Alternate Leader: ಕಾಂಗ್ರೆಸ್‌ನಲ್ಲಿ ಪರ್ಯಾಯ ನಾಯಕನಿಗಾಗಿ ಹುಡುಕಾಟ!? ಯಾರಿಗೆ ಒಲಿಯಲಿದೆ ಸಿಎಂ ಗದ್ದುಗೆ??

Alternate Leader: ಮುಡಾ ಹಗರಣಕ್ಕೆ(MUDA Scam) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah) ಅವರಿಗೆ ಬೆಂಬಲವಾಗಿ ನಿಲ್ಲುವ ಸಂಬಂಧ ಕಾಂಗ್ರೆಸ್(Congress) ವರಿಷ್ಠರು ಅಭಯ ನೀಡಿದ್ದಾರಾದರೂ ಪರ್ಯಾಯ ನಾಯಕತ್ವದ ಅನ್ವೇಷಣೆಯಲ್ಲೂ ತೊಡಗಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಅವರಿಗೆ ಕಾನೂನು ಕುಣಿಕೆ ಬಿಗಿಗೊಂಡು, ಪಕ್ಷ ಮುಜುಗರ ಎದುರಿಸುವಂತಾದಲ್ಲಿ ನಾಯಕತ್ವ ಬದಲಾವಣೆ ಮಾಡುವ ನಿಟ್ಟಿನಲ್ಲಿ ಮುಂದಾದರೂ ಅಚ್ಚರಿ ಇಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣ ಕುರಿತಂತೆ ರಾಜ್ಯ ಹೈಕೋರ್ಟ್(High court) ಈ ತಿಂಗಳ 29ರಂದು ವಿಚಾರಣೆ ಮುಂದುವರೆಸಲಿದೆ. ನ್ಯಾಯಾಲಯದ ತೀರ್ಪು ಮುಖ್ಯಮಂತ್ರಿಗೆ(CM) ವಿರುದ್ಧವಾಗಿ ಬಂದಲ್ಲಿ ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಪಕ್ಷದ ಶಾಸಕರ ವಿಶ್ವಾಸ ಹೊಂದಿರುವ ಪರ್ಯಾಯ ನಾಯಕನ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್(High command) ಚಿಂತನೆ ನಡೆಸಿದ್ದು, ಗೌಪ್ಯ ಹೆಜ್ಜೆ ಇಡಲಿದೆ.

ಸಿಎಂ ಆಪ್ತಗೇ ಚುಕ್ಕಾಣಿ?:
ನಾಯಕತ್ವ ಬದಲಿಸುವಂತಹ ಸನ್ನಿವೇಶ ನಿರ್ಮಾಣವಾದರೆ, ಸಿದ್ದರಾಮಯ್ಯ ಅವರಿಗೂ ಒಪ್ಪಿಗೆ ಆಗಬಹುದಾದ ವ್ಯಕ್ತಿಯ ಅನ್ವೇಷಣೆ ಮಾಡುವ ಸಿದ್ಧಸೂತ್ರವೊಂದು ರೂಪಿತವಾಗಲಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ಮುನಿಸು ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಆಪ್ತರನ್ನೇ ಪ್ರತಿಷ್ಠಾಪಿಸುವ ಇರಾದೆ ವರಿಷ್ಠರಿಗೆ ಇದ್ದಂತಿದೆ.

ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟರೆ, ಸಿದ್ದರಾಮಯ್ಯ ಬೆಂಬಲಿಗರು ಸಿಡಿದೇಳಬಹುದೆAಬ ಭಯ ಕಾಡಿದೆ. ಅಂತಹ ಸನ್ನಿವೇಶವನ್ನು ಬಿಜೆಪಿ ಮತ್ತು ಜೆಡಿಎಸ್ ತನ್ನ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬಹುದು. ಸರ್ಕಾರಕ್ಕೆ ಎದುರಾಗುವ ಕಂಟಕವನ್ನು ತಪ್ಪಿಸಿಕೊಳ್ಳಬೇಕಿದ್ದರೆ, ಸರ್ವಸಮ್ಮತ ವ್ಯಕ್ತಿಗೆ ಸರ್ಕಾರ ಚುಕ್ಕಾಣಿ ಒಪ್ಪಿಸುವುದು ಸೂಕ್ತ. ಆ ಮಾನದಂಡದಡಿಯೇ ಬದಲಿ ನಾಯಕನ ತಲಾಶ್ ನಡೆಯುತ್ತಿದ್ದು, ಅದರ ಹೊಣೆಯನ್ನು ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಗೆ ವರಿಷ್ಠರು ಒಪ್ಪಿಸಿದ್ದಾರೆ.

ಸಿಎಂ ಪಾಳೆಯದ್ದೇ ಚಿಂತೆ:
ಎಐಸಿಸಿ ವರಿಷ್ಠರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡುವುದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರುಗಳು ಆಂತರಿಕವಾಗಿ ಎಲ್ಲಾ ಕೋನಗಳಿಂದಲೂ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಲ್‌ಪಿ ನಾಯಕರನ್ನಾಗಿ ಮಾಡಿದರೆ, ಅದಕ್ಕೆ ಸಿದ್ದರಾಮಯ್ಯ ಅವರ ಒಪ್ಪಿಗೆಯೂ ಸಿಗಲಿದೆ. ಆಗ ಸರ್ಕಾರ ಭದ್ರವಾಗಿರುತ್ತದೆ ಎಂಬ ಆಲೋಚನೆಯೂ ಹೈಕಮಾಂಡ್‌ಗೆ ಇದೆ. ಆದರೆ, ಖರ್ಗೆ ಅವರು ಕೇಂದ್ರದಲ್ಲಿ ಈಗಿರುವ ಉನ್ನತ
ಹುದ್ದೆಗಳನ್ನು ಬಿಟ್ಟು ರಾಜ್ಯ ರಾಜಕಾರಣಕ್ಕೆ ಹಿಂತಿರುಗಲು ಸುತಾರಾಂ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.

ಪರಂ ಜತೆ ಪ್ರತ್ಯೇಕ ಚರ್ಚೆ:
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಷ್ಟೇ ಅಲ್ಲದೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನೂ ವರಿಷ್ಠರು ನಿನ್ನೆ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ಶಾಸಕರು ಮುಖ್ಯಮಂತ್ರಿ ಅವರ ಜೊತೆ ದೆಹಲಿಗೆ ತೆರಳಿದ್ದರಾದರೂ ಅವರಿಗೆ ವರಿಷ್ಠರ ಆಹ್ವಾನವೇ ಇರಲಿಲ್ಲ ಎನ್ನುವುದು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ಮಾಡುವಾಗ ಡಾ.ಪರಮೇಶ್ವರ್ ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ಆ ಮಾತುಕತೆಗೆ ಹೊರಗಿಟ್ಟಿದ್ದ ವರಿಷ್ಠರು ನಂತರ ಪರಮೇಶ್ವರ್ ಜತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಇದು, ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸಿದ್ದರಾಮಯ್ಯ ಬದಲಾವಣೆ ಅನಿವಾರ್ಯವಾಗಿದ್ದೇ ಆದಲ್ಲಿ ಪರಮೇಶ್ವರ್ ಹೆಸರು ಮುಂಚೂಣಿಗೆ ನಿಲ್ಲುವುದು ಗ್ಯಾರಂಟಿ ಎನ್ನುವ ವಾತಾವರಣ ನಿರ್ಮಾಣವಾಗಿದೆ.

Leave A Reply

Your email address will not be published.