Gangavati: ಹನುಮ ಜನ್ಮಭೂಮಿ ಅಂಜನಾದ್ರಿಯಲ್ಲಿ ಬಿಲ್ಲು, ಬಾಣ ಗುರುತಿರುವ ವಿದ್ಯುತ್ ಕಂಬಗಳ ಅಳವಡಿಕೆ – ಕೋಮು ಸೌಹಾರ್ದತೆ ಕದಡುತ್ತೆ ಎಂದ SDPI !!

Gangavati: ಹನುಮ ಜನ್ಮಭೂಮಿ, ಕರ್ನಾಟಕದ ಹೆಮ್ಮೆ ಅಂಜನಾದ್ರಿಯಲ್ಲಿ ಅಯೋಧ್ಯೆ, ತಿರುಪತಿಯಲ್ಲಿರುವಂತೆ ಬಿಲ್ಲು, ಬಾಣ ಗುರುತಿರುವ ವಿದ್ಯುತ್ ಕಂಬಗಳ ಅಳವಡಿಕೆ ಮಾಡಲಾಗಿದೆ. ಇದನ್ನು SDPI ತೀವ್ರವಾಗಿ ಖಂಡಿಸಿದ್ದು, ಕೋಮು ಸೌಹಾರ್ದತೆ ಕದಡುತ್ತೆ ಎಂದು ಹೇಳಿದೆ.

ಹೌದು, ಗಂಗಾವತಿ (Gangavathi) ನಗರದ ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಜುಲೈ ನಗರದವರೆಗೂ ತಿರುಪತಿ, ಅಯೋಧ್ಯೆಯಲ್ಲಿರುವಂತೆ (Ayodhya) ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅಯೋಧ್ಯೆ, ತಿರುಪತಿಯ ಮಾದರಿಯಲ್ಲಿ ಗಂಗಾವತಿ ಅಂಜನಾದ್ರಿ (Anjanadri Betta) ಅಭಿವೃದ್ಧಿ ಆಗಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಆದರೆ ಅದೇ ಮಾದರಿಯಲ್ಲಿ ನಗರದ ಬೀದಿ ದೀಪದ ಕಂಬ ಅಳವಡಿಕೆಗೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?
ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರದಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳನ್ನು ಈಗ ಅಳವಡಿಸಲಾಗುತ್ತಿದೆ. ನಗರದ ಸೌಂದರ್ಯ ಹೆಚ್ಚಿಸಲು ಹಾಕಿರುವ ಈ ದೀಪದ ಕಂಬಗಳ ವಿಚಾರದಲ್ಲಿ ಸದ್ಯ ಎಸ್‌ಡಿಪಿಐ ಖ್ಯಾತೆ ತೆಗೆದಿದ್ದು, ಜನಾರ್ದನ ರೆಡ್ಡಿ ತೀರ್ಮಾನದ ವಿರುದ್ಧ ಗಂಗಾವತಿ ನಗರಸಭೆ ಕಮಿಷನರ್‌ಗೆ ಮನವಿ ಮಾಡಿದೆ.

SDPI ಹೇಳಿದ್ದೇನು?
ಗಂಗಾವತಿ ನಗರದಲ್ಲಿ ಜುಲೈನಗರ ಸರ್ಕಲ್ ನಿಂದ ಹಿಡಿದು ಇಸ್ಲಾಂಪೂರ್ ಸರ್ಕಲ್ ವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಅದರಲ್ಲಿ ಗಧೆ, ಬಿಲ್ಲುಬಾಣ, ಹಾಗೂ ತಿರುಪತಿ ವೆಂಕಟಸ್ವಾಮಿಯ ಸಂಕೇತವಿದಿದ್ದು, ಒಂದೇ ಧರ್ಮದ ಸಂಕೇತ ಇದರಲ್ಲಿ ಇರುವುದರಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ. ಗಂಗಾವತಿ ನಗರವು ಈಗಾಗಲೇ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಹಲವು ಬಾರಿ ಸಣ್ಣ ಸಣ್ಣ ವಿಚಾರಕ್ಕೆ ನಗರದಲ್ಲಿ ಗಲಭೆಗಳು ಉಂಟಾಗಿವೆ, ಆದುದ್ದರಿಂದ ಇಂತಹ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವ ವಿದ್ಯುತ್ ದೀಪಗಳನ್ನು ತೆರವುಗೊಳಿಸುವ ಆದೇಶ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಒಂದು ವೇಳೆ ತೆರುವುಗೊಳಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಏನಾದರೂ ಸಮಸ್ಯೆವುಂಟಾದರೆ ನಗರಾಡಳಿತ ಇಲಾಖೆಯೇ ನೇರ ಹೊಣೆಯಾಗಿರುತ್ತೆ ಎಂದು ಹೇಳಿದೆ.

ಹಿಂದೂ ಮುಖಂಡರು ಹೇಳುವುದೇನು?
ಗಂಗಾವತಿಯಿಂದ 12 ಕಿಲೋ ಮೀಟರ್ ದೂರದಲ್ಲಿ ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದವರೆಗೂ ಇದೆ ಮಾದರಿಯಲ್ಲಿ ಬೀದಿ ದೀಪಗಳು ಅಳವಡಿಕೆ ಮಾಡಲಾಗುತ್ತಿದೆ. ಇಲ್ಲಿಗೆ ಲಕ್ಷಾಂತರ ಹನುಮ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಂತಹ ಪ್ರವಾಸಿ ಸ್ಥಳದಲ್ಲಿ, ಬೀದಿ ದೀಪಗಳು ಸುಂದರವಾಗಿ ಕಾಣಲಿ ಎಂಬ ಉದ್ದೇಶಕ್ಕೆ ಹಾಕಲಾಗಿದೆ. ಇದರಲ್ಲಿ ಕೋಮು ಸೌಹಾರ್ದತೆ ಕದಡುವ ಅಂಶ ಏನಿದೆ ಎಂದು ಹಿಂದೂ ಮುಖಂಡರು ಪ್ರಶ್ನಿಸಿದ್ದಾರೆ

Leave A Reply

Your email address will not be published.