

Elephant: ಆನೆ ಮಾನವ ಸಂಘರ್ಷ ಕೊಡಗಿನಲ್ಲಿ ನಿತ್ಯ ನಿರಂತರ. ಇದು ಕೊನೆಗೊಳ್ಳುವ ರೀತಿ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಮಿತಿರುತ್ತಿದೆ. ನಿನ್ನೆ ರಾತ್ರಿ ಎರಡು ಬೇರೆ ಬೇರೆ ಜಾಗದಲ್ಲಿ ಆನೆಗಳು ಪ್ರತ್ಯಕ್ಷಗೊಂಡು ಅತ್ತ ಓಡಾಡುವ ಜನರಿಗೆ ಆತಂಕ ಹುಟ್ಟಿಸಿದೆ.
ಗುರುವಾರ ರಾತ್ರಿ 10.20ರ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಮೆಟ್ನಳ್ಳ ಇಳಿಜಾರಿನಲ್ಲಿ ಕಾಡಾನೆಯೊಂದು ಕಾಡಿನಿಂದ ಹೊರಬಂದು ಹೆದ್ದಾರಿಯ ನಡುವೆ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆ ಮಧ್ಯದಲ್ಲಿ ಕಾಡಾನೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ನಿಂತಿರುವುದನ್ನು ಕಂಡು ಗಾಬರಿಯಾಗಿ ಒಳದಾರಿಯೊಳಗೆ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ . ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರೊಂದರ ಡ್ಯಾಷ್ ಕ್ಯಾಮರದಲ್ಲಿ ಕಾಡಾನೆ ಸೆರೆಯಾಗಿದ್ದು, ಇತ್ತ ಸಾಗುವ ವಾಹನಗಳ ಚಾಲಕರು ಎಚ್ಚರವಹಿಸಬೇಕಾಗಿದೆ.
ಇನ್ನು ಚಂಬೆಬೆಳ್ಳುರು ಸಮೀಪದ ಪೂದಕೋಟೆ ಗ್ರಾಮದಲ್ಲಿ ನಿರಂತರವಾಗಿ ಆನೆ ಹಾವಳಿ ಮಿತಿಮೀರಿದೆ. ನಿನ್ನೆ ರಾತ್ರಿ ಕೊಳವಂಡ ಮಂದಪ್ಪ ಎಂಬುವವರ ಗೇಟ್ ಅನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಕೊಡಗಿನಲ್ಲಿ ಒಂದಲ್ಲ ಒಂದು ಭಾಗದಲ್ಲಿ ಪ್ರತಿದಿನ ಆನೆ ಗ್ರಾಮಕ್ಕೆ ನುಗ್ಗಿ ಬೆಲೆನಷ್ಟ ಸೇರಿದಂತೆ, ಕೆಲವೊಮ್ಮೆ ಪ್ರಾಣ ಹಾನಿಗು ಕಾರಣವಾಗುತ್ತಿದೆ. ಜನಪ್ರತಿನಿಧಿಗಳು ಶಾಶ್ವತ ಪರಿಹಾರ ನೀಡುವ ಭರವಸೆ ಎರಡು ದಶಕಗಳಿಂದಲೂ ನೀಡುತ್ತಾ ಬರುತ್ತಿದ್ದರು ಈ ಸಂಬಂಧ ಇದುವರೆಗೂ ಕೂಡ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ.













