

Yakshagana: ಕಲೆಗಳಲ್ಲಿ ಗಂಡು ಕಲೆ ಎಂದೇ ಪ್ರಸಿದ್ಧವಾದದ್ದು ಕರಾವಳಿಯ ಯಕ್ಷಗಾನ. ಯಕ್ಷಗಾನ ಕರ್ನಾಟಕ ದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳಳ್ಳಂತೂ ಯಕ್ಷಗಾನವು ಮನೆ ಮಾತಾಗಿದೆ. ಈ ಯಕ್ಷಗಾನವು ಸಾಮಾನ್ಯವಾಗಿ ರಾತ್ರಿ ವೇಳೆಯೇ ನಡೆಯುವಂತದ್ದು. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿದ ಜನರು ಹಾಯಾಗಿ ಕುಳಿತು ಆಟ ನೋಡುವುದೇ ಒಂದು ನೆಮ್ಮದಿ. ಆದರೆ ಈ ನೆಮ್ಮದಿಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.
ಹೌದು, ಕರ್ನಾಟಕದ ಪ್ರಸಿದ್ಧ ಆರಾಧನಾ ಕಲೆಗಳಲ್ಲಿ ಒಂದಾದ ಯಕ್ಷಗಾನಕ್ಕೆ ರೂಲ್ಸ್ ಬ್ರೇಕ್ ಕಾಟ ಶುರುವಾಗಿದೆ. ಮೈಕ್ ಗೆ ಅನುಮತಿ ಪಡೆದಿಲ್ಲ ಎಂದು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ ವಿಚಿತ್ರ ಪ್ರಕರಣ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲುವಿನಲ್ಲಿ ನಡೆದಿದೆ.
ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಪ್ರದರ್ಶನದಲ್ಲಿ ಪೊಲೀಸರು ಈ ರೂಲ್ಸ್ ಜಾರಿಗೆ ಮುಂದಾಗಿದ್ದಾರೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪೊಲೀಸರು ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಅಜೆಕಾರು ಉಪನಿರೀಕ್ಷಕ ಶುಭಕರ್ ಅವರಿಂದ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಅಲ್ಲದೆ, ಆಯೋಜಕರನ್ನು ಅರೆಸ್ಟ್ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ.
ಈ ವೇಳೆ ಸಿಟ್ಟಾದ ಗ್ರಾಮಸ್ಥರು, ಇಡೀ ಗ್ರಾಮದ ಜನರನ್ನು ಅರೆಸ್ಟ್ ಮಾಡಿ ಎಂದು ಹೈಡ್ರಾಮಾ ನಡೆಸಿದ್ದಾರೆ. ಕಾರ್ಯಕ್ರಮ ನಿಲ್ಲಿಸದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷನನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ದೂರು ದಾಖಲಾದ ಬಗ್ಗೆ ಎಫ್‌ಐಆರ್ ತೋರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಿಂದ ತೆರಳಿದ್ದಾರೆ.
ಅಂದಹಾಗೆ ಜನವರಿ 10 ರಂದು ಪರವಾನಿಗೆಗೆ ಪಿಡಿಒ ಬಳಿ ಆಯೋಜಕರು ತೆರಳಿದ್ದರು. ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ. ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರು. ಈ ವೇಳೆ, ಪಂಚಾಯತ್ ಅನುಮತಿ ತರುವಂತೆ ಪೊಲೀಸರ ತಾಕಿತು ಮಾಡಿದ್ದಾರೆ. ಸಧ್ಯ ಸಂಬಧಪಟ್ಟಂತೆ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮಿ ಸೌಂಡ್ಸ್ ನ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್ ಹಾಕಲಾಗಿದೆ.













