ಸೇಫ್ ಆದ್ರಲ್ಲ ಯಡಿಯೂರಪ್ಪ!
ಸದ್ಯ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗಿನ ನಿರಾಳತೆ!
ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಬಿಗ್ ರಿಲೀಫ್!
ಶತಾಯಗತಾಯ ಮುಖ್ಯಮಂತ್ರಿಯಾಗುವುದೇ (ಮೂರನೆಯ ಬಾರಿ! ) ತಮ್ಮಜೀವನದ ಮಹದಾಸೆ ಎಂಬಂತೆ ವರ್ತಿಸುತ್ತಿದ್ದ ಯಡಿಯೂರಪ್ಪನವರು ಹಠ ಬಿಡದೆ ಮುಖ್ಯಮಂತ್ರಿ ಆಗಿಯೇ ಬಿಟ್ಟರು. ಇವರ ಈ ಹಟವೇ ಅವರನ್ನು ಇಲ್ಲಿಯ ತನಕ ತಂದು ನಿಲ್ಲಿಸಿದ್ದು. 2 ಶಾಶಕರಿದ್ದುಕೊಂಡು ವಿಧಾನಸಭೆಯ ಒಂದು ಮೂಲೆಯಲ್ಲಿ ಪರಕೀಯರಂತೆ ಕುಳಿತಿರಬೇಕಾಗಿದ್ದ ಅಂದಿನ ಸ್ಥಿತಿಯಿಂದ, ಯಡಿಯೂರಪ್ಪನವರು ಇವತ್ತು ರಾಜ-ಸ್ಥಾನದಲ್ಲಿ ಕೂತಿದ್ದಾರೆ. ಅವರ ಶ್ರಮ ಇದರಲ್ಲಿ ಎದ್ದು ಕಾಣುತ್ತಿದೆ. ತಮ್ಮ ಈ ಇಳಿವಯಸ್ಸಲ್ಲು ಕೂಡ ಅವರು ನಡೆಸುತ್ತಿರುವ ಓಡಾಟ ನೋಡಿದಾಗ ಅಚ್ಚರಿಯಾಗುತ್ತದೆ!
ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಹೈಕಮಾಂಡ್ ಗೆ ಸುತಾರಾಂ ಇಷ್ಟ ಇರಲಿಲ್ಲ. ಆದರೆ ಯಡ್ಡಿಯ ‘ಟೆರರ್’ ವ್ಯಕ್ತಿತ್ವ ಮತ್ತು ಜಾತ್ಯತೀತವಾಗಿ ಅವರ ಜನಪ್ರಿಯತೆ ಕೇಂದ್ರ ನಾಯಕರ ಕೈ ಬಾಯಿ ಕಟ್ಟುವಂತೆ ಮಾಡಿತ್ತು! ಅಮಿತ್ ಷಾ ನಂತಹ ಮಾಸ್ಟರ್ executor ಕೂಡ ಏನೂ ಮಾಡಲಾಗದೆ ಕೈ ಕೈ ಹೊಸೆದುಕೊಂಡಿದ್ದರು.
ಮುಖ್ಯಮಂತ್ರಿಯ ಪಟ್ಟವೇನೋ ಯಡಿಯೂರಪ್ಪನವರಿಗೆ ಸಿಕ್ಕಿತು. ಆದರೆ ಯಡ್ಡಿಯನ್ನು ಆ ನಂತರ ಕಟ್ಟಿ ಹಾಕಲಾರಂಭಿಸಿದರು. ಒಂದು ಸಲ ಮುಖ್ಯಮತ್ರಿ ಪಟ್ಟದ ಮೇಲೆ ಕೂತ ಮೇಲೆ ಕೇಂದ್ರಕ್ಕೆ ಯಡ್ಡಿಯನ್ನು ನಿಯಂತ್ರಿಸುವುದು ಸುಲಭ. ಯಾಕೆಂದರೆ ಯಡ್ಡಿಗೆ ಪವರ್ ರಾಜಕೀಯದ ಬಣ್ಣ,ರುಚಿ ಮತ್ತು ಶಕ್ತಿ ಅರ್ಥವಾಗಿ ಎಷ್ಟೋ ಕಾಲವಾಗಿ ಹೋಗಿದೆ. ಅಧಿಕಾರವನ್ನು ಏನಕೇನ ಪ್ರಕಾರೇಣ ಅವರು ಬಿಟ್ಟು ಕೊಡಲು ರೆಡಿ ಇಲ್ಲ. ಬೇರೆ ಯಾವುದೇ ಹೊಂದಾಣಿಕೆಗೆ, ಮಾಡಿಫಿಕೇಷನ್ ಗೆ ಅಡ್ಜಸ್ಟ್ ಆಗಬಲ್ಲರು. ಅದು ಅವರ ವೀಕ್ನೆಸ್ಸ್ ಕೂಡ! ಅದನ್ನು ಸರಿಯಾಗಿ ಬಳಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಉದ್ದೇಶಿಸಿ ಕಾರ್ಯೋನ್ಮುಖವಾಗಿತ್ತು. ಅದರಲ್ಲಿ ಸಕ್ಸಸ್ ಕೂಡಾ ಆಗಿತ್ತು. ದೆಹಲಿಗೆ ಹೋದಾಗ ಅವರನ್ನು ಭೇಟಿಯಾಗಲೊಲ್ಲದೆ ಅವಮಾನಿಸಿ ವಾಪಸ್ ಕಲಿಸಿತ್ತು. ಬರ ಪರಿಹಾರದ ಹಣ ಬಿಡುಗಡೆಗೊಳಿಸಿರಲಿಲ್ಲ. ಸಕಾಲದಲ್ಲಿ ಮಂತ್ರಿಮಂಡಲ ವಿಸ್ತರಣೆಗೆ ಅವಕಾಶ ನೀಡಿರಲಿಲ್ಲ. ಅಲ್ಲದೆ, ಮೂವರು ಡಿಸಿಎಂ ಗಳನ್ನೂ ತಂದು ಕೂರಿಸಿತ್ತು. ಅದಕ್ಕೆ ಯಡಿಯೂರಪ್ಪನವ ಸಮ್ಮತಿಯೇ ಇರಲಿಲ್ಲ. ಮತ್ತು, ಬಿ.ಎಲ್.ಸಂತೋಷ್ ರವರ ಗುಂಪಿನಿಂದ ನಳಿನ್ ಕುಮಾರ್ ಕಟೀಲರನ್ನು ರಾಜ್ಯಾಧ್ಯಕ್ಷ ಮಾಡಲಾಗಿತ್ತು. ಬಿ.ಎಲ್.ಸಂತೋಷ್ ಮತ್ತು ಯಡಿಯೂರಪ್ಪನವರ ಸಂಬಂಧ ಹೇಗಿದೆ ಅನ್ನುವುದು ಇಡೀ ವರ್ಲ್ಡ್ ಗೆ ಗೊತ್ತು! ಕಟೀಲರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲಾರಂಭಿಸಿದ್ದರು. ಪ್ರಮುಖ ವಿಷಯಗಳಲ್ಲೂ ಯಡಿಯೂರಪ್ಪನವರ ಮಾತಿಗೆ ಬೆಲೆ ಸಿಗುತ್ತಿರಲಿಲ್ಲ, ಇತ್ಯಾದಿ. ಇಂತಹ ಸಂದರ್ಭದಲ್ಲಿ ಯಡ್ಡಿ ನಿಸ್ಸಾಹಾಯಕರಂತೆ ಇಷ್ಟು ದಿನ ಇದ್ದರು. ಸರ್ಕಾರದ ಅಸ್ಥಿರತೆ, ತಮ್ಮ ಅಧಿಕಾರಾವಧಿ ಮೊಟಕುಗೊಳ್ಳಬಹುದಾದ ಸಂಭವನೀಯತೆಯಿಂದ ಕಾಲ ತಳ್ಳುತ್ತಿದ್ದರು.
ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣೆಗಳ ಫಲಿತಾಂಶಗಳು ಕೇಂದ್ರ ಬಿಜೆಪಿಗೆ ಎಚ್ಚರಿಕೆಯ ಸಂದೇಶವಾಗಿಬಿಟ್ಟ ಕಾರಣ, ಅದು ಅಮಿತ್ ಷಾನ ಹಸ್ತಕ್ಷೇಪವನ್ನು ತಕ್ಕಮಟ್ಟಿಗೆ ನಿಯಂತ್ರಿಸಲಿವೆ. ನನಗೆ ಯಾರೂ ಎದುರಿಲ್ಲ ಎಂದು ಬೀಗುತ್ತಿದ್ದ ಅಹಂಕಾರಕ್ಕೆ ಕಡಿವಾಣ ಬೀಳಲಿವೆ. ರಾಷ್ಟ್ರ ರಾಜಕಾರಣ ಬೇರೆ, ರಾಜ್ಯದ ಮತ್ತು ಸ್ಥಳೀಯ ಅವಶ್ಯಕತೆಗಳು ಎಲ್ಲ ಬೇರೆ ಬೇರೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದೆ ಈ ಎರಡು ವಿಧಾನಸಭಾ ಚುನಾವಣೆಗಳು. ಆದ್ದರಿಂದ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿಯ ನಾಯಕತ್ವ ಬದಲಾವಣೆಯನ್ನು ಮಾಡುವ ಗೋಜಿಗೆ ಅಮಿತ್ ಷಾ ನ ತಂಡ ಕೈ ಹಾಕದು. ಹಾಗೊಂದು ವೇಳೆ ಕೈ ಹಾಕಿದಲ್ಲಿ ಬರುವ ಸಲ ಮತ್ತೆ ಕಾಂಗ್ರೆಸ್ ಭದ್ರವಾಗಿ ಕರ್ನಾಟಕದಲ್ಲಿ ಚಿಗಿತುಕೊಳ್ಳುತ್ತದೆ. ಮಣ್ಣು ಹಿಡಿಯುತ್ತಿರುವ ಜೆಡಿಎಸ್ ನ ಬುಡದಿಂದ ಹೊಸ ಚಿಗುರುಗಳು ಎದ್ದು, ಯಥಾಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಆಗಿ ಎಲ್ಲರನ್ನು ಕುಣಿಸುವುದು ನಡೆದೇ ನಡೆಯುತ್ತದೆ. ಅದಕ್ಕೆ ಕೇಂದ್ರ ಬಿಜೆಪಿ ಖಂಡಿತಾ ರೆಡಿ ಇಲ್ಲ. ಅಮಿತ್ ಷಾ ಮತ್ತು ಮೋದಿ ಜೋಡಿ ಸಾಕಷ್ಟು ಜೀವನ ನೋಡಿದ್ದಾರೆ. ದೊಡ್ಡ ಯುದ್ಹ ಗೆಲ್ಲಲು ಚಿಕ್ಕ ಪುಟ್ಟ ಸಂಧಾನಕ್ಕೆ, ಮತ್ತು ಕೆಲವು ಸಲ ಕದನವನ್ನು ಸೋಲಲು ಸಹಾ ತಯಾರಿರುತ್ತಾರೆ. ಅದು ಚಕ್ರಾಧಿಪತಿಯಾಗುವವನ ಲಕ್ಷಣ!
ಹಾಗೆ, ಯಡಿಯೂರಪ್ಪನವರು ಈಗ ಸೇಫ್ ಆಗಿದ್ದಾರೆ. ಯಾರೂ ಅವರನ್ನು ಇನ್ನು ಕನಿಷ್ಠ ಒಂದು ವರ್ಷ ಅಲುಗಾಡಿಸಲಾಗುವುದಿಲ್ಲ. ಅನರ್ಹರ ಇತ್ಯರ್ಥ ಹೇಗೂ ಯಡ್ಡಿಯ ಪರವಾಗಿಯೇ ಬರಲಿದೆ. ಖುಷಿಯಿಂದ ಯಡಿಯೂರಪ್ಪನವರು ತಮ್ಮ ಚಿಕ್ಕ ಮೀಸೆಯ ಕೆಳಗೇ ದೊಡ್ಡದಾಗಿ ನಗುತ್ತಿದ್ದಾರೆ.
ಸುದರ್ಶನ್ ಬಿ.ಪ್ರವೀಣ್, ಬೆಳಾಲು