Motivation : ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್
Motivation : ಆ ದಿನ ಚಳಿಗಾಲದ ಮುಂಜಾನೆಯಲ್ಲೂ ಸಣ್ಣಗೆ ಬಿಸಿಲು ಬಿಚ್ಚಿಕೊಂಡಿತ್ತು. ಅದು 1983 ರ ಸಮಯ. ಆ ದಿನ 875 ಕಿಲೋ ಮೀಟರುಗಳ ದೂರದ ಆಸ್ಟ್ರೇಲಿಯಾದ(Australia) ಸಿಡ್ನಿಯಿಂದ(Sydney) ಮೆಲ್ಬೋರ್ನ್(Melbourne) ವರೆಗಿನ ಮಹಾನ್ ಮ್ಯಾರಥಾನ್(Marathon) ಪಂದ್ಯಾಟ ನಡೆಯಲಿತ್ತು.(Motivation)
ಓಟ ಇನ್ನೇನು ಶುರುವಾಗಲಿತ್ತು. ಓಟಗಾರರು ಒಬ್ಬೊಬ್ಬರಾಗಿ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಷ್ಟರಲ್ಲಿ ಓವ್ರ ವೃದ್ಧ, ಮಳೆಗಾಲದಲ್ಲಿ ಧರಿಸುವಂತಹಾ ರಬ್ಬರ್ ಶೂ (ಗಮ್ ಬೂಟ್) ಧರಿಸಿಕೊಂಡು, ಮೈಮೇಲೊಂದು ದೊಗಳೆ ಜೆರ್ಕಿನ್ ಹಾಕಿಕೊಂಡು ಬಂದು ನಿಂತ.
ಸುತ್ತಮುತ್ತ ಮ್ಯಾರಥಾನ್ ನ ಪ್ರಾರಂಭವನ್ನು ವೀಕ್ಷಿಸಲು ಬಂದಿದ್ದ ಜನರು, ಈತನು ತನ್ನ ಇಷ್ಟದ ಓಟಗಾರನನ್ನು ನೋಡಲು ಬಂದಿರಬೇಕೆಂದುಕೊಂಡರು. ಅಲ್ಲೇ ಇದ್ದ ಪತ್ರಕರ್ತರು ಆತನನ್ನು ಬದಿಗೆ ಸರಿದುಕೊಳ್ಳಲು ಸೂಚಿಸಿದರು. ಓರ್ವ ಪೊಲೀಸ್ ಲಾಠಿ ಕಟಾಯಿಸುತ್ತ ಅಲ್ಲಿಗೆ ಬಂದು ವೃದ್ಧನನ್ನು ಬದಿಗೆ ಸರಿಯಲು ಹೇಳಿದ.
ಆದರೆ, ವೃದ್ಧನು ತಾನು ಕೂಡ ಮ್ಯಾರಥಾನ್ ನಲ್ಲಿ ಭಾಗವಹಿಸಲು ಬಂದಿದ್ದೇನೆಂದು ಹೇಳಿದಾಗ, ಅವರಲ್ಲಿ ಒಂದರೆ ಕ್ಷಣ ಅಚ್ಚರಿ. ಆ ನಂತರ ನಗು.
ಪ್ರೆಸ್ ನವರು ಆತನನ್ನು ಮಾತಾಡಿಸಲು ಹೊರಟರು. ಸುತ್ತ ನೆರೆದಿದ್ದ ವಿಡಿಯೋ ಪತ್ರಕರ್ತರು ಜನರಿಗೆ ಸದಾ ಮನರಂಜನೆ ನೀಡಬಲ್ಲಂತಹಾ ಇಂತಹಾ ಘಟನೆಗಳ ಚಿತ್ರೀಕರಣಕ್ಕೆ ತೊಡಗಿದರು.
