

Sullia: ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮತದಾರ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾದ ಘಟನೆಯೊಂದು ಜೂ.5 ರಂದು ಪಂಜದಲ್ಲಿ ನಡೆದಿದೆ.
ಪಂಜದಲ್ಲಿ ಅಂಗಡಿ ವ್ಯವಹಾರ ನಡೆಸುತ್ತಿರುವ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಕುರಿತು , ಕಾಂಗ್ರೆಸ್ ಮತದಾರರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದಾರೆಂಬ ಆರೋಪದಲ್ಲಿ ಇದನ್ನು ಗಮನಿಸಿದ ಕಾಂಗ್ರೆಸ್ ಮುಖಂಡರು ಇವರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಆರೋಪಿತ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದು, ಈ ಸಂದರ್ಭದಲ್ಲಿ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದು, ಕ್ಷಮೆ ಯಾಚಿಸಿದ್ದು, ನಂತರ ಠಾಣೆ ಹೊರಗೆ ಇತ್ತಂಡದವರು ಮಾತುಕತೆ ನಡೆಸಿದ್ದರು.
ಈ ವೇಳೆ ಆರೋಪಿತ ವ್ಯಕ್ತಿ ಕೇಸ್ ಹಿಂಪಡೆಯುವಂತೆ ವಿನಂತಿ ಮಾಡಿದ್ದು, ಮೂರು ದಿನಗಳ ಕಾಲ ಅಂಗಡಿ ಮುಚ್ಚಬೇಕೆಂಬ ದೂರು ನೀಡಿದ ತಂಡ ಷರತ್ತು ವಿಧಿಸಿತ್ತು. ಇದಕ್ಕೆ ಸಮ್ಮತಿ ಸೂಚಿಸಿದ ವ್ಯಕ್ತಿ, ನಂತರ ಪ್ರಕರಣ ಹಿಂತೆಗೆಯಲಾಗಿತ್ತು.
ಹಾಗಾಗಿ ಜೂ.6 ರಂದು ವ್ಯಕ್ತಿ ತನ್ನ ಅಂಗಡಿ ತೆರೆದಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಮುಖಂಡರು, ಅಂಗಡಿ ಮಾಲಕರನ್ನು ಸಂಪರ್ಕ ಮಾಡಿ ಅಂಗಡಿ ತೆರೆಯುವಂತೆ ಸೂಚಿಸಿದ್ದರು. ಅದರಂತೆ ವ್ಯಕ್ತಿ ಅಂಗಡಿ ತೆರೆದಿದ್ದು, ಅವಹೇಳನಕಾರಿ ಸ್ಟೇಟಸ್ ಹಾಕಿದ್ದಕ್ಕೆ ತಪ್ಪೊಪ್ಪಿಕೊಂಡಿದ್ದು, ಅಂಗಡಿ ಬಂದ್ ಮಾಡುತ್ತೇನೆ ಎಂದು ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿಲ್ಲ . ಕಾಂಗ್ರೆಸ್‌ನವರು ಹೇಳುತ್ತಾರೆಂದು ಅಂಗಡಿ ಮುಚ್ಚಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.













