

Vastu Tips: ಸಣ್ಣ ವಿಚಾರವಾಗಲಿ, ದೊಡ್ಡ ವಿಚಾರವಾಗಲಿ ಜೀವನದಲ್ಲಿ ಖುಷಿಯಾಗಿರಲು ಬದಲಾವಣೆ ಅಗತ್ಯ. ಮುಖ್ಯವಾಗಿ ಮನೆಯಲ್ಲಿರುವ ವಸ್ತುಗಳು ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನೂ ವಾಸ್ತು ಶಾಸ್ತ್ರದಲ್ಲಿ ( Vastu Tips) ವಿವರಿಸಲಾಗಿದೆ. ಕನ್ನಡಿ, ಟಿವಿ, ಫ್ರಿಡ್ಜ್, ಬೀರು, ಬೆಡ್ ಹೀಗೆ ಪ್ರತಿಯೊಂದು ವಸ್ತುವಿನ ಸ್ಥಾನ ದಿಕ್ಕು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಾಸ್ತು ತಜ್ಞರು ವಿವರಿಸುತ್ತಾರೆ .
ಯಾಕೆಂದರೆ ಅನೇಕ ಬಾರಿ ಜನರು ತಿಳಿದು ಅಥವಾ ತಿಳಿಯದೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅಂತೆಯೇ ನಾವು ಸಮಯ ನೋಡಲೆಂದು ನಮಗೆ ಅನುಕೂಲ ಆಗುವಂತೆ ಅಥವಾ ಅಲಂಕಾರಕ್ಕಾಗಿ ಸಿಕ್ಕ ಸಿಕ್ಕ ಕಡೆ ಗೋಡೆಯಲ್ಲಿ ಗಡಿಯಾರ ನೇತು ಹಾಕುತ್ತೇವೆ, ಇದು ತಪ್ಪು. ಇದರಿಂದ ಹಲವಾರು ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಮುಖ್ಯವಾಗಿ ವಾಸ್ತು ಪ್ರಕಾರ ಗೋಡೆ ಗಡಿಯಾರವನ್ನು ಈಶಾನ್ಯ ದಿಕ್ಕಿನಲ್ಲಿ (Northeast) ಇಡುವುದು ಉತ್ತಮ. ಯಾವುದೇ ಕೋಣೆಯಲ್ಲಿ ಗಡಿಯಾರವನ್ನು ಕೋಣೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಗಡಿಯಾರವು ಈಶಾನ್ಯ ದಿಕ್ಕಿನಲ್ಲಿದ್ದರೆ, ಮನೆಯ ಮಾಲೀಕರಿಗೆ ಗೌರವ, ಖ್ಯಾತಿ ಮತ್ತು ಸಮೃದ್ಧಿ ಸಿಗುತ್ತದೆ ಎಂದು ಹೇಳಲಾಗಿದೆ.
ಈಶಾನ್ಯದಲ್ಲಿ ಗಡಿಯಾರ ಇಡಲು ಸಾಧ್ಯವಾಗದಿದ್ದರೆ ಉತ್ತರಕ್ಕೆ ಎರಡನೇ ಆದ್ಯತೆ ನೀಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಗಡಿಯಾರವು ಉತ್ತರ ದಿಕ್ಕಿನಲ್ಲಿದ್ದರೆ ವ್ಯಾಪಾರದಲ್ಲಿ ನಷ್ಟ ಮತ್ತು ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಅದೂ ಸಾಧ್ಯವಾಗದಿದ್ದರೆ ಗಡಿಯಾರ ಪೂರ್ವ ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ. ಗಡಿಯಾರವು ಪೂರ್ವಕ್ಕೆ ಮುಖ ಮಾಡಿದರೆ ಕುಟುಂಬ ಸದಸ್ಯರು ಸಂತೋಷವಾಗಿರುತ್ತಾರೆ. ಇವುಗಳನ್ನು ಹೊರತುಪಡಿಸಿ, ಗಡಿಯಾರವನ್ನು ಬೇರೆ ಯಾವುದೇ ದಿಕ್ಕಿನಲ್ಲಿ ಇರಿಸದಂತೆ ನೋಡಿಕೊಳ್ಳಿ. ಹೀಗೆ ಮಾಡಿದರೆ ಮನೆಯಲ್ಲಿರುವವರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ವಾಸ್ತು ಪ್ರಕಾರ ಯಾವುದೇ ಸಂದರ್ಭದಲ್ಲೂ ಮನೆಯ ನೈಋತ್ಯ ಮತ್ತು ದಕ್ಷಿಣಾಭಿಮುಖ ಗೋಡೆಗಳ ಮೇಲೆ ಗಡಿಯಾರಗಳನ್ನು ಇಡಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದಲ್ಲದೆ, ಗಡಿಯಾರವನ್ನು ಮನೆಯ ಬಾಗಿಲಿನ ಚೌಕಟ್ಟಿನಲ್ಲಿ ತಪ್ಪಾಗಿ ಇರಿಸಬಾರದು. ಬಾಗಿಲಿನ ಚೌಕಟ್ಟಿನ ಮೇಲೆ ಕೈಗಡಿಯಾರಗಳನ್ನು ಹಾಕಿದರೆ, ಮನೆಯಲ್ಲಿರುವವರಿಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಇದಲ್ಲದೆ, ಅವರು ಮನೆಯಲ್ಲಿ ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ.
ಮುಖ್ಯವಾಗಿ ಮನೆಯಲ್ಲಿ ಗಡಿಯಾರ ನೇತುಹಾಕಿದರೆ ಅಷ್ಟೇ ಸಾಲದು, ಅದು ಸದಾ ಕಾಲವೂ ಓಡುವಂತೆ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಯಾವುದೇ ಸಂದರ್ಭದಲ್ಲಿ ಓಡದ ಗಡಿಯಾರವನ್ನು ಮನೆಯಲ್ಲಿ ಇಡಬಾರದು ಎಂದು ಕೂಡ ತಿಳಿಸಲಾಗಿದೆ.













