲ. ವಾಣಿಜ್ಯೋದ್ಯಮಗಳು ದುಡ್ಡು ಕೂಡಿಡುವುದಿಲ್ಲ. ಈಗ ಅವರೆಲ್ಲರಲ್ಲಿರುವ ದುಡ್ಡು ಮೂರು ಶತಮಾನ ಕೂತು ತಿಂದರೂ ಕರಗುವಷ್ಟಿದೆ. ಅವರಿಗೆ ಖರ್ಚಿಗೆ ಬೇಕಾದಷ್ಟನ್ನು, ಇನ್ನು ನೂರು ವರ್ಷಕ್ಕೆ ಇಟ್ಟುಕೊಂಡು ಉಳಿದುದನ್ನವರು ದಾನ ಮಾಡುತ್ತಾರೆ. ಇನ್ನು ಜಾಸ್ತಿ ಟೆನ್ಷನ್ ಮಾಡಿ ಕೆಲಸ ಮಾಡುವ ಅಗತ್ಯ ಇಲ್ಲ. ತಿಂದುಂಡು ಎಷ್ಟು ಸಾಧ್ಯವೋ ಅಷ್ಟು ಆರಾಮವಾಗಿರಬಹುದು. ಮಕ್ಕಳ ಮೊಮ್ಮಕ್ಕಳ ಕಾಲಕ್ಕೆ ಯಾರಿಗೂ ಕೂಡಿಡುವ ಅಗತ್ಯ ಇಲ್ಲ. ಯುವಕರು ಮದುವೆಯಾಗುವುದಕ್ಕೆ, ಸೆಕ್ಸ್ ಮಾಡುವುದಕ್ಕೆ ಅಡ್ಡಿ ಇಲ್ಲ. ಸೆಕ್ಸ್ ಬೇಡ ಅಂದರೂ ಅವರು ಮಾಡದೆ ಬಿಡುವುದಿಲ್ಲ. ಆದರೆ ಮಕ್ಕಳು ಮಾಡಬೇಡಿ. ತಕ್ಷಣದಿಂದ ಗಯ್ನಾಕಾಲಾಜಿ ವಿಭಾಗ ಬೇಡ. ಈಗ ತಾನಷ್ಟೇ ಹುಟ್ಟಿದ್ದ ಮಕ್ಕಳಿದ್ದರೆ, ಅವರಿಗಾಗಿ ಇನ್ನು ಹದಿನೈದು-ಹದಿನೆಂಟು ವರ್ಷ ಪೀಡಿಯಾಟ್ರಿಕ್ ವಿಭಾಗವನ್ನು ಉಳಿಸಿಕೊಳ್ಳೋಣ. ಆನಂತರ ಮಕ್ಕಳಿಲ್ಲದ ಕಾರಣ ಅದನ್ನು ಮುಚ್ಚಿದ್ರಾಯ್ತು. ಹೀಗೆ ಒಂದೊಂದಾಗಿ ಸರ್ವೀಸುಗಳು ನಿಲ್ಲುತ್ತಾ ಹೋಗುತ್ತವೆ. ನಿಮ್ಮ ಜೀವನ ಕೊನೆಯ ಹತ್ತು ವರ್ಷಕ್ಕಾಗುವಷ್ಟು ಆಹಾರ, ಮದ್ದು ಮಾತ್ರೆ, ಬೇಕಿದ್ದರೆ ಮದಿರೆ ಎಲ್ಲ ಸಂಗ್ರಹಿಸಿ ಮನೆಯಲ್ಲೇ ಭದ್ರವಾಗಿಡಿ. ಇಲ್ಲದೆ ಹೋದರೆ , ನೀವು ವೃದ್ದಾಪ್ಯದಲ್ಲಿರುವುದರಿಂದ,ಆ ದಿನಗಳಲ್ಲಿ ನಿಮಗೆ ಅರೇಂಜ್ ಮಾಡಿಕೊಳ್ಳುವುದು ಕಷ್ಟವಾಗಬಹುದು.
ಭಾರತದಲ್ಲಿ ವೆಹೆಮೆಂಟ್
ಭಾರತದಲ್ಲಿ ರಫೆಲ್ ಸಾಮ್ಯುಯೆಲ್ ಎಂಬಾತ ತನ್ನ ತಂದೆ ತಾಯಿಯ ವಿರುದ್ಧ ಕೋರ್ಟಿಗೆ ನಡೆದಿದ್ದಾನೆ.
” ನನ್ನ ಪರ್ಮಿಶನ್ ಇಲ್ಲದೆ ನೀವು ಯಾಕೆ ನನ್ನನ್ನು ಈ ಜಗತ್ತಿಗೆ ಹುಟ್ಟಿಸಿದಿರಿ ಬಂದಿರಿ ?” ಎಂದು ಆತನ ವಾದ. ಆತನ ತಂದೆ ತಾಯಿಯರಿಬ್ಬರೂ ಲಾಯರುಗಳು. ಮನೆಯಲ್ಲಿ ಮಗ ಮತ್ತು ಅಪ್ಪ ಅಮ್ಮಎಲ್ಲರೂ ಅನ್ಯೋನ್ಯವಾಗಿಯೇ ಇದ್ದಾರೆ. ಆದರೂ ಆತ ತನ್ನ ತಂದೆ ತಾಯಿಯ ಮೇಲೆ ಕೇಸು ಹೂಡಲಿಚ್ಚಿಸುತ್ತಾನೆ. ಕೇಸು ಹಾಕುವುದು ಜಸ್ಟ್ ಸಿಂಬಾಲಿಕ್. ತನ್ನ ಆಂಟಿ ನಾಟಲಿಸ್ಮ್ ಸಿದ್ದಾಂತವನ್ನು ಪ್ರಚಾರಪಡಿಸಲು ಒಂದು ಸಾಧನ ಅಷ್ಟೇ ಈ ಕೋರ್ಟು ಕೇಸು.
ಆತ ಅಮ್ಮನಿಗೆ ಒಂದು ಸಲ ಕೇಳಿದ್ದ, ಮೊದಲ ಬಾರಿಗೆ. ” ಯಾಕಮ್ಮ ನನ್ನ ನೀವು ಹುಟ್ಟಿಸಿದ್ದು ?”
ಅದಕ್ಕೆ ಆತನ ಅಮ್ಮ ಕವಿತಾ ಹೇಳ್ತಾರೆ” ನೋಡು, ನೀನೊಂದು ವೇಳೆ, ನಮ್ಮಮದ್ವೆ ಆದ ಕೂಡ್ಲೇ ನಂಗೆ ಬಂದು ಹೇಳಿದ್ದಿದ್ರೆ, ನಾನು ಆಗ ಯೋಚ್ನೆ ಮಾಡ್ತಿದ್ದೆ. ಆಗ ನಾನು ಚಿಕ್ಕ ಪ್ರಾಯದವಳಿದ್ದೆ. ಇಂತದ್ದೊಂದು ಆಪ್ಷನ್ ಇದೆ ಅಂತ ನಂಗೆ ಗೊತ್ತಿರಲಿಲ್ಲ”
ಆತನ ಉದ್ದೇಶವೂ ಅದೇ, ಅಪ್ಪ ಅಮ್ಮನ ಮೇಲೆ ಕೋರ್ಟು ಕೇಸು ಹಾಕುವುದರ ಮೂಲಕ, ಮತ್ತು ಫೇಸ್ ಬುಕ್ ಮತ್ತಿತರ ಸೋಷಿಯಲ್ ಮೀಡಿಯಾಗಳ ಮೂಲಕ ಇಂತದ್ದೊಂದು ಆಪ್ಷನ್ ನ್ನು ಸಮಾಜದ ಮುಂದಿಡುವ ಕೆಲಸ ಮಾಡುತ್ತಿದ್ದಾನೆ. ಆಸಕ್ತರು Nihilanand ಅನ್ನುವ ಫೇಸ್ ಬುಕ್ ಅಕೌಂಟ್ ನ್ನು ಸರ್ಚ್ ಮಾಡಿ. ಅಂದ ಹಾಗೆ, ಆತನಿಗೆ ಇನ್ನೂ ಲಾಯರುಗಳು ಸಿಕ್ಕಿಲ್ಲವಂತೆ, ಕೋರ್ಟಿನಲ್ಲಿ ಅಪ್ಪ-ಅಮ್ಮನ ಎದುರು ಬಡಿದಾಡಲು. ನಿಮ್ಮಲ್ಲಿ ಯಾರಾದರೂ ವಕೀಲರಿದ್ದರೆ ನನ್ನ ಕಡೆಯಿಂದ ಒಂದು ಕೇಸು ರೆಫರ್ ಮಾಡ್ತಿದ್ದೇನೆ !
ಸುದರ್ಶನ್ ಬಿ. ಪ್ರವೀಣ್, ಬೆಳಾಲು