

ತುಮಕೂರು, ಜನವರಿ 30: ಮಗುವಿಗೆ ಜನ್ಮ ನೀಡಿದ ತಾಯಿಯೋರ್ವಳು ಮರು ದಿನವೇ ತನ್ನ ಸಹೋದರಿ ಮನೆಯಲ್ಲಿ ಮಗುವನ್ನು ಬಿಟ್ಟು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾಳೆ. ಈ ನಡುವೆ ಮಗುವಿಗೆ ಸಮಸ್ಯೆ ಕಾಣಿಸಿಕೊಂಡು ಸಾವಿಗೀಡಾಗಿದೆ. ಈ ಘಟನೆ ತುಮಕೂರಿನಲ್ಲಿ ನಡೆದಿದೆ.
ಮಕ್ಕಳಾ ರಕ್ಷಣಾ ಘಟಕ ಪೊಲೀಸರಿಗೆ ದೂರನ್ನು ನೀಡಿದ್ದುಮ ದೂರಿನ ಹಿನ್ನೆಲೆ ತುಮಕೂರು ಮಹಿಳಾ ಠಾಣೆಯಲ್ಲಿ ಮೃತ ನವಶಿಶುವಿನ ತಾಯಿ, ತಂದೆ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜನವರಿ 28 ರಂದು ತುಮಕೂರಿನ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 40 ವರ್ಷ ದಾಟಿದ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಈ ನಡುವೆ ಮಹಿಳೆಯೇ ಗರ್ಭ ಧರಿಸಿದ್ದು, ಮಗಳ ನಿಶ್ಚಿತಾರ್ಥದ ಹಿಂದಿನ ದಿನ ಹೆಣ್ಣು ಮಗುವಿನ ಜನ್ಮ ನೀಡಿದ್ದಳು. ಮೊದಲ ಮಗಳ ನಿಶ್ಚಿತಾರ್ಥ ಹಾಗೂ ಕಾರ್ಯಕ್ರಮಗಳ ಸಿದ್ಧತೆ ನಡೆಯುತ್ತಿತ್ತು. ಮಗು ಜನಿಸಿದ ಮರುದಿನವೇ ಮೊದಲ ಮಗಳ ನಿಶ್ಚಿತಾರ್ಥ ನಿಗದಿಯಾಗಿದ್ದರಿಂದ ನವಜಾತ ಶಿಶುವನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ತಾಯಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ.
ಚಿಕ್ಕಮ್ಮನ ಜೊತೆ ಮಗು ಇದ್ದು, ಆಗ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಸಂಬಂಧಿಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಗು ಸಾವಿಗೀಡಾಗಿದೆ.
ಮಗು ಸಾವಿನ ಕುರಿತು ಅನುಮಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ಆಸ್ಪತ್ರೆ ಸಿಬ್ಬಂದಿ ಮಾಹಿತಿಯನ್ನು ನೀಡಿದ್ದರು. ಈ ಕುರಿತು ತುಮಕೂರು ಮಹಿಳಾ ಠಾಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರನ್ನು ನೀಡಿದೆ. ದೂರಿನ ಆಧಾರದನ್ವಯ ಪೊಲೀಸರು ಜುವಿನೈಲ್ ಜಸ್ಟೀಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ತನಿಖೆ ವೇಳೆ ನವಜಾತ ಶಿಶುವನ್ನು ನಿರ್ಲಕ್ಷ್ಯ ಮಾಡಿ ಬಿಟ್ಟು ಹೋಗಿದ್ದ ತಾಯಿಯ ಕೃತ್ಯ ಬೆಳಕಿಗೆ ಬಂದಿದೆ. ಮಗುವಿನ ಆರೈಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಇರುವುದು ಹಾಗೂ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.