ಏಕೆಂದರೆ, ಆ ದಿನ ನಡೆಯಲಿದ್ದುದು ಸುಧೀರ್ಘ 875 ಕಿಲೋಮೀಟರುಗಳ ದೂರದ ಮ್ಯಾರಥಾನ್ ಪಂದ್ಯಾಟ ! ಅದು ಸುಮಾರು 7 ದಿನಗಳಷ್ಟು ಸುಧೀರ್ಘವಾದ ಓಟದ ಪಂದ್ಯ. ಅಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ 30 ವರ್ಷ ಪ್ರಾಯದ ಒಳಗಿನವರಾಗಿರುತ್ತಾರೆ ಮತ್ತು ಇಂಟರ್ ನ್ಯಾಷನಲ್ ಮಟ್ಟದ ಫಿಟ್ನೆಸ್ ಉಳ್ಳವರಾಗಿರುತ್ತಾರೆ. ಅವರದು ಕಲ್ಲಿನಿಂದ ಕಟೆದ ದೇಹ. ಬಿಲ್ಲಿನಂತೆ ಬಗ್ಗಬಲ್ಲ ಫ್ಲೆಕ್ಸಿಬಿಲಿಟಿ. ರಬ್ಬರು ತುಂಡಿನಂತೆ ಪುಟಿಯಬಲ್ಲ ಮಾಂಸಖಂಡಗಳು. ಅಲ್ಲದೆ ಅವರೆಲ್ಲರಿಗೂ ನೈಕ್, ರಿಬಾಕ್ ಮುಂತಾದ ದೈತ್ಯ ಕಂಪನಿಗಳ ಸ್ಪೊನ್ಸರ್ ಶಿಪ್ ಇರುತ್ತದೆ. ಅಂಥವರ ಮದ್ಯೆ ಸರಿಯಾಗಿ ನಡೆಯಲೂ ಬಾರದ ವೃದ್ಧನೊಬ್ಬನು ಓಟಕ್ಕೆ ನಿಂತರೆ ಮತ್ತೇನಾಗುತ್ತದೆ? ಈ ಮನರಂಜನೆಯ ಸರಕನ್ನು ಸುದ್ದಿ-ದೃಶ್ಯ ಮಾಧ್ಯಮಗಳು ಸರಿಯಾಗಿಯೇ ಎನ್ ಕ್ಯಾಷ್ ಮಾಡಲಾರಂಭಿಸಿದರು.
ಅಷ್ಟರಲ್ಲಿ ರೇಸು ಮೊದಲಾಯಿತು. ಚಿರತೆಯಂತಹ ನೋಟದ, ಕುದುರೆಯಂತೆ ಪುಟಿಯುವ ಕ್ರೀಡಾಳುಗಳು ನೋಡನೋಡುತ್ತಿದ್ದಂತೆಯೇ ಮುಂದೆ ಸಾಗಿ ಹೋದರು. ಸುತ್ತ ನೆರೆದಿದ್ದ ಜನರಿಗೆ ಈಗ ಕಾಣುತ್ತಿರುವುದು ಸರಿಯಾಗಿ ನಡೆಯಲೂ ಆಗದೆ, ಓಡಲೂ ಆಗದೆ, ಕುಂಟು ಕಾಲು ಹಾಕುತ್ತ ಸಾಗುತ್ತಿದ್ದ ವೃದ್ಧ. ಜನರು ನಗೆಗಡಲಲ್ಲಿ ಮುಳುಗಿದರು. ಮತ್ತೆ ಕೆಲವರು ಈತ ಸ್ವಲ್ಪ ಓಡಿದರೆ ಸತ್ತೇ ಹೋಗಬಹುದೆಂದು ಭಯಪಟ್ಟರು.
ಸಾಮಾನ್ಯವಾಗಿ ಅಲ್ಟ್ರಾ ಮ್ಯಾರಥಾನ್ ಓಡುವವರು ದಿನದ 18 ಗಂಟೆಗಳಷ್ಟು ದೀರ್ಘವಾಗಿ ಓಡುತ್ತಾರೆ ಮತ್ತು ಉಳಿದ 6 ಗಂಟೆಗಳಷ್ಟು ಸಮಯ ನಿದ್ರಿಸುತ್ತಾರೆ. ಇದು ಅವರ ಓಟದ-ದಿನದ ದಿನಚರಿ. ಆದರೆ ಈ ವೃದ್ಧನಿಗೆ ಅದ್ಯಾವುದೂ ಕೂಡ ಗೊತ್ತಿಲ್ಲ. ಹವ್ಯಾಸಿ ಓಟಗಾರನಾದ ಆತನಲ್ಲಿ ಅಂತಹಾ ಯಾವುದೇ ಗೇಮ್ ಪ್ಲಾನ್ ಇರಲಿಲ್ಲ!
