Malashree: ಶಿರಡಿ ಸಾಯಿಬಾಬಾಗೆ ದುಬಾರಿ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ!
Malashree: ಕನ್ನಡ ಚಿತ್ರರಂಗದ “ಕನಸಿನ ರಾಣಿ” ಖ್ಯಾತಿಯ ನಟಿ ಮಾಲಾಶ್ರೀ ಇದೀಗ ಸುದ್ದಿಯಲ್ಲಿದ್ದಾರೆ. ಶಿರಡಿ ಶ್ರೀಸಾಯಿಬಾಬಾ ಅವರ ಭಕ್ತೆಯಾಗಿರುವ ಮಾಲಾಶ್ರೀ ಅವರು ದುಬಾರಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದ್ದಾರೆ.
ತಮ್ಮ ಪುತ್ರಿ ಆರಾಧನಾ ಅವರೊಂದಿಗೆ ಶಿರಡಿಗೆ ತೆರಳಿ ಚಿನ್ನದ ಕಿರೀಟವನ್ನು ಹಸ್ತಾಂತರಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಲಾಶ್ರೀ ಅವರು 1989ರಲ್ಲಿ ಬಿಡುಗಡೆಯಾದ “ನಂಜುಂಡಿ ಕಲ್ಯಾಣ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಮೊದಲ ಸಿನಿಮಾದಲ್ಲೇ ಅವರು ಜನಪ್ರಿಯತೆ ಗಳಿಸಿದ್ದರು. ಇದೇ ಸಮಯದಲ್ಲಿ ಮಾಲಾಶ್ರೀ ಅವರು ಮೊದಲ ಬಾರಿಗೆ ಶಿರಡಿಗೆ ಮಾಲಾಶ್ರೀ ಭೇಟಿ ನೀಡಿದ್ದನ್ನು ನೆನೆದಿದ್ದಾರೆ.
‘ಇವತ್ತು ನಾನು ಚಿತ್ರರಂಗದಲ್ಲಿ ಮಾಡಿರುವ ಸಾಧನೆ, ನನಗೆ ಸಿಕ್ಕಿರುವ ಜನಪ್ರಿಯತೆ ಎಲ್ಲವೂ ಬಾಬಾ ಅವರ ಆಶೀರ್ವಾದದಿಂದಲೇ ಸಿಕ್ಕಿದೆ’ ಎಂದಿದ್ದಾರೆ. ಈ ವಿಡಿಯೋವನ್ನು ಶಿರಡಿ ಮಂದಿರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.ಕುಟುಂಬದೊಂದಿಗೆ ಶಿರಡಿಗೆ ತೆರಳಿರುವ ಮಾಲಾಶ್ರೀ ಅವರು ಸಾಯಿಬಾಬಾ ಅವರ ದರ್ಶನ ಪಡೆದು ಪುನೀತರಾಗಿದ್ದಾರೆ. ‘ನಾನು ಮೊದಲಿನಿಂದಲೂ ಬಾಬಾಗೆ ಏನಾದ್ರೂ ಕೊಡಬೇಕು ಅಂದುಕೊಂಡಿದ್ದೆ. ಬಾಬಾ ನಿಜಕ್ಕೂ ನನಗೆ ತೀರಾ ಹತ್ತಿರದವರಿದ್ದಂತೆ. ಬಾಬಾ ನಾನು ಕೇಳಿದ ಎಲ್ಲವನ್ನೂ ಕರುಣಿಸಿದ್ದಾರೆ. ಹೀಗಾಗಿ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆಯನ್ನು ಅವರಿಗೆ ನೀಡಲು ಬಯಸಿದ್ದೇನೆ. ಇದರಿಂದ ಬಾಬಾ ಕೂಡ ಖುಷಿಪಡುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಮಾಲಾಶ್ರೀ ಹೇಳಿದ್ದಾರೆ.
ಮಾಲಾಶ್ರೀ ಅವರು ತುಂಬಾ ವರ್ಷಗಳಿಂದಲೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ಇಲ್ಲಿಗೆ ಬಂದು ಹೋದಾಗಲೆಲ್ಲ ನಮಗೆ ಒಳ್ಳೆಯದೇ ಆಗಿದೆ ಎಂದಿದ್ದಾರೆ. ಮಾಲಾಶ್ರೀ ಅವರ ಪತಿ, ನಿರ್ಮಾಪಕ ರಾಮು ಅವರು ಕೂಡ ಸಾಯಿಬಾಬಾ ಭಕ್ತರಾಗಿದ್ದರು. ಹೀಗಾಗಿ ಕುಟುಂಬ ಸಮೇತರಾಗಿ ಅವರು ಶಿರಡಿಗೆ ಹೋಗಿ ಬಾಬಾ ದರ್ಶನ ಮಾಡುತ್ತಾರೆ. ಇನ್ನು ಬಾಬಾಗೆ ಮಂದಿರಕ್ಕೆ ಅರ್ಪಿಸಿರುವ ಚಿನ್ನದ ಕಿರೀಟದ ಬೆಲೆ ಅಧಿಕೃತವಾಗಿ ರಿವೀಲ್ ಮಾಡಿಲ್ಲ, ಆದರೆ ಇದರ ಮೌಲ್ಯ ಬಾರಿ ದುಬಾರಿ ಎಂದು ಹೇಳಲಾಗುತ್ತಿದೆ.
Comments are closed.