Rahul Gandhi: ಮಾಜಿ ಮಿಸ್ ಇಂಡಿಯಾ ಪಟ್ಟಿಯಲ್ಲಿ ದಲಿತ, ಆದಿವಾಸಿ ಮಹಿಳೆಯರಿಲ್ಲ- ರಾಹುಲ್ ಗಾಂಧಿ ಹೇಳಿಕೆ
Rahul Gandhi: ಪ್ರಯಾಗರಾಜ್: ಮಾಜಿ ಮಿಸ್ ಇಂಡಿಯಾದ ಪಟ್ಟಿಯಲ್ಲಿ ವಿಜೇತರಾದವರಲ್ಲಿ ಯಾರು ದಲಿತ, ಬುಡಕಟ್ಟು ಅಥವಾ ಒಬಿಸಿಯ ಮಹಿಳೆಯರಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಇದೀಗ ರಾಷ್ಟ್ರವ್ಯಾಪಿ ಜಾತಿಗಣತಿಗಾಗಿ ಒತ್ತಾಯಿಸುತ್ತಿರುವಂತೆಯೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ‘ಸಂವಿಧಾನ ಸಮ್ಮಾನ್ ಸಮ್ಮೇಳನ’ದ ಸಂದರ್ಭದಲ್ಲಿ ಗಾಂಧಿಯವರು ಈ ಹೇಳಿಕೆ ನೀಡಿದ್ದಾರೆ.
“ಬಾಲಿವುಡ್ ನಲ್ಲಿ ಚಮ್ಮಾರ ಅಥವಾ ಪ್ಲಂಬರ್ ನ್ನು ಯಾರೂ ಕೂಡಾ ತೋರಿಸುವುದಿಲ್ಲ. ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ, ಅದರಲ್ಲಿ ದಲಿತ, ಆದಿವಾಸಿ (ಬುಡಕಟ್ಟು) ಅಥವಾ ಒಬಿಸಿ ಮಹಿಳೆಯರೇ ಇರಲಿಲ್ಲ. ಶೇಕಡಾ 90 ರಷ್ಟು ಜನರು ಭಾಗವಹಿಸದಿರುವಾಗ ಕೆಲವರು ಕ್ರಿಕೆಟ್ ಬಗ್ಗೆ ಮಾತನಾಡುತ್ತಾರೆಯೇ?ಎಂದು ಅವರು ಪ್ರಶ್ನಿಸಿದ್ದಾರೆ.
ಈ ದೇಶದ ಜನಸಂಖ್ಯೆಯಲ್ಲಿ ಶೇಕಡಾ 90ರಷ್ಟಿರುವ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಜನರ ಭಾಗವಹಿಸುವಿಕೆಯಿಲ್ಲದೆ ದೇಶ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂದರ್ಭ ದೇಶದ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮಾಧ್ಯಮದ ಉನ್ನತ ಆ್ಯಂಕರ್‌ಗಳಲ್ಲಿಯೂ ಯಾರೂ ದಲಿತ, ಆದಿವಾಸಿ ಮಹಿಳೆಯರಿಲ್ಲ. ಮೋದಿಜಿ ಯಾರನ್ನೇ ಅಪ್ಪಿಕೊಂಡರೂ ನಾವು ಸೂಪರ್ ಪವರ್ ಆಗಿದ್ದೇವೆ ಎಂದು ಹೇಳುತ್ತಾರೆ. ನಾವು ಹೇಗೆ ಸೂಪರ್ ಪವರ್ ಆಗಿದ್ದೇವೆ ಎಂದು ಪ್ರಶ್ನಿಸಿದರು.
ಜಾತಿ ಗಣತಿ ಬೇಡಿಕೆ ಮೂಲಕ ನಾನು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರಬಹುದೆಂದು ಬಿಜೆಪಿಯವರು ಹೇಳಬಹುದು. ಆದರೆ ಈಗ ಎಷ್ಟು ಸಂಸ್ಥೆಗಳಲ್ಲಿ, ಕಾರ್ಪೋರೇಟರ್ ವಲಯದಲ್ಲಿ, ಬಾಲಿವುಡ್ ನಲ್ಲಿ, ಮಿಸ್ ಇಂಡಿಯಾ ವಿಜೇತರಲ್ಲಿ ದಲಿತ, ಆದಿವಾಸಿ, ಒಬಿಸಿಯವರು ಇದ್ದಾರೆ ? ಅವರಿಲ್ಲ ಎಂದು ನಾನು ಮಾತ್ರ ಹೇಳಬಲ್ಲೆ, ಇದನ್ನು ಪರಿಶೀಲಿಸಬೇಕು ಎಂದು ರಾಹುಲ್ ಹೇಳಿದ್ದಾರೆ.