ಎಂದಿನಂತೆ ಉಳಿದ ಆಟಗಾರರು ಹದಿನೆಂಟು ಗಂಟೆ ನಿರಂತರವಾಗಿ ಓಡಿ, ಉಳಿದ ಆರು ಗಂಟೆಗಳಷ್ಟು ನಿದ್ರಿಸುತ್ತಾರೆ. ಮರುದಿನ ಬೆಳಿಗ್ಗೆ ಎದ್ದು ಮತ್ತೆ ಓಟ ಶುರುವಿಟ್ಟಾಗ ಅವರಿಗೆಲ್ಲ ಅಚ್ಚರಿ: ವೃದ್ಧ ಮನುಷ್ಯ ಮತ್ತೆ ಕುಂಟುತ್ತಾ ( shuffle ) ಸಾಗಿದ್ದ : ನಿದ್ರೆ ಮಾಡದೆ, ರಾತ್ರಿಯಿಡೀ ಕುಂಟುತ್ತಲೇ ಜಾಗ್ ಮಾಡುತ್ತಾ ! ನಿನ್ನ ಮುಂದಿನ ರೇಸ್ ಪ್ಲಾನ್ ಏನೆಂದು ಆತನನ್ನು ಪ್ರಶ್ನಿಸಿದಾಗ, ಕೊನೆಮುಟ್ಟುವವರೆಗೂ ನಿರಂತರವಾಗಿ ಓಡುವುದು” ಎಂದು ಉತ್ತರಿಸುತ್ತಾನೆ. ( ಮುಂದೆ, ಆತನ ಕುಂಟುತ್ತಾ ಓಡುವ ಸ್ಟೈಲ್ ‘ ಯಂಗ್ ಶಫ್ಲ್ ‘ ಎಂದು ಪ್ರಖ್ಯಾತಿಯಾಗುತ್ತದೆ)
ಹಾಗೆ 61 ವರ್ಷದ ವೃದ್ಧ ಸರಿಸುಮಾರು 5 ದಿನ, 15 ಗಂಟೆ, 4 ನಿಮಿಷಗಳಲ್ಲಿ 875 ಕಿಲೋಮೀಟರುಗಳನ್ನು ಕ್ರಮಿಸುತ್ತಾನೆ. ಕೊನೆಯ ದಿನದವರೆಗೂ ಉಳಿದ ಓಟಗಾರರುಗಳಿಗಿಂತ ಹಿಂದೆಯೇ ಬಿದ್ದಿದ್ದು, ಕೊನೆಯದಿನ, ಉಳಿದ ಆಟಗಾರರು ತಮ್ಮ ಸತುವನ್ನೆಲ್ಲ ಕಳೆದುಕೊಂಡು ಪೇಲವವಾಗಿ ಓಡುತ್ತಿರುವಾಗ, ತನ್ನ ಮೊದಲ ದಿನದ ಉತ್ಸಾಹದಿಂದ ಆತ ಓಡಿದ್ದ. ಮರುದಿನ ಬೆಳಗಾಗುವುದರೊಳಗೆ ಹೊಸ ಕೂಟ ದಾಖಲೆ ಆತನ ಹೆಸರಲ್ಲಿ ಸ್ಥಾಪಿತಗೊಂಡಿತ್ತು. ಉಳಿದ ಆಟಗಾರರಿಗಿಂತ 7 ಗಂಟೆಗಳಷ್ಟು ಮುಂಚೆ ಆತ ಓಟ ಮುಗಿಸಿದ್ದ.! ಏಳರಿಂದ ಎಂಟು ದಿನಗಳಲ್ಲಿ ಓಡುತ್ತಿದ್ದ ಓಟವನ್ನು ಐದೂವರೆ ದಿನಗಳಲ್ಲಿ ಮುಗಿಸಿ, ಹೊಸ ಕೂಟ ದಾಖಲೆ ಒರೆಸಿ ಬರೆದಿದ್ದ. ಮ್ಯಾರಥಾನ್ ಓಟದ ಮಧ್ಯೆ ದಿನಕ್ಕೆ 6 ಗಂಟೆ ನಿದ್ರಿಸುವುಸು ಅನಿವಾರ್ಯಎಂಬ ಮಿಥ್ ಅನ್ನು ಆತ ಓಟದ ಮೂಲಕ ಲೋಕಕ್ಕೆ ತೋರಿಸಿ ಕೊಟ್ಟಿದ್ದ.
ಆ ಮಹಾನುಭಾವನ ಹೆಸರೇ, ಕ್ಲಿಫ್ ಯಂಗ್ ! ಆಲ್ಬರ್ಟ್ ಕ್ಲಿಫರ್ಡ್ ಅರ್ನೆಸ್ಟ್ ಯಂಗ್!
ಏನಿದು ಯಂಗ್ ಶಫಲ್ ?
ಓಟದ ಸಮಯದಲ್ಲಿ ಸಾಕಷ್ಟು ಶಕ್ತಿ ದೇಹದಿಂದ ವ್ಯಯವಾಗುತ್ತದೆ. ಆಟಗಾರರಿಗೆ ಇದರಿಂದಾಗಿ ನಿರಂತರವಾಗಿ ಓಡಲು ಸಾಧ್ಯವಾಗುವುದಿಲ್ಲ. ಆದರೆ ‘ಯಂಗ್ ಶಫಲ್ ‘, ಅಂದರೆ ಕುಂಟುತ್ತಾ ಓಡುವ ವಿಧಾನವು, ಅದು ಬಹಳಷ್ಟು ಶಕ್ತಿ ಉಳಿಸುವ ‘ ಎನರ್ಜಿ ಎಫಿಷಿಯೆಂಟ್ ‘ ಓಟವಾಗಿರುತ್ತದೆ. ಹಾಗಾಗಿ, ಓಟಗಾರರು ನಿರಂತರವಾಗಿ ಓಡಲು ಇದರಿಂದ ಸಾಧ್ಯವಾಗುತ್ತದೆ. ಈತನು ಸ್ಪರ್ಧೆಯಲ್ಲಿ ವಿಜೇತನಾದ ನಂತರ ಅನೇಕ ಓಟಗಾರರು, ಕ್ಲಿಫ್ ನ ಎನರ್ಜಿ ಉಳಿತಾಯದ ಓಟವನ್ನು ಅಳವಡಿಸಿಕೊಂಡರು.
ಸಾಧಿಸುವಾತನ ಡಿಟರ್ಮಿನೇಷನ್ ನ ಎದುರು ಯಾವುದೇ ಸವಾಲುಗಳೂ ನಿಲ್ಲುವುದಿಲ್ಲವೆಂದು ತೋರಿಸಿಕೊಟ್ಟ ಕ್ಲಿಫ್ ಯಂಗ್ ಮುಂದೆ ಆಸ್ಟ್ರೇಲಿಯಾದ ಬಹು ದೊಡ್ಡ ಪ್ರೇರಣೆಯಾಗುತ್ತಾನೆ.
ವಯಸ್ಸಿನ ಕಾರಣ ಹೇಳಿ ತನ್ನಿಂದಾಗದು ಎಂದು ಖಾಲಿ ಕುಳಿತವರಿಗೆ, ತನಗೆ ಸರಿಯಾದ ವಿದ್ಯೆಯಿಲ್ಲವೆಂದು ಹಿಂಜರಿಕೆ ಬೆಳೆಸಿಕೊಂಡವರಿಗೆ, ತನಗೆ ಸರಿಯಾದ ಟ್ರೇನಿಂಗ ಇಲ್ಲ, ನನಗೆ ಇಂಜಿನೀರಿಂಗ್ ಓದಲಾಗಲಿಲ್ಲ, ಡಾಕ್ಟರಿಕೆ ಓದುವಷ್ಟು ದುಡ್ಡಿರಲಿಲ್ಲ, ಮನೆಯಲ್ಲಿ ಓದಿಸಲಿಲ್ಲವೆಂದು ಅಪ್ಪ ಅಮ್ಮನನ್ನ ದೂಷಿಸುವವರಿಗೆ, ನನ್ನಿಂದಾಗದು ಎಂದು ಕೈಕಟ್ಟಿ ಕುಳಿತವರಿಗೆ ಕ್ಲಿಫ್ ಯಂಗ್ ಯಾವತ್ತಿಗೂ ಒಂದು ಪ್ರಾಕ್ಟಿಕಲ್ ಪಾಠ. ಎಷ್ಟೇ ವಯಸ್ಸಾದರೂ ಯಂಗ್ ಆಗೇ ಇರುವ ಪಾಠವನ್ನು ಹೇಳಿಕೊಟ್ಟವನು ಕ್ಲಿಫ್ ಯಂಗ್. ಇಷ್ಟಕ್ಕೂ ಆತನ ಸಾಧನೆಯ ಹಿಂದಿನ ಸತ್ಯವೇನು? ಆತ ಅಂತಹ 61 ರ ವಯಸ್ಸಿನಲ್ಲಿ ಮ್ಯಾರಥಾನ್ ಗೆಲುವಿನ ಹಿಂದಿನ ಒಂದಷ್ಟು ಸಾಮಾನ್ಯ ಮ್ಯಾನೇಜ್ಮೆಂಟ್ ಪಾಠಗಳಿವೆ. ಅದರ ಬಗ್ಗೆ ನೋಡೋಣ.
ನಿಮ್ಮ ನಡಿಗೆಯ, ನಿಮ್ಮ ಗುರಿಯ, ನೀವು ಟಾರ್ಗೆಟ್ ಮಾಡುವ ಮ್ಯಾರಥಾನ್ ನ ಮೊದಲ ಗುರಿಯೇ ಮೊದಲ 100 ಮೀಟರ್. ನೋಡ ನೋಡುತ್ತಲೇ ನೀವು ಮೊದಲ 100 ಮೀಟರು ಕ್ರಮಿಸಿರುತ್ತೀರಿ. ಅದು ನಿಮ್ಮಮೊದಲ ಗೆಲುವು. ಅದೇ ಮೊದಲಿನ 100 ಮೀಟರುಗಳು ನಿಮ್ಮನಂತರದ ಒಂದು ಕಿಲೋಮೀಟರ್ ಪ್ರಯಾಣಕ್ಕೆಪ್ರೇರಣಾ ಶಕ್ತಿ. ಒಂದು ಸಲ ನೀವು ಒಂದು ಕಿಲೋಮೀಟರ್ ಚಲಿಸಿದಿರೆಂದರೆ ನಂತರದ ಗುರಿ ದೊಡ್ಡದಿರುತ್ತದೆ ಮುಂದಿನ ಎಲ್ಲ ಗುರಿಗಳನ್ನು ನೀವು ಈ ದಿನ ಪ್ರಾರಂಭಿಸಿದ 100 ಮೀಟರುಗಳ ನಡಿಗೆಯೇ ಇಂಧನವಾಗಿ ಪೂರೈಸುತ್ತದೆ. ಸೋಲೋ ಗೆಲುವೋ ನಿಮ್ಮಮೊದಲ 100 ಮೀಟರು ನಡೆದು ಬಿಡಿ.
ಮೇಕ್ ಎನಿ ಕೈಂಡ್ ಆಫ್ ಪ್ರೋಗ್ರೆಸ್ : ಜಸ್ಟ್ ಸ್ಟಾರ್ಟ್. ಸೋಲು ಗೆಲುವು ಆಮೇಲೆ. ಕ್ಲಿಫ್ ಮಾಡಿದ್ದು ಅದನ್ನೇ. ಯಾಕೋ ಆತನಿಗೆ ಮ್ಯಾರಥಾನ್ ಓಡಬೇಕೆನಿಸಿತು.
ಆತನಿಗೆ ಮುಂದೆ ನೋಡಿ ಓಡುವುದೊಂದೇ ಗೊತ್ತಿತ್ತು. ಪಕ್ಕದ ಓಟಗಾರರು ಏನು ಮಾಡುತ್ತಿದ್ದಾರೆ ಎಂಬ ಹಂಗು ಆತನಿಗೆ ಇರಲಿಲ್ಲ. ಅಂದರೆ ಆತ ಉಳಿದವರ ಜತೆ ತನ್ನನ್ನು ಕಂಪೇರ್ ಮಾಡಿಕೊಳ್ಳಲಿಲ್ಲ. ಸೋಲುವ ಭಯ ಆತನಲ್ಲಿ ಇನಿತೂ ಇರಲಿಲ್ಲ. ಗೆಲ್ಲುವಾತನದು ಆ ಕ್ಷಣದ ಜೀವಿತ. ಹಾಗೆ ಜಸ್ಟ್ ಸ್ಟಾರ್ಟ್ ಮಾಡಿ ಜಗತ್ತಿಗೆ ಪ್ರೇರಣೆಯಾದವನು ಕ್ಲಿಫ್ ಯಂಗ್.
ಥ್ಯಾಕ್ಸ್ ಕ್ಲಿಫ್, ಜಗತ್ತಿಗೆ ವೇಗದ ಮತ್ತು endurance ನ ಪಠ್ಯ ಜಗತ್ತಿಗೆ ಬೋಧಿಸಿದಕ್ಕೆ.
ಸುದರ್ಶನ್ ಬಿ.ಪ್ರವೀಣ್, ಬೆಳಾಲು