ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್!
ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು.
ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು ನೀಡಿವೆ. 2018 ರಲ್ಲಿ, ದೆಹಲಿಯ ನಿವಾಸಿಯೊಬ್ಬರು ಪಟಾಕಿಯನ್ನು ದೀಪಾವಳಿಯ ಸಂದ ರ್ಭದಲ್ಲಿ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟು ಹತ್ತಿದ್ದರು. ಆ ಕೇಸು ರಾಜಗೋಪಾಲ್ ವರ್ಸಸ್ ಭಾರತ ಸರಕಾರ ಎಂದು, ಸುಪ್ರೀಂ ಕೋರ್ಟಿನಲ್ಲಿ ಮತ್ತು ಹೊರಗಡೆ ದೊಡ್ಡಮಟ್ಟದಲ್ಲಿ ಚರ್ಚೆಗೆ ನಾಂದಿಯಾಯಿತು. ಕೊನೆಯದಾಗಿ, ಪಟಾಕಿ ನಿಷೇಧಿಸುವುದಕ್ಕೆ ಸುಪ್ರೀಂ ಕೋರ್ಟು ಒಪ್ಪದೆ, ಕಡಿಮೆ ಮಾಲಿನ್ಯವಿರುವ ಪಟಾಕಿಗಳನ್ನು ತಯಾರಿಸುವಂತೆ ಕೋರ್ಟು ಆದೇಶಿಸಿತು.
ಒಪ್ಪಬೇಕಾದದ್ದೇ. ಇವತ್ತಿನ ಮಾಲಿನ್ಯದ ಪ್ರಮಾಣವನ್ನು ನೋಡುವಾಗ ಇದರ ಬಗ್ಗೆ, ತುಂಬಾ ಸೀರಿಯಸ್ ಆಗಿ ಯೋಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ನಾನೀಗ ಮಾತಾಡಹೊರಟದ್ದು, ಪಟಾಕಿ, ಸುಡುಮದ್ದುಗಳಿಂದ ಆಗುತ್ತಿರುವ ಮಾಲಿನ್ಯದ ಬಗೆಗಲ್ಲ .ಆದರೆ, ನಾವು ನೀವೆಲ್ಲ ಮರೆತು ಹೋದ, ನಮ್ಮ ಗಮನಕ್ಕೆ ಬಾರದ ಅತ್ಯಂತ ದೊಡ್ಡ ಮಾಲಿನ್ಯವೊಂದಿದೆ. ಅದು ಬೇರೆ ಎಲ್ಲಾ ಮಾಲಿನ್ಯಕ್ಕಿಂತಲೂ ಅತ್ಯಂತ ಭೀಷಣವಾದುದು.
ಅದು ಸೆಲೆಬ್ರಿಟಿ ಕ್ರಿಯೇಟೆಡ್ ಪೊಲ್ಲ್ಯೂಷನ್ !
ನೀವು ಬೇಕಾದರೆ ಬೇರೆ ಯಾವುದೇ ಹೆಸರಿನಲ್ಲಿ ಕರೆಯಿರಿ. ಅದರ ಒಟ್ಟಾರೆ ಭಾವನೆ ನಿಮಗರ್ಥವಾದರೆ ಸಾಕು.
ನಮ್ಮರಾಜಕಾರಣಿಗಳು, ಚಿತ್ರರಂಗದ ನಾಯಕ ನಾಯಕಿರನೇಕರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತರುಗಳು ದಿನಕ್ಕೆ ಎಷ್ಟು ಯೂನಿತ್ತು ವಿದ್ಯುತ್ ಬಳಸುತ್ತಾರೆ? ಅವ್ರ ಮನೆಯಲ್ಲಿ ಎಷ್ಟು ನೀರು ಬಳಸುತ್ತಾರೆ? ಅವರ ಟಾಯ್ಲೆಟ್ಟಿಗೆ ಏನೆಲ್ಲಾ ಕೆಮಿಕಲ್ಸು ಎಷ್ಟೆಷ್ಟು ಬಳಸುತ್ತಾರೆ? ಎಷ್ಟು ರಿಸೋರ್ಸ್ ಅವರು ಖರ್ಚು ಮಾಡುತ್ತಾರೆ?
ಅವರ ಐಷಾರಾಮಿ ಜೀವನದ ಅರಿವು ಒಂದು ಸಾರಿ ಅಂತಹವರ ಮನೆಗೆ, ಆಫೀಸಿಗೆ,ಮಹಲಿಗೆ ಹೋಗಿ ನೋಡಿದರೆ ತಿಳಿಯುತ್ತದೆ.
ಅವರ ಮನೆಯಲ್ಲಿ, ಆಫೀಸುಗಳಲ್ಲಿ ಮತ್ತು ಸ್ಟಾರ್ ಹೋಟೆಲ್ ಗಳಲ್ಲಿ ಇಡೀ ದಿನ ವಿದ್ಯುತ್ ಉರಿಯುತ್ತಿರುತ್ತದೆ. ಅಲ್ಲಿ ರಾತ್ರಿ ಮತ್ತು ಹಗಲು ಎರಡೂ ಒಂದೇ. ಅಲ್ಲಿ ದೀಪ ಆರುವುದಿಲ್ಲ. ಸ್ಟಾರ್ ಹೊಟೇಲುಗಳಲ್ಲಿ ಅರ್ಧಕರ್ಧ ಆಹಾರ ತಯಾರಿಕಾ ಹಂತದಲ್ಲೇ ಗಾರ್ಬೇಜು ಸೇರುತ್ತದೆ. ಉಳಿದುದರಲ್ಲಿ ಅರ್ಧ ತಿನ್ನದೇ ಹಾಗೇ ಮುನಿಸಿಪಾಲಿಟಿಗೆ ಬರುತ್ತದೆ. ಸೆಲೆಬ್ರಿಟಿಗಳದ್ದು 2500 ಸಿಸಿಗಿಂತ ದೊಡ್ಡ ವಾಹನ. ಅದರ ಮೈಲೇಜು ಎಷ್ಟು ಕಮ್ಮಿಗೊತ್ತಾ? ಮತ್ತು, ಅವರೆಷ್ಟು ಸಾವಿರ ಕಿಲೋಮೀಟರು ತಿರುಗುತ್ತಾರೆ? ಎಷ್ಟು ಪೆಟ್ರೋಲು, ಎಷ್ಟು ಡೀಸೆಲ್ ಉರಿದು ಹೋಗಿದೆ ? ಅಂತಹ ಎಷ್ಟು ವಾಹನ ಅವರ ಹಿಂದೆ ಹೊಗೆಯುಗುಳುತ್ತ ಓಡುತ್ತವೆ?
ಅವರ ವಾರಕ್ಕೆರಡು ಸಾರಿಯ ವಿಮಾನ ಯಾನ. ಮನೆಯಲ್ಲಿ ಸ್ಕಾಚು ವಿಸ್ಕಿ ಮತ್ತು ಗಂಡು ಹೆಣ್ಣು ಇಬ್ಬರೂ ಸಮಾನತೆಗಾಗಿ ಸೇದುವ ಸಿಗರೇಟು ! ಸೆಲೆಬ್ರಿಟಿಗಳೆನಿಸಿಕೊಂಡ ಮೇಲೆ ಪಟ್ಟಿಮಾಡಿದ ಪ್ರತಿಯೊಬ್ಬರೂ ಈ ಭೂಮಿಗೆ ಭಾರ. ಪರಿಸರ ಮಾಲಿನ್ಯದ ದೃಷ್ಟಿಯಿಂದ.
ಉಹೂ೦.. ಇವನ್ನೆಲ್ಲ ನಾವು ಯಾರು ಕೂಡ ಪ್ರಶ್ನಿಸಬಾರದು. ಯಾಕೆಂದರೆ ಅವರು, ಸೆಲೆಬ್ರಿಟಿಗಳು. ಅವರು ರಾಜರುಗಳು ಮತ್ತು ನಮ್ಮ ನಾಯಕರುಗಳು. ಹೀಗೆ ವೃಥಾ ನಮ್ಮ, ನೀರು, ಆಹಾರ, ಪೆಟ್ರೋಲು, ಡೀಸೆಲ್ಲು, ಗ್ಯಾಸು ಗಳನ್ನೂ ದಿನ ನಿತ್ಯ ಬಳಸಿ, ಹೊತ್ತಿ ಉರಿಸಿ ಭಾರತದ ನಿಜವಾದ ಪರ್ಲ್ಲ್ಯೂಷನ್ ಪ್ರಾಬ್ಲಮ್ ಆಗಿರುವ ಇಂತವರು ನಮಗೆ ಉಪದೇಶಕ್ಕೆ ನಿಲ್ಲುತ್ತಾರೆ. ಇವರ ಪ್ರವಚನವೆಲ್ಲ, ಕಷ್ಟದಿಂದ ದುಡಿದು ಬದುಕು ನಡೆಸಿ, ವರ್ಷಕ್ಕೊಂದು ಬಾರಿ ಬರುವ ನಮ್ಮಮನೆ ಮನಸ್ಸುಗಳಿಗೆ ಬೆಳಕು ತರುವ ದೀಪಾವಳಿಯ ದಿನ ಮಕ್ಕಳ ಜತೆ ಪಟಾಕಿ ಸಿಡಿಸಿ ಹಬ್ಬ ಆಚರಿಸುವ ನಮ್ಮ ನಮ್ಮಂತ ಬಡ ಮಧ್ಯಮವರ್ಗದವರ ಮೇಲೆ.
ಒಂದು ದಿನದ ತ್ರಾಜ್ಯವನ್ನು, ಪಟಾಕಿ ಉಂಟು ಮಾಡುವ ಸಲ್ಫರ್ ಡಯಾಕ್ಸೈಡನ್ನು, ಇಂಗಾಲದ ಡಯಾಕ್ಸೈಡನ್ನು ಮತ್ತಿತರ ತ್ರ್ಯಾಜ್ಯವನ್ನು ನ್ಯೂಟ್ರಲೈಜ್ ಮಾಡಿಕೊಳ್ಳುವ ತಾಕತ್ತು ನಮ್ಮ ಭೂಮಿ ಮತ್ತು ಈ ಗಿಡ ಮರಗಿಡಗಳಿಗೆ ಯಾವತ್ತೂ ಇದೆ. ಈ ಭೂಮಿಯಲ್ಲಿ ಸರಿ ಸುಮಾರು 60 ರಿಂದ 70 ಆಕ್ಟಿವ್ ಆಗಿರುವ ವೋಲ್ಕನೋಗಳಿವೆ. ಇವುಗಳು ವರ್ಷಕ್ಕೊಂದು ಬಾರಿಯಾದರೂ ಬಾಯಿ ತೆರೆಯದೆ ಇರವು. ಉಳಿದಂತೆ ಇರುವ 20 ವೋಲ್ಕನೋಗಳು ದಿನನಿತ್ಯ ಅವುಗಳ ಬಾಯಿಯಿಂದ ಲಾವಾದ ಜತೆಗೆ ವಿಷಕಾರಿ ಅನಿಲಗಳನ್ನು ಹೊರಬಿಡುತ್ತಲೇ ಇರುತ್ತವೆ. ಇದನ್ನೂ ನಮ್ಮ ಭೂಮಿ ತಾಳಿಕೊಂಡಿದೆ.
ಆದರೆ ನಿಮ್ಮಂತಹ ‘ಸೆಲೆಬ್ರಿಟಿ’ ಗಳು ಕೊಡಮಾಡುವ, ದಿನನಿತ್ಯದ ,ಶೋಕಿಗಾಗಿ, ತೆವಳಿಗಾಗಿ ಉಂಟಾದ ‘ಮಾಲಿನ್ಯವು ಈ ಸಮಾಜಕ್ಕೆ ಮೊದಲ ಮಾರಕ. ಇದು ಇವತ್ತು ಪರಿಸರ ಮಾಲಿನ್ಯ ಮಾತ್ರ ಆಗಿ ಉಳಿದಿಲ್ಲ. ಅದೊಂದು ದೊಡ್ಡ ‘ಮನೋ ಮಾಲಿನ್ಯ’ ವಾಗಿ ಕೂಡ ಬೆಳೆದು ನಿಂತಿದೆ. ವಿಪರ್ಯಾಸವೆಂದರೆ ಜನಸಾಮಾನ್ಯರೇ ಈ ‘ಸೆಲೆಬ್ರಿಟಿ ಮಾಲಿನ್ಯ’ ವನ್ನು ಪಸರಿಸುತ್ತಿರುವುದು. ಒಂದು ಚಿತ್ರ ಬಿಡುಗಡೆಯಾದರೆ, ಒಬ್ಬ ರಾಜಕಾರಣಿ ಗೆದ್ದರೆ, ತಮ್ಮ ವಿರೋಧಿ ರಾಜಕಾರಣಿ ಸೋತರೆ; ದೊರೆ ಜೈಲಿನಿಂದ ಹೊರಗೆ ಬಂದರೆ, ನಮಗಾಗದವರು ಜೈಲೊಳಗೆ ಹೋದರೆ-ಎಲ್ಲದಕ್ಕೂ ನಮಗೆ ಸುಡುಮದ್ದು ಬೇಕು.. ಹಬ್ಬಕ್ಕೆ ಮಾತ್ರ ಬೇಡ.
ಸೆಲೆಬ್ರಿಟಿಗಳೇ ಮೊದಲು ಪಾಲಿಸಿ, ನಂತರ ಪ್ರವಚನ. ವಾಕ್ ದ ಟಾಕ್ !
ಸುದರ್ಶನ್ ಬಿ. ಪ್ರವೀಣ್, ಬೆಳಾಲು