

ಮಂಡ್ಯ: ಶಾಂತಿ ಸುವ್ಯವಸ್ಥೆಗೆ ಹಾಗೂ ಕಾನೂನು ವ್ಯವಸ್ಥೆ ಕಾಪಾಡುವ ಹಿನ್ನಲೆ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಮಂಡ್ಯ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ. ಮಂಡ್ಯ ಎಸ್ಪಿ ಶೋಭಾರಾಣಿ ಅವರು ಈ ಕುರಿತು ಡಿಸಿಗೆ ಪತ್ರ ಬರೆದಿದ್ದರು. ಎಸ್ಪಿ ಅವರ ಪತ್ರದ ಹಿನ್ನೆಲೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ಇಂದು (ಜ.28) ಮಂಡ್ಯ ಜಿಲ್ಲೆಯ ಕೆರಗೋಡು ಭಾಗದಲ್ಲಿ ಪ್ರಮೋದ್ ಮುತಾಲಿಕ್ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸಿದ್ದರು. ಹನುಮಧ್ವಜ ಇಳಿಸಿದ ಘಟನೆ ನಡೆದು ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರಾಳ ದಿನವನ್ನಾಗಿ ಇಂದು ಈ ಗ್ರಾಮದಲ್ಲಿ ಆಚರಣೆ ಮಾಡಲು ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು. ಹಿಂದೂ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಲಾಗಿತ್ತು.
ಆದರೆ ಪ್ರಮೋದ್ ಮುತಾಲಿಕ್ ಆಗಮನ, ಭಾಷಣ, ಪ್ರಚೋದನೆ ಹೇಳಿಕೆಯಿಂದ ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಇರುವುದರಿಂದ ಮಂಡ್ಯ ಜಿಲ್ಲೆ ಪ್ರವೇಶ ಮಾಡದಂತೆ ಬಿಎನ್‌ಎಸ್ 2023 ಸೆಕ್ಷನ್ 163 ರ ಅಡಿ ನಿರ್ಬಂಧ ವಿಧಿಸಲಾಗಿದೆ.













