ದೇಶದಲ್ಲಿ ಕೊರೋನಾ ಬ್ಲಾಸ್ಟ್ !!| ದೈನಂದಿನ ಪ್ರಕರಣಗಳಲ್ಲಿ 39% ಜಿಗಿತ, ಮಾಸ್ಕ್ ಕಡ್ಡಾಯ ಸಾಧ್ಯತೆ
ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಮೂರು ತಿಂಗಳ ಬಳಿಕ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 7,240 ಮಂದಿಗೆ ಸೋಂಕು ತಗುಲಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 34,498ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ, ದೈನಂದಿನ ಪ್ರಕರಣಗಳಲ್ಲಿ 39% ಜಿಗಿತ ಕಂಡಿದ್ದು, 111 ದಿನಗಳ ಬಳಿಕ ಪಾಸಿಟಿವಿಟಿ ಪ್ರಮಾಣ 2%ಗೂ ಅಧಿಕವಾಗಿದೆ. ಇದು ನಾಲ್ಕನೇ ಅಲೆಯ ಭೀತಿಗೆ ಕಾರಣವಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದಲೇ ಅತಿಹೆಚ್ಚು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 2,701 ಪ್ರಕರಣಗಳ ವರದಿಯಾಗಿದ್ದು, ಮುಂಬೈನಲ್ಲೇ 1,881 ಸೋಂಕಿತರು ಪತ್ತೆಯಾಗಿದ್ದಾರೆ. ಇದಲ್ಲದೇ ಮಹಾರಾಷ್ಟ್ರದಲ್ಲಿ B.A.5 ಉಪ ತಳಿಯ ಒಂದು ಪ್ರಕರಣ ಪತ್ತೆಯಾಗಿದೆ.
ಮಹಾರಾಷ್ಟ್ರ ಹೊರತುಪಡಿಸಿದರೆ ದೆಹಲಿ ಮತ್ತು ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೆಹಲಿಯಲ್ಲಿ ನಿನ್ನೆ 564 ಕೇಸ್ಗಳು ಪತ್ತೆಯಾಗಿದ್ದು, 22 ದಿನಗಳ ಬಳಿಕ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಸದ್ಯ ದೆಹಲಿಯಲ್ಲಿ ಪಾಸಿಟಿವಿಟಿ ಪ್ರಮಾಣ 2.64% ರಷ್ಟಿದೆ. ಇನ್ನು ಕೇರಳದಲ್ಲಿ 2271 ಪ್ರಕರಣಗಳ ವರದಿಯಾಗಿದೆ.
ತಮಿಳುನಾಡು, ಕರ್ನಾಟಕದಲ್ಲಿ ನಿತ್ಯ 500ರ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿದ್ದು, ಕ್ರಮೇಣ 1021, 2,623 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಹೀಗೆ ಹೆಚ್ಚುತ್ತಿರುವ ಸೋಂಕಿನ ಸಂಖ್ಯೆ ಹಿನ್ನಲೆ ಈಗಾಗಲೇ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸೋಂಕು ಪೀಡಿತ ರಾಜ್ಯಗಳಿಗೆ ನಿಯಂತ್ರಣಕ್ಕೆ ಸೂಚಿಸಿ ಪತ್ರ ಬರೆಯಲಾಗಿದೆ. ಅಲ್ಲದೇ ಎಲ್ಲಾ ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದು, ಹಲವು ರಾಜ್ಯಗಳು ಮಾಸ್ಕ್ ಕಡ್ಡಾಯ ಬಳಕೆ ನಿಯಮ ವಾಪಸ್ ತರಲು ಚಿಂತಿಸುತ್ತಿವೆ.