Home News ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ–ಮೂಡಪ್ಪ ಸೇವೆಗೆ ಭರದ ಸಿದ್ಧತೆ ; 3 ಲಕ್ಷ...

ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ–ಮೂಡಪ್ಪ ಸೇವೆಗೆ ಭರದ ಸಿದ್ಧತೆ ; 3 ಲಕ್ಷ ಭಕ್ತರ ಆಗಮನ ನಿರೀಕ್ಷೆ

Hindu neighbor gifts plot of land

Hindu neighbour gifts land to Muslim journalist

ಕೊಕ್ಕಡ: ಬಯಲು ಆಲಯದ ಗಣಪನೆಂದೇ ಪ್ರಸಿದ್ಧಿ ಪಡೆದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆಗೆ ಭರದ ಸಿದ್ಧತೆ ನಡೆಯುತ್ತಿದೆ. ಕಳೆದ ಒಂದು ದಶಕದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ಬಾರಿ ಗಂಟೆ ಗಣಪನೆಂದೇ ಖ್ಯಾತಿ ಪಡೆದ ಸೌತಡ್ಕ ಕ್ಷೇತ್ರಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ.

ದೇವಾಲಯದ ಆಡಳಿತ ಸಮಿತಿ ಸಕಲ ವ್ಯವಸ್ಥೆಗಳೊಂದಿಗೆ ಪೂರ್ವಸಿದ್ಧತೆ ನಡೆಸುತ್ತಿದ್ದು, ಭಕ್ತಾದಿಗಳಿಗೆ ವಿತರಿಸಲಿರುವ ಪ್ರಸಾದದ ತಯಾರಿ ಮಂಗಳವಾರದಿಂದಲೇ ಆರಂಭಗೊಂಡಿದೆ. ಜ.22ರಂದು ಗುರುವಾರ ಬೆಳಗ್ಗೆ 8 ಗಂಟೆಯಿಂದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ ಆರಂಭಗೊಳ್ಳಲಿದೆ.

15 ಸಾವಿರ ಮೋದಕ, 2 ಸಾವಿರ ಪ್ಯಾಕ್ ಅಪ್ಪಕಜ್ಜಾಯ ತಯಾರಿ:
ಮೂಡಪ್ಪ ಸೇವೆಯ ವಿಶೇಷ ಪ್ರಸಾದವಾಗಿ ಮೋದಕವನ್ನು ತಯಾರಿಸಲಾಗುತ್ತಿದ್ದು, 1.5 ಕ್ವಿಂಟಾಲ್ ಗೋಧಿ ಹಿಟ್ಟು, 600 ತೆಂಗಿನಕಾಯಿ, 26 ಕೆಜಿ ಹರಳು ಹುಡಿ, ಒಂದು ಕ್ವಿಂಟಾಲ್ ಬೆಲ್ಲ ಹಾಗೂ 60 ಲೀಟರ್ ನಂದಿನಿ ತುಪ್ಪವನ್ನು ಉಪಯೋಗಿಸಿ ಸುಮಾರು 15 ಸಾವಿರ ಮೋದಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದೇ ವೇಳೆ 2 ಕ್ವಿಂಟಾಲ್ ಗೋಧಿ ಹಿಟ್ಟು, 400 ತೆಂಗಿನಕಾಯಿ, 2 ಕ್ವಿಂಟಾಲ್ ಬೆಲ್ಲ, 50 ಕೆಜಿ ಸಕ್ಕರೆ ಹಾಗೂ 100 ಲೀಟರ್ ನಂದಿನಿ ತುಪ್ಪ ಬಳಸಿ 2 ಸಾವಿರ ಪ್ಯಾಕ್ ಅಪ್ಪಕಜ್ಜಾಯವನ್ನು ತಯಾರಿಸಲಾಗುತ್ತಿದೆ.

ಶಿಶಿಲ ಸೀಮೆಯ ಚಿತ್ಪಾವನ ಬಂಧುಗಳು ಹಾಗೂ ದೇವಸ್ಥಾನದ ಪ್ರಸಾದ ತಯಾರಕರನ್ನು ಒಳಗೊಂಡ ಸುಮಾರು 100ಕ್ಕೂ ಅಧಿಕ ಮಂದಿಯ ತಂಡ, ಶ್ರೀ ಕ್ಷೇತ್ರದ ಪ್ರಧಾನ ಪ್ರಸಾದ ತಯಾರಿಕಾರರಾದ ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆಗೆ ಎರಡು ದಿನಗಳ ಮುಂಚಿತವಾಗಿಯೇ ಬರದಿಂದ ಪ್ರಸಾದ ತಯಾರಿ ಕಾರ್ಯದಲ್ಲಿ ತೊಡಗಿದೆ.

ಲಾಡು, ಜಿಲೇಬಿಗೂ ಭರದ ತಯಾರಿ:
ಅಶೋಕ್ ಕುಮಾರ್ ಮತ್ತು ಹರೀಶ್ ರಾವ್ ಅವರ ನೇತೃತ್ವದಲ್ಲಿ ಸುಮಾರು 8 ಮಂದಿಯ ತಂಡ ಮಧ್ಯಾಹ್ನದ ಅನ್ನಸಂತರ್ಪಣೆಗೆ 6 ಸಾವಿರ ಲಾಡುಗಳನ್ನು ಹಾಗೂ ರಾತ್ರಿಯ ಊಟಕ್ಕೆ 8 ಸಾವಿರ ಜಿಲೇಬಿಗಳನ್ನು ತಯಾರಿಸುತ್ತಿದೆ. ಪ್ರತಿದಿನ ನಡೆಯುವ ಅವಲಕ್ಕಿ ಪಂಚಕಜ್ಜಾಯ ಸೇವೆಯೂ ಎಂದಿನಂತೆ ತಯಾರಾಗುತ್ತಿದ್ದು, ಎಲ್ಲಾ ಪ್ರಸಾದಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿದ ಬಳಿಕ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.

ಸೌತಡ್ಕ ಶ್ರೀ ಮಹಾಗಣಪತಿ ದೇವಳವು ಎ ಗ್ರೇಡ್ ದೇವಳವಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ದೈವ ಸಂಕಲ್ಪ ಯೋಜನೆಗೆ ಸೇರ್ಪಡೆಗೊಂಡ ವಿರಳ ದೇವಸ್ಥಾನಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿರುವುದು ದೇವಾಲಯದ ಮಹತ್ವಕ್ಕೆ ಸಾಕ್ಷಿಯಾಗಿದೆ.

ಮೂಡಪ್ಪ ಸೇವೆಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.