

ರೈತರು ದೇಶದ ಬೆನ್ನೆಲುಬು. ಇಂತಹ ಅನ್ನದಾತರಿಗೆ ಆರ್ಥಿಕವಾಗಿ ಬೆಂಬಲ ಸಿಗದೆ ಅದೆಷ್ಟೋ ಫಲಗಳು ಕೈ ತಪ್ಪಿ ಹೋಗಿದೆ. ಹೌದು. ಒಂದು ಟ್ರ್ಯಾಕ್ಟರ್ ಬಳಸಬೇಕಾದರೂ ಯೋಚಿಸಬೇಕಾದ ಪರಿಸ್ಥಿತಿ ರೈತರದ್ದಾಗಿದೆ. ಇಂತಹ ರೈತರಿಗೆ ಸಹಾಯ ಆಗಲೆಂದೆ ಬ್ಯಾಟರಿ ಚಾಲಿತ ಟ್ರ್ಯಾಕ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.
ರೈತರು ಬಳಸುವ ಟ್ರ್ಯಾಕ್ಟರ್‌ಗಳು ಡೀಸೆಲ್ ಇಂಜಿನ್‌ಗಳ ಕಾರಣದಿಂದಾಗಿ ಹೆಚ್ಚು ಖರ್ಚಿಗೆ ಕಾರಣವಾಗಿವೆ. ಇವು ಹೆಚ್ಚು ವಾಯು ಮಾಲಿನ್ಯವನ್ನು ಮಾಡುವುದರ ಜೊತೆಗೆ ಹೆಚ್ಚಿನ ಖರ್ಚು ಎದುರಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರು ಮೂಲದ ಬುಲ್ವರ್ಕ್ ಮೊಬಿಲಿಟಿ ಹೆಸರಿನ ಸ್ಟಾರ್ಟಪ್, ಕೃಷಿ ವಲಯಕ್ಕೆ ಸ್ಮಾರ್ಟ್ ಮತ್ತು ಆಟೊಮ್ಯಾಟಿಕ್ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಅಭಿವೃದ್ಧಿಪಡಿಸುತ್ತಿದೆ.
ಈ ಸ್ಟಾರ್ಟಪ್ ಅನ್ನು ಮಹೇಶ್ ಜಿ ಶೆಟ್ಟಿ, ಹೇಮಂತ್ ಕುಮಾರ್, ವಿನಯ್ ರಘುರಾಮ್ ಮತ್ತು ಡಾ ಶ್ರೀಹರ್ಷ ಎಸ್ ಸೇರಿ 2021 ರಲ್ಲಿ ಸ್ಥಾಪಿಸಿದ್ದರು. ಬುಲ್‌ವರ್ಕ್ ಮೊಬಿಲಿಟಿ ಸಂಸ್ಥೆ ಒಟ್ಟು ಎರಡು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಬುಲ್‌ವರ್ಕ್ ವಾರಿಯರ್ ಮತ್ತು ಅನ್ಮ್ಯಾನ್ಡ್ ಗ್ರೌಂಡ್ ವೆಹಿಕಲ್ (UGV). ಬುಲ್‌ವರ್ಕ್ ವಾರಿಯರ್ ದೇಶದ ಮೊದಲ ಸಂಪೂರ್ಣ-ಎಲೆಕ್ಟ್ರಿಕ್ ಹೈ-ಕ್ಲಿಯರೆನ್ಸ್ ಬೂಮ್ ಸ್ಪ್ರೇಯರ್‌ಗಳಲ್ಲಿ ಒಂದಾಗಿದೆ. ಇದು ನಾಲ್ಕು ಸ್ವತಂತ್ರ ಡ್ರೈವ್ ಸಿಸ್ಟಮ್‌ಗಳನ್ನು ಹೊಂದಿದ್ದು ಅವು ನೇರವಾಗಿ ಚಕ್ರಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇವು 12-ಮೀಟರ್ ತನಕ ಮದ್ದನ್ನು ಸಿಂಪಡಿಸುವ ಸಾಮರ್ಥ್ಯ ಹೊಂದಿದ್ದು ಗಂಟೆಗೆ ನಾಲ್ಕರಿಂದ ಐದು ಎಕರೆಗಳಿಗೆ ಸಿಂಪಡಣೆ ಮಾಡುತ್ತವೆ.
‘ನಮ್ಮ ಯಂತ್ರಗಳನ್ನು ನಿರ್ವಹಿಸಲು ಕಡಿಮೆ ಖರ್ಚು ಸಾಕು. ಈ ವಾಹನವನ್ನು ರೈತರು ನಿತ್ಯವೂ ಬಳಸಬಹುದು. ಬುಲ್‌ವರ್ಕ್ ವಾರಿಯರ್ ದಿನಕ್ಕೆ 25 ಎಕರೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ ಈ ವಾಹನವನ್ನು ಮಾನವನೇ ಚಲಾಯಿಸಬೇಕು. ಆಟೊಮ್ಯಾಟಿಕ್ ಟ್ರಾಕ್ಟರ್ ಸದ್ಯಕ್ಕೆ ಮಾರಾಟಕ್ಕೆ ಲಭ್ಯವಿಲ್ಲ’ ಎಂದು ಮಹೇಶ್ ಮಾಹಿತಿ ನೀಡಿದ್ದಾರೆ.
ಹಾಗೆಯೇ, ಹೇಮಂತ್ ತಮ್ಮ ವಾಹನದ ಕುರಿತು ಮಾತನಾಡಿ ‘ಎಲೆಕ್ಟ್ರಿಕ್ ವಾಹನಗಳ ದೊಡ್ಡ ಪರಿಣಾಮ ಏನೆಂದರೆ ಅವುಗಳು ಬಹಳ ಅಗ್ಗ. ಇವುಗಳನ್ನು ಬಳಸುವುದರಿಂದ ಪ್ರತಿ ಗಂಟೆಗೆ ಕೇವಲ 50 ರೂ. ಖರ್ಚಲ್ಲಿ ಕೃಷಿ ಕೆಲಸ ಮಾಡಬಹುದು. ಇದನ್ನು ಗಂಟೆಗೆ ಸುಮಾರು 3-4 ಲೀಟರ್ ಡೀಸೆಲ್ ಸುಡುವ ಟ್ರಾಕ್ಟರ್ ಜೊತೆಗೆ ಕಂಪೇರ್ ಮಾಡಿ. ರೈತರು ಡೀಸೆಲ್ ಗೆ ಪ್ರತಿ ಗಂಟೆಗೆ ಸುಮಾರು 300-400 ರೂ. ಕರ್ಚು ಮಾಡದ ಹಾಗೆ ಆಗುತ್ತೆ. ನಮ್ಮ ಯಂತ್ರಗಳ ಮೂಲಕ ನಾವು ಪ್ರತಿ ಗಂಟೆಗೆ ಈ ವೆಚ್ಚವನ್ನು 50 ರೂ.ಗೆ ಇಳಿಸಬಹುದು’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕೃಷಿ ಉಪಕರಣಗಳಲ್ಲೂ ಅಭಿವೃದ್ಧಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಷಯವೇ ಸರಿ.













