Drugs: ಮೈಸೂರಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆ ಪ್ರಕರಣ – ಓರ್ವ ಸ್ಥಳೀಯ, ಮೂವರು ದಂಧೆಕೋರರ ಬಂಧನ – ಶೆಡ್ನಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆ

Share the Article

Drugs: ಸಾಂಸ್ಕೃತಿಕ ನಗರಿ ಮೈಸೂರನ್ನು ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿತು. ಮಾಡಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಪೊಲೀಸರು ಮೈಸೂರು ನಗರ ಪೊಲೀಸರ ಸಹಕಾರದೊಂದಿಗೆ ಶನಿವಾರ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಗ್ಯಾರೇಜ್‌ವೊಂದರಲ್ಲಿ ಅಪಾರ ಪ್ರಮಾಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡು, ಓರ್ವ ಸ್ಥಳೀಯ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.

ಮೈಸೂರಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಅವರು ನರಸಿಂಹರಾಜ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಅವರನ್ನು ಅಮಾನತುಪಡಿಸಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ಶಬೀ‌ರ್ ಹುಸೇನ್‌ ಅವರಿಗೆ ಎನ್.ಆರ್.ಠಾಣೆಯ ಉಸ್ತುವಾರಿ ಯನ್ನು ಹೆಚ್ಚುವರಿಯಾಗಿ ನೀಡಿ, ಆದೇಶ ಹೊರಡಿಸಿದ್ದಾರೆ.

ವಿವರ: ಡ್ರಗ್ಸ್ ದಂಧೆಕೋರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಕಳೆದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ಅಪಾರ ಪ್ರಮಾಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಕೆಲವರು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

ಅವರಲ್ಲಿ ಓರ್ವ ಕಳೆದ ಮೂರು ದಿನದ ಹಿಂದೆ ಮಹಾ ರಾಷ್ಟ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತ ಈವರೆವಿಗೂ ಎಲ್ಲಿ ತಲೆಮರೆಸಿಕೊಂಡಿದ್ದ ಹಾಗೂ ಎಲ್ಲಿ ವ್ಯವಹಾರ ಮಾಡುತ್ತಿದ್ದ ಎಂಬುದರ ಬಗ್ಗೆ ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ ವೇಳೆ ಆತ ಈವರೆವಿಗೂ ಮೈಸೂರಿನಲ್ಲೇ ಇದ್ದನೆಂಬುದು ಮಾತ್ರವಲ್ಲದೆ, ಮೈಸೂರಿನಲ್ಲಿ ಆತನ ಮೂವರು ಸಹಚರರು ಶೆಲ್ಪರ್ ಪಡೆದುಕೊಂಡಿದ್ದು, ಇಲ್ಲಿಂದಲೇ ಬೆಂಗಳೂರು ಸೇರಿದಂತೆ ಕೆಲವು ರಾಜ್ಯಗಳ ನಗರಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬ ವಿವರ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಆಗಮಿಸಿ, ತಮ್ಮ ವಶದಲ್ಲಿದ್ದ ಆರೋಪಿ ಮೂಲಕ ಸ್ಥಳವನ್ನು ಪತ್ತೆಹಚ್ಚಿ, ಮೈಸೂರು ಪೊಲೀಸರ ಸಹಕಾರದೊಂದಿಗೆ ಶನಿವಾರ ಸಂಜೆ ಕಾವೇರಿ ನಗರ ರೈಲ್ವೆ ಕೆಳಸೇತುವೆ ದಾಟಿದ ನಂತರ ಸಿಗುವ ರಿಂಗ್ ರಸ್ತೆಯ ಸರ್ವೀಸ್ ರಸ್ತೆ ಫುಟ್ಪಾತ್ ಮೇಲೆ ನಿರ್ಮಿಸಲಾಗಿದ್ದ ಶೆಡ್‌ ಗೆ ಲಗ್ಗೆ ಇಟ್ಟಿದ್ದಾರೆ. ಆ ಸಂದರ್ಭದಲ್ಲಿ ಶೆಡ್‌ನಲ್ಲಿದ್ದ ಗುಜರಾತ್‌ನ ಓರ್ವ ಹಾಗೂ ಮುಂಬೈನ ಇಬ್ಬರನ್ನು ವಶಕ್ಕೆ ಪಡೆದು ಶೋಧನಾ ಕಾರ್ಯ ನಡೆಸಿದಾಗ ಶೆಡ್‌ ನಲ್ಲಿ 15 ಕೆಜಿ ಎಂಡಿಎಂಎ ಪೌಡರ್ ಮತ್ತು ಬ್ಯಾರಲ್ ವೊಂದರಲ್ಲಿ ಸುಮಾರು 20 ಕೆಜಿಯಷ್ಟು ಎಂಡಿಎಂಎ ದ್ರವ ವಸ್ತು ಸಿಕ್ಕಿಬಿದ್ದಿದೆ.

ಶೆಡ್‌ನ ಮಾಲೀಕ ಮೈಸೂರಿನ ಅಜ್ಜಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ, ಡ್ರಗ್ಸ್ ಬಗ್ಗೆ ತನಗೇನು ತಿಳಿಯದು, ಹೆಚ್ಚಿನ ಬಾಡಿಗೆ ಸಿಗುತ್ತದೆ ಎಂದು ಇವರಿಗೆ ಶೆಡ್ ಅನ್ನು ಬಾಡಿಗೆಗೆ ಕೊಟ್ಟಿದ್ದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ ಪೊಲೀಸರು ಶೆಡ್ ಮಾಲೀಕ ಅಜ್ವಲ್ ಸೇರಿದಂತೆ ನಾಲ್ವರನ್ನು ಬಂಧಿಸಿ, ಕರೆದೊಯ್ದಿದ್ದಾರೆ.

ಈ ದಂಧೆಕೋರರು ವಿದೇಶದಿಂದ ಎಂಡಿಎಂಎ ಸೇರಿದಂತೆ ಹಲವು ಡ್ರಗ್ಸ್ಗಳನ್ನು ಮುಂಬೈಗೆ ತರಿಸಿಕೊಂಡು ದೇಶಾದ್ಯಂತ ತಮ್ಮ ಪೆಟ್ಲರ್‌ಗಳ ಮೂಲಕ ಬಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ದಂಧೆಕೋ ರರು ಯಾವುದೇ ನಗರದಲ್ಲೂ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿರಲಿಲ್ಲ. ತಾವು ದೊಡ್ಡ ದೊಡ್ಡ ನಗರಗಳ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲು ಅನುಕೂಲವಾಗುವಂತೆ ಯಾವು ದಾದರೂ ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆ ಸ್ಥಳದಲ್ಲಿ ಡ್ರಗ್ಸ್ ಸಂಗ್ರಹಿಸಿ ಇಡುತ್ತಿದ್ದರು. ನಂತರ ಅಲ್ಲಿಂದ ಬೇರೆ ಬೇರೆ ನಗರಗಳಿಗೆ ತಮ್ಮ ಬೋಕರ್‌ಗಳ ಮೂಲಕ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದ್ದರು. ಇವರು ಡ್ರಗ್ಸ್ ಸಂಗ್ರಹಿಸಿಟ್ಟಿರುವ ಸ್ಥಳವನ್ನು ಬೋಕರ್‌ಗಳಿಗೂ ತಿಳಿಯದಂತೆ ರಹಸ್ಯ ವಾಗಿಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಮೈಸೂರು ಪೊಲೀಸರು ಅಲರ್ಟ್:

ಡ್ರಗ್ಸ್ ದಂಧೆಕೋರರು ಬಾರೀ ಪ್ರಮಾಣದ ಡ್ರಗ್ಸ್ನೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ದಂಧೆಕೋರರಿಗೆ ಶೆಡ್ ಅನ್ನು ಅಜ್ಜಲ್ ಬಾಡಿಗೆಗೆ ನೀಡಿದ್ದ ಎಂಬುದು ಮಾತ್ರ ಸದ್ಯಕ್ಕೆ ತಿಳಿದುಬಂದಿದೆ. ಆದರೆ, ಮಹಾ ರಾಷ್ಟ್ರ ದಂಧೆಕೋರರಿಗೆ ಮೈಸೂರಿನ ಸಂಪರ್ಕ ಸಿಕ್ಕಿದ್ದು ಹೇಗೆ?, ಡ್ರಗ್ಸ್ ದಂಧೆಕೋರರ ಮತ್ತೊಂದು ತಂಡ ಇಲ್ಲಿ ಕಾರ್ಯನಿರ್ವ ಹಿಸುತ್ತಿದೆಯೇ?, ಸ್ಥಳೀಯವಾಗಿ ಯಾರೆಲ್ಲಾ ದಂಧೆಕೋರರಿಗೆ ಸಹಕಾರ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೈಸೂರು ಅದೆಷ್ಟು ಸುರಕ್ಷಿತ?; ವಿಚಾರವಾದಿಗಳು, ನಿವೃತ್ತರ ಆತಂಕ

ಅತ್ಯಾಕರ್ಷಣೀಯ ಪ್ರವಾಸ ಕೇಂದ್ರ, ನಿವೃತ್ತರ ಸ್ವರ್ಗ ಎಂದೆಲ್ಲಾ ಪ್ರಸಿದ್ದಿಯಾಗಿರುವ ಮೈಸೂರು, ಆಗಂತು ಕರ ದುಷ್ಕೃತ್ಯಗಳಿಗೆ ಸುರಕ್ಷಿತ ತಾಣವಾಗು ತಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಯಾವಾಗಲೂ ಜನಸಂಚಾರವಿರುವ ರಿಂಗ್ ರಸ್ತೆಯಲ್ಲೇ ಕೋಟ್ಯಾಂತರ ಮೌಲ್ಯದ ಅಪಾರ ಪ್ರಮಾಣದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಪೊಲೀಸರ ದಾಳಿ ವೇಳೆ ಈ ಆಪಾಯಕಾರಿ ಚಟುವಟಿಕೆ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎನ್ನುವುದು ಕಳವಳ ಕಾರಿಯಾಗಿದೆ.

ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡುವವರನ್ನು ಆಗಾಗ ಬಂಧಿಸುವ ಪೊಲೀಸರಿಗೆ ಈ ದುಷ್ಕೃತ್ಯದ ಬಗ್ಗೆ ಏಕೆ ತಿಳಿಯಲಿಲ್ಲ. ಹೆದ್ದಾರಿ ಗಸ್ತು ಹಾಗೂ ಗುಪ್ತ ಚರ ಪೊಲೀಸರಿಗೂ ಇದರ ಸುಳಿವಿರಲಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಅಷ್ಟಕ್ಕೂ ಮೈಸೂರು ನಗರದಲ್ಲಿ ಇಂತಹ ಆತಂಕ ಕಾರಿ ಸನ್ನಿವೇಶ ಸೃಷ್ಟಿಯಾಗಿರುವುದು ಇದೇ ಮೊದಲೇನಲ್ಲ. 2006ರ ಅಕ್ಟೋಬರ್‌ನಲ್ಲಿ ವಿಕಾಸಸೌಧದ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಇಬ್ಬರು ಪಾಕಿಸ್ತಾನಿ ಉಗ್ರರು ಮೈಸೂರಲ್ಲಿ ಅಡಗಿದ್ದರು. ಸುಮಾರು 25 ವರ್ಷದ ಫಹಾದ್ ಹಾಗೂ ಅಲಿ ಹುಸೇನ್ ಎಂಬ ಉಗ್ರರನ್ನು ವಿಜಯ ನಗರದಲ್ಲಿ ಸೆರೆ ಹಿಡಿಯಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇವರು ಪೊಲೀಸರು ತಡೆದರೂ ನಿಲ್ಲಿಸದೆ ಅವರತ್ತ ಗುಂಡು ಹಾರಿಸಿ, ಪರಾರಿಯಾಗುವಾಗ ಗುಂಡಿನ ಪ್ರತಿದಾಳಿ ನಡೆಸಿ ಬಂಧಿಸಲಾಗಿತ್ತು ಇಬ್ಬರೂ ಜಮ್ಮು-ಕಾಶ್ಮೀರದಲ್ಲಿ ಸಕ್ರಿಯ ವಾಗಿದ್ದ ಅಲ್-ಬದರ್ ಫೌಂಡೇಶನ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎನ್ನಲಾಗಿತ್ತು ಓರ್ವ ಸ್ಫೋಟಕ ತಯಾರಿಸು ವಲ್ಲಿ ತರಬೇತಿ ಹೊಂದಿದ್ದ ಎಂದು ಹೇಳಲಾ ಗಿತ್ತು ಇವರಿಬ್ಬರೂ ಇನ್ನೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: Puttur: ಮಂಗಳೂರು – ಬೆಂಗಳೂರು : ಪ್ರಯಾಣಿಕರ ಅನೂಕೂಲಕ್ಕಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ್ ಬಸ್ ಆರಂಭ

Comments are closed.