Dasara: ಮೊದಲ ಬಾರಿ ‘ದಸರಾ ಉದ್ಘಾಟನೆ’ ಮಾಡಿದ್ದು ಯಾರು ಗೊತ್ತಾ?

Dasara: ಕನ್ನಡಿಗರ ನಾಡಹಬ್ಬ ಮೈಸೂರು ದಸರಾ ಆಚರಣೆಗೆ ಎಷ್ಟೋ ಶತಮಾನಗಳ ಇತಿಹಾಸವಿದೆ. ಹೌದು, 14ನೇ ಶತಮಾನದಿಂದಲೂ ಮೈಸೂರಿನಲ್ಲಿ ದಸರಾ (Dasara)ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಈ ಬಾರಿಯೂ ಸಹ ದಸರಾ ಅದ್ಧೂರಿಯಾಗಿ ನಡೆಯಲಿದೆ. ಆದರೆ ಈ ಬಾರಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಸರ್ಕಾರವು ಆಹ್ವಾನ ನೀಡಿರುವುದಕ್ಕೆ ಕೆಲವರ ವಿರೋಧ ವ್ಯಕ್ತವಾಗಿದೆ.

ಆದ್ರೆ ಈ ‘ದಸರಾ ಉದ್ಘಾಟನೆ’ ಎಂಬುದಕ್ಕೆ ಪ್ರಾಮುಖ್ಯತೆ ದೊರೆತಿದ್ದು ಡಾ ರಾಜ್ಕುಮಾರ್ ಅವರಿಂದ. ಹೌದು, ಯಾಕೆಂದರೆ ದಸರಾ ವನ್ನು ಮೊದಲ ಬಾರಿ ‘ಉದ್ಘಾಟನೆ’ ಮಾಡಿದ್ದು ಡಾ ರಾಜ್ಕುಮಾರ್.
ದಸರಾ ಉದ್ಘಾಟನೆ ಹೇಗೆ ಆರಂಭ ಆಯಿತು:
ಮಾಹಿತಿ ಪ್ರಕಾರ 1993ಕ್ಕೆ ಮುಂಚೆ ದಸರಾ ಉದ್ಘಾಟನೆ ಮಾಡುವ ಸಂಪ್ರದಾಯ ಇರಲಿಲ್ಲ. ಅದಕ್ಕೂ ಮುಂಚೆ ಜಂಬೂ ಸವಾರಿಗೆ ಮುಂಚೆ ಚಿನ್ನದ ಅಂಬಾರಿಗೆ ಮುಖ್ಯ ಮಂತ್ರಿ ಆಗಿದ್ದವರು ಪುಷ್ಪಾರ್ಚನೆ ಮಾಡುವ ಸಂಪ್ರದಾಯ ಇತ್ತು. ಆದರೆ 1993 ರಲ್ಲಿ ನೆರೆಯ ಮಹಾರಾಷ್ಟ್ರದ ಲಾಥೋರ್ನಲ್ಲಿ ಭಾರಿ ಭೂಕಂಪನ ಆಗಿತ್ತು. ಸುಮಾರು 10 ಸಾವಿರ ಜನ ನಿಧನ ಹೊಂದಿದ್ದರು. 10 ಲಕ್ಷ ಜನ ಮನೆ-ಮಠ ಕಳೆದುಕೊಂಡಿದ್ದರು. ನೆರೆ ರಾಜ್ಯದಲ್ಲಿ ವಿಪತ್ತು ಸಂಭಿಸಿದ್ದ ಕಾರಣ ರಾಜ್ಯದಲ್ಲಿ ದಸರಾ ಆಚರಣೆ ಬೇಡ ಎಂಬ ಕೂಗು ಎದ್ದಿತ್ತು.
ಆಗ ಸಿಎಂ ಆಗಿದ್ದವರು ವೀರಪ್ಪ ಮೋಯ್ಲಿ. ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬಂದಿರುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಸರಾ ಅನ್ನು ನಿಲ್ಲಿಸುವುದು ಬೇಡ ಎಂಬ ನಿರ್ಧಾರವನ್ನು ಮಾಡಿದರು. ಅಂತಹ ಇಕ್ಕಟ್ಟಿನ ಪರಿಸ್ಥಿತಿ ಯಲ್ಲಿ ವೀರಪ್ಪ ಮೋಯ್ಲಿ ಅವರು ಡಾ ರಾಜ್ಕುಮಾರ ಅವರನ್ನು ದಸರಾ ಉದ್ಘಾಟನೆಗೆಂದು ಆಹ್ವಾನಿಸಿದರು. ಆಗ ರಾಜ್ಕುಮಾರ್ ಅವರ ಆಗಮನದಿಂದ ದಸರಾ ಆಚರಣೆಗೆ ಇದ್ದ ವಿರೋಧ ಶಾಂತವಾಯಿತು. ಸುಸೂತ್ರವಾಗಿ ಹಿಂದಿಗಿಂತಲೂ ಅದ್ಧೂರಿಯಾಗಿ ದಸರಾ ಆಚರಣೆ ನಡೆಯಿತು. ಹೀಗೆ ರಾಜ್ಕುಮಾರ್ ಉದ್ಘಾಟನೆ ಮಾಡಿದ ಬಳಿಕ, ಪ್ರತಿವರ್ಷವೂ ಯಾರನ್ನಾದರೂ ಗಣ್ಯರನ್ನು, ಸಾಹಿತಿಗಳನ್ನು ಕರೆಸಿ ದಸರಾ ಉದ್ಘಾಟಿಸುವ ಸಂಪ್ರದಾಯ ಆರಂಭವಾಯ್ತು ಎನ್ನಲಾಗಿದೆ.
Comments are closed.