

Rishab Shetty: ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ (Rishab Shetty) ಇದೀಗ ಹೊಸ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕಾಂತಾರ (kantara) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಟ ರಿಷಬ್ ಶೆಟ್ಟಿ ಇದೀಗ ತಮ್ಮ ಹುಟ್ಟೂರಿನ ಹೆಸರಲ್ಲಿ ಹೊಸ ಸಂಸ್ಥೆ ಕಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ಹುಟ್ಟೂರು ಕೆರಾಡಿ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಯೋಜಿಸಿದ್ದಾರೆ. ಅದಕ್ಕಾಗಿ ಹುಟ್ಟೂರಿನ ಹೆಸರಿನಲ್ಲಿಯೇ ಹೊಸ ಸಂಸ್ಥೆಯೊಂದನ್ನು ಕಟ್ಟಿದ್ದಾರೆ. ಕೆರಾಡಿ ಹೆಸರಿನಲ್ಲಿ ಪ್ರಚಾರ ಸಂಸ್ಥೆ ಆರಂಭಿಸಿದ್ದಾರೆ. ಈ ಬಗ್ಗೆ ‘ಹೊಸ ಹೆಜ್ಜೆ, ಹೊಸ ಕನಸು’ ಎಂದು ಕ್ಯಾಪ್ಶನ್ ಕೊಟ್ಟು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ. ಕೆರಾಡಿ.. ನಾನು ಹುಟ್ಟಿ ಬೆಳೆದ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ” ಎಂದು ರಿಷಬ್ ಬರೆದು ಪೋಸ್ಟ್ ಮಾಡಿದ್ದಾರೆ.
https://www.instagram.com/p/CsprxOYvXJC/?igshid=NTc4MTIwNjQ2YQ==
ಇನ್ನು ರಿಷಬ್ ಶೆಟ್ಟಿ ಬಗ್ಗೆ ಹೇಳಬೇಕಿಲ್ಲ. ಶೆಟ್ರ ನಟನೆಯ ಕಾಂತಾರ ಸಿನಿಮಾ ಇಡೀ ದೇಶವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ರೇಂಜ್ ಬದಲಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಟ ರಿಷಬ್ ಶೆಟ್ಟಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. ಸಿನಿಮಾಗಳು ಅರಸಿ ಬರುತ್ತಿವೆ. ಆದರೆ, ಸದ್ಯ ನಟ ಕಾಂತಾರ 2 (kantara-2) ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.













