


OPS: ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರುವ ಮೊದಲು, ಕಾಂಗ್ರೆಸ್ ಏನಾದರೂ ಗೆದ್ದು ಸರ್ಕಾರ ರಚನೆ ಮಾಡಿದರೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ(OPS) ಯೋಜನೆಯನ್ನು ಪುನಃ ಜಾರಿಗೆ ತರುವ ಭರವಸೆ ನೀಡಿತ್ತು. ಇದೀಗ ಹಳೆ ಪಿಂಚಣಿ ಯೋಜನೆಯ ಜಾರಿ ಕುರಿತು ಸರ್ಕಾರವು ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ರಚನೆಯಾಗಿ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತಾ ಬಂದರು ಈ ಕುರಿತ ಯಾವುದೇ ಆದೇಶ ಹೊರಡಿಸುವುದು, ಕ್ರಮ ಕೈಗೊಳ್ಳುವುದು ಆಗಿರಲಿಲ್ಲ. ಆದರೀಗ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ನೇಮಿಸಿದ್ದ ಸಮಿತಿ ಈಗ ಅಂತಿಮ ಹಂತಕ್ಕೆ ತಲುಪಿದೆ.
ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರಾಜ್ಯ ಸರ್ಕಾರದ ಎನ್‌ಪಿಎಸ್ ಅಧ್ಯಯನ ಸಮಿತಿಯ ಅಧ್ಯಕ್ಷೆ ಉಮಾ ಮಹದೇವನ್ ಅವರು ಸರ್ಕಾರಿ ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆ. ಹಳೆ ಪಿಂಚಣಿ ಯೋಜನೆ (OPS) ಜಾರಿ ಸಂಬಂಧ ರಚಿಸಲಾದ ಸಮಿತಿಯು ತನ್ನ ಅಂತಿಮ ವರದಿಯನ್ನು ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು, ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವಂತೆ ಪ್ರಬಲವಾದ ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದೆ. ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಐಎಎಸ್ ಅಧಿಕಾರಿಗಳ ಸಮಿತಿಯು ಒಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.












