KRS Dam: ಕೆಆರ್‌ಎಸ್ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ – ನದಿ ಪಾತ್ರದಲ್ಲಿ ಪ್ರವಾಹ ಭೀತಿ

KRS Dam: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಸಂಜೆ ವೇಳೆಗೆ ಜಲಾಶಯದಿಂದ 41 ಗೇಟ್‌ಗಳಿಂದ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಪ್ರವಾಹದ ಭೀತಿ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಕೆಆರ್ ಎಸ್ ಜಲಾಶಯಕ್ಕೆ 30 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಒಳ ಹರಿವಿದೆ. ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾ ಗುವ ಸಾಧ್ಯತೆ ಇರುವುದರಿಂದ ಜಲಾಶಯ ದಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವೂ ಇನ್ನಷ್ಟು ಹೆಚ್ಚಾಗಲಿದೆ.
ಸೋಮವಾರ ಬೆಳಗ್ಗೆ 9 ಗಂಟೆಗೆ ಜಲಾಶಯಕ್ಕೆ ಒಳಹರಿವು 33,052 ಕ್ಯುಸೆಕ್ ಇದ್ದು, ಜಲಾಶಯದ ನೀರಿನ ಮಟ್ಟ 124.54 ಅಡಿ (ಗರಿಷ್ಟ ಮಟ್ಟ;124.80 ಅಡಿ). ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನದಿಗೆ 31,550 ಕ್ಯುಸೆಕ್ ನೀರು ಬಿಡಲಾಗುತ್ತಿತ್ತು. ಆದರೆ 11 ಗಂಟೆ ನಂತರ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು. ಸಂಜೆ 4 ಗಂಟೆ ವೇಳೆಗೆ ಜಲಾಶಯಕ್ಕೆ 82,259 ಕ್ಯುಸೆಕ್ ಒಳಹರಿವಿತ್ತು. ಹಾಗಾಗಿ ಜಲಾಶಯದ 41 ಕ್ರೆಸ್ಟ್ ಗೇಟ್ ಗಳಿಂದ 1.20 ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ಬಿಡುಗಡೆ ಮಾಡಿದ್ದು, ನದಿ ತಟದಲ್ಲಿ ಭೋರ್ಗರೆತ ಕಂಡುಬಂದಿದೆ.
ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗುತ್ತಲೇ ಇರುವ ಕಾರಣ ಜಲಾಶಯದಿಂದ ಇನ್ನಷ್ಟು ನೀರು ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಕಾವೇರಿಜಲಾನಯನ ಪ್ರದೇಶದ ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸೋಮವಾರ ರಾತ್ರಿ ವೇಳೆಗೆ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂರನೇ ಬಾರಿ ಭರ್ತಿ: ಈ ಬಾರಿ ಮಾನ್ಸೂನ್ ನಲ್ಲಿ ಉತ್ತಮ ಆರಂಭ ಕಂಡಿದ್ದು, ವ್ಯಾಪಕ ಮಳೆ ಯಾದ ಹಿನ್ನೆಲೆಯಲ್ಲಿ ಹಳೆ ಮೈಸೂರು ಪ್ರಾಂತ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೆಆರ್‌ಎಸ್ ಜಲಾಶಯ 96 ವರ್ಷದ ಬಳಿಕ ಜೂನ್ ಕೊನೆ ವಾರದಲ್ಲೇ ಭರ್ತಿಯಾಗಿತ್ತು. ಜೂ.30ರಂದು ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ಆ ನಂತರವೂ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದ ರಿಂದ ಜಲಾಶಯದಿಂದ 50ರಿಂದ 30 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿತ್ತು.
Indian Railways: ರೈಲು ಹಳಿಗಳ ನಡುವೆ ಸ್ಥಾಪಿಸಲಾದ ಭಾರತದ ಮೊದಲ ಸೌರ ಫಲಕ ವ್ಯವಸ್ಥೆ
Comments are closed.