Crime: ವರ್ಕ ಫ್ರೆಂ ಹೋಮ್ ನೆಪದಲ್ಲಿ ವಂಚನೆ: ಆರೋಪಿ ಅರೆಸ್ಟ್

Crime: ಜಾಬ್ ಆ್ಯಪ್‌ವೊಂದರಲ್ಲಿ ಬಂದಿದ್ದ ವರ್ಕ್ ಪ್ರಂ ಹೋಂ ಜಾಹೀರಾತು ನಂಬಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಎರಡು ಲಕ್ಷಕ್ಕೂ ಅಧಿಕ ಮೊತ್ತದ ಹಣ ಕಳೆದುಕೊಂಡಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ.

ನಾಲ್ಕೂರು ಗ್ರಾಮದ ರಮೇಶ ನಾಯ್ಕ ಎಂಬವರು ಮೋಸ ಹೋದವರು. ಇವರು ಡಿಸೆಂಬರ್ 2024 ರಲ್ಲಿ ಲೋಕಲ್ ಜಾಬ್ ಅಪ್ಲಿಕೇಶನ್‌ನಲ್ಲಿ ಸನ್‌ಶೈನ್ ಹೆಚ್.ಆರ್ ಸೊಲ್ಯುಷನ್ ಎಂಬ ಹೆಸರಿನ ಕಂಪೆನಿಯಿಂದ ನೀಡಿದ ಜಾಹಿರಾತಿನಂತೆ ಡಾಟಾ ಎಂಟ್ರಿ ಬಗ್ಗೆ ವರ್ಕ ಫ್ರೆಂ ಹೋಮ್‌ಗೆ ಅರ್ಜಿ ಸಲ್ಲಿಸಿದ್ದರು.
ಕಂಪನಿಯ ಹೆಸರಿನಲ್ಲಿ ವಿವಿಧ ಸಂಖ್ಯೆಗಳಿಂದ ಮತ್ತು ವಾಟ್ಸಪ್ ಮುಖಾಂತರ ಅಪರಿಚಿತರು ಗೂಗಲ್ ಪೇ, ಫೋನ್ ಪೇ ಮೂಲಕ ಸೆಕ್ಯುರಿಟಿ ಡೆಪೋಸಿಟ್, ಅಕೌಂಟ್ ಕ್ರಿಯೇಷನ್, ಎರರ್ ಮೋಡಿಫೈ ಎಂಬಿತ್ಯಾದಿ ಸಮಸ್ಯೆಯಾಗಿರುವುದಾಗಿ ನಂಬಿಸಿ ರಮೇಶ್ ಅವರ ಖಾತೆಯಿಂದ ಒಟ್ಟು 2,02,046 ರೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಯ ಬಗ್ಗೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷಾ ಪ್ರಿಯಂವದಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ರವರ ನೇತೃತ್ವದಲ್ಲಿ ತನಿಖಾ ತಂಡವು ಬೆಂಗಳೂರಿಗೆ ತೆರಳಿ ಆರೋಪಿ ಶ್ರೀಧರ್‌ನನ್ನು ವಶಕ್ಕೆ ಪಡೆದು, ಆತ ಕೃತ್ಯಕ್ಕೆ ಬಳಸಿದ್ದ ಸುಮಾರು 10,000 ರೂ. ಮೌಲ್ಯದ ಮೊಬೈಲ್ ಫೋನ್, 3 ವಿವಿಧ ಬ್ಯಾಂಕಿನ ಎ.ಟಿ.ಎಮ್ ಕಾರ್ಡ್ ಗಳು, ನಗದು 1,74,960 ಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬ್ಯಾಂಕ್ ಖಾತೆಯಲ್ಲಿದ್ದ 27,086ರೂ. ಮೊತ್ತವನ್ನು ಫ್ರೀಜ್ ಮಾಡಲಾಗಿದೆ. ವಿಚಾರಣಾ ಪ್ರಕ್ರಿಯೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Comments are closed.