

ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಕ್ಕೆ ಡಿಬಾರ್ ಆದ ಬಿಕಾಂ ವಿದ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ.
ಬಿಕಾಂ ಓದುತ್ತಿದ್ದ 19 ವರ್ಷದ ಭವ್ಯ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ. ನನ್ನನ್ನು ಡಿಬಾರ್ ಮಾಡಿದ್ದಾರೆ, ನಾನು ಬದುಕಲ್ಲ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಕಟ್ಟಡದಿಂದ ಹಾರುವ ಮುನ್ನ ಸಹೋದರಿ ದಿವ್ಯಾಗೆ ಫೋನ್ ಮಾಡಿ ತಿಳಿಸಿದ್ದಾಳೆ.
ಕೂಡಲೇ ದಿವ್ಯಾ ತನ್ನ ತಂದೆಗೆ ತಿಳಿಸಿದ್ದಾಳೆ. ಭವ್ಯ ತಂದೆ ಕೂಡಲೇ ಪಿಜಿ ಬಳಿ ಬಂದಿದ್ದಾರೆ. ಸ್ಥಳಕ್ಕೆ ಬರುವ ವೇಳೆಗೆ ಪೊಲೀಸರಿಂದ ಕರೆ ಬಂದಿದೆ.
ಈ ಬಗ್ಗೆ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಾಲೇಜಿನಲ್ಲಿ ನಡೆದ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ.
ಇನ್ನು ತನ್ನ ಮಗಳ ಸಾವಿನ ಬಗ್ಗೆ ಮಾತನಾಡಿದ ಭವ್ಯಾ ತಾಯಿ, ನನ್ನ ಮಗಳ ಸ್ಥಿತಿ ಯಾರಿಗೂ ಬಾರದೇ ಇರಲಿ, ಇಂಥಾ ದುಸ್ಥಿತಿ ಬರಬಾರದು ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.